ಮತ್ತೆ ಒಂದಾದ ಅಚ್ಯುತ್​ ಕುಮಾರ್​, ಸುಧಾರಾಣಿ ; ‘ಫೈರ್​ ಫ್ಲೈ‘ನಲ್ಲಿ ನಾಯಕನ ತಂದೆ-ತಾಯಿ ಪಾತ್ರದಲ್ಲಿ ನಟನೆ

1
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಫೈರ್ ಫ್ಲೈ ಸಿನಿಮಾ ತಾರಾಬಳಗದ ಮೂಲಕವೇ ಸುದ್ದಿಯಾಗುತ್ತಿದೆ. ಕಳೆದ ವಾರವಷ್ಟೇ ಸುಧಾರಾಣಿ ಚಿತ್ರತಂಡ ಸೇರಿಕೊಂಡಿದ್ದರು. ಇದೀಗ ಹಿರಿಯ ನಟ ಅಚ್ಯುತ್ ಕುಮಾರ್ ಫೈರ್ ಫ್ಲೈನಲ್ಲಿ ಅಭಿನಯಿಸುತ್ತಿರುವ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಅಚ್ಯುತ್ ಕುಮಾರ್ ಇಲ್ಲಿ ನಾಯಕನ ತಂದೆ ಪಾತ್ರ ನಿಭಾಯಿಸಲಿದ್ದಾರೆ. ಅವರಿಗೆ ಜೋಡಿಯಾಗಿ ಸುಧಾರಾಣಿ ಸಾಥ್ ಕೊಡುತ್ತಿದ್ದಾರೆ.‌ ಈ ಹಿಂದೆ ‘ತ್ರಿಕೋನ‘, ‘ತುರ್ತು ನಿರ್ಗಮನ‘, ‘ಯುವ‘ ಸೇರಿ ಕೆಲವು ಚಿತ್ರಗಳಲ್ಲಿ ಅಚ್ಯುತ್​ ಮತ್ತು ಸುಧಾರಾಣಿ ಒಟ್ಟಿಗೆ ನಟಿಸಿದ್ದರು.

ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಅಚ್ಯುತ್ ಕುಮಾರ್, "ನಾನು ಹೀರೋ ತಂದೆಯ ಪಾತ್ರ ಮಾಡುತ್ತಿದ್ದೇನೆ.ಪಾತ್ರ ತುಂಬಾ ಇಂಟ್ರೆಸ್ಟಿಂಗ್ ಆಗಿದೆ. ಒಬ್ಬ ತಂದೆ ಮಗನ ಬಾಂಧವ್ಯ ಮತ್ತು ಅವರಿಬ್ಬರು ಫ್ರೆಂಡ್ಸ್ ಆಗಿದ್ರೆ ಹೇಗೆ ಮಜವಾಗಿರುತ್ತೆ ಅಂತ ಈ ಸಿನೆಮಾದಲ್ಲಿ ನೋಡಬಹುದು. ನನ್ನ ಕೋಸ್ಟಾರ್ ಆಗಿ ಸುಧಾರಾಣಿಯವರು ನಟಿಸುತ್ತಿದ್ದಾರೆ. ಮುಂಚೆ ನಾವು ಬೇರೆ ಸಿನೆಮಾಗಳಲ್ಲಿ ನಮ್ಮ ಜೋಡಿಯನ್ನು ನೋಡಿ ಜನ ಮೆಚ್ಚಿದ್ದರು. ಆದ್ರೆ ಈ ಸಿನೆಮಾದಲ್ಲಿ ನಮ್ಮಿಬ್ಬರ ಜೋಡಿ ಹಿಂದಿನ ಸಿನೆಮಾಗಳಿಗಿಂತ ವಿಭಿನ್ನವಾಗಿರುತ್ತದೆ. ಅದನ್ನು ನೀವು ಸ್ಕ್ರೀನ್ ಮೇಲೆ ನೋಡಬೇಕು. ಫೈರ್ ಫ್ಲೈ ತುಂಬಾ ಕಲರ್ ಫುಲ್ ಆಗಿ ಮೂಡಿ ಬಂದಿದೆ ಮತ್ತು ತುಂಬಾ ಮನರಂಜನೆಯಿಂದ ಕೂಡಿದೆ" ಎಂದು ಹೇಳಿಕೊಂಡಿದ್ದಾರೆ. 'ಫೈರ್ ಫ್ಲೈ’ ಸಿನಿಮಾದಲ್ಲಿ ವಂಶಿ ಹೀರೋ ಆಗಿ ಅಭಿನಯಿಸುತ್ತಿದ್ದಾರೆ. ಅಲ್ಲದೇ, ಅವರೇ ನಿರ್ದೇಶನ ಕೂಡ ಮಾಡುತ್ತಿದ್ದಾರೆ. ‘ಹ್ಯಾಟ್ರಿಕ್​ ಹೀರೋ’ ಶಿವರಾಜ್​ಕುಮಾರ್​ ಅವರ ಪುತ್ರಿ ನಿವೇದಿತಾ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.

'ಫೈರ್ ಫ್ಲೈ’ ಸಿನಿಮಾಗೆ ಪಾತ್ರವರ್ಗದ ಮೂಲಕ ಗಮನ ಸೆಳೆಯುತ್ತಿದೆ. ಇತ್ತೀಚೆಗೆ ನಟಿ ಶೀತಲ್ ಶೆಟ್ಟಿ, ನಟ ಮೂಗು ಸುರೇಶ್, ಸುಧಾರಾಣಿ ಚಿತ್ರತಂಡ ಸೇರಿಕೊಂಡಿದ್ದರು. ಈಗ ಅಚ್ಯುತ್ ಕುಮಾರ್ ಎಂಟ್ರಿ ಕೊಟ್ಟಿದ್ದಾರೆ. ಉಳಿದಂತೆ ಚಿತ್ರಕ್ಕೆ ಅಭಿಲಾಷ್ ಕಳತ್ತಿ ಛಾಯಾಗ್ರಹಣ, ಚರಣ್ ರಾಜ್ ಸಂಗೀತ ನಿರ್ದೇಶನ, ರಘು ನಿಡುವಳ್ಳಿ ಸಂಭಾಷಣೆ ಈ ಸಿನಿಮಾಗಿದೆ. ಬೆಳಕಿನ ಹಬ್ಬ ದೀಪಾವಳಿಗೆ ಫೈರ್ ಫ್ಲೈ ಸಿನಿಮಾ ಥಿಯೇಟರ್ ಬೆಳಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net