ನಮ್ಮಪ್ಪನನ್ನು ಮೀರಿಸೋಕೆ ಸಾಧ್ಯವಿಲ್ಲ ಎಂದು ಅಭಿಷೇಕ್ ಹೇಳಿದ್ದೇಕೆ?

Abhishek Bachchan - Final
Published on

ಮುಂಬೈ: ಸಾಮಾನ್ಯವಾಗಿ ಸೋಷಿಯಲ್​ ಮೀಡಿಯಾದಲ್ಲಿ ಅಭಿಷೇಕ್​ ಬಚ್ಚನ್​ ಅವರ ಕಾಲೆಳೆಯುವವರೇ ಹೆಚ್ಚು. ಜನ ಅಭಿಷೇಕ್​ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ ಮತ್ತು ಅಭಿಷೇಕ್​ ಸಹ ಅದನ್ನು ಸ್ಪೋರ್ಟಿವ್​ ಆಗಿ ಸ್ವೀಕರಿಸುವುದರ ಜತೆಗೆ, ಆ ಎಲ್ಲ ಮಾತುಗಳಿಗೆ ತಮ್ಮದೇ ರೀತಿಯಲ್ಲಿ ಉತ್ತರ ಕೊಡುತ್ತಿರುತ್ತಾರೆ.

ಬಹಳ ಅಪರೂಪಕ್ಕೆ, ಅಭಿಷೇಕ್​ ಬಚ್ಚನ್​ ಅವರನ್ನು ಮೆಚ್ಚಿಕೊಂಡು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ನಿತಿನ್​ ಮಂಚಂದಾ ಎನ್ನುವವರು, ಸೋಷಿಯಲ್​ ಮೀಡಿಯಾದಲ್ಲಿ ಅಭಿಷೇಕ್​ ಅವರನ್ನು ಮೆಚ್ಚಿಕೊಂಡು ಪೋಸ್ಟ್​ ಹಾಕುವುದರ ಜತೆಗೆ ಅವರನ್ನು ಟ್ಯಾಗ್​ ಮಾಡಿದ್ದಾರೆ.

ಇತ್ತೀಚೆಗೆ ಬಿಗ್​ಬುಲ್ ನೋಡಿದೆ. ನಟನೆಯ ವಿಷಯಕ್ಕೆ ಬಂದರೆ, ನೀವು ನಿಮ್ಮಪ್ಪನಿಗಿಂತ ಸೂಪರ್​. ಸದಾ ಚೆನ್ನಾಗಿರಿ ಗುರು ಭಾಯ್​ ಎಂದು ಅಭಿಷೇಕ್​ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ.  ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಭಿಷೇಕ್​, ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ಆದರೆ, ಅಭಿನಯದ ವಿಷಯಕ್ಕೆ ಬಂದರೆ ನಮ್ಮಪ್ಪನನ್ನು ಮೀರಿಸುವುದಕ್ಕೆ ಸಾಧ್ಯವೇ ಇಲ್ಲ ಎಂದು ಹೇಳಿಕೊಂಡಿದ್ದಾರೆ.

ಅಭಿಷೇಕ್​ ಅವರ ಈ ಮಾತುಗಳಿಗೆ ಪ್ರತಿಕ್ರಿಯೆ ನೀಡಿರುವ ಅವರ ಅಭಿಮಾನಿಗಳು, ಇದಕ್ಕಿಂತ ಇನ್ನೇನು ಬೇಕು, ಇದಕ್ಕಿಂತ ಇನ್ನೊಂದು ಅದ್ಭುತವಾದ ಕಾಂಪ್ಲಿಮೆಂಟ್​ ಸಿಗುವುದಕ್ಕೆ ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಇನ್ನೂ ಕೆಲವರು, ಅಮಿತಾಭ್​ ಬಚ್ಚನ್​ ಅವರನ್ನು ಅಭಿನಯದ ವಿಷಯದಲ್ಲಿ ಮೀರಿಸುವುದಕ್ಕೆ ಸಾಧ್ಯವೇ ಇಲ್ಲ ಎಂಬುದು ಗೊತ್ತಿದೆ. ಆದರೆ, ನೀವು ಸಹ ನಿಮ್ಮ ತಂದೆಯ ಹಾದಿಯಲ್ಲಿ ನಡೆಯುತ್ತಿರುವ ವಿಷಯ ಬಹಳ ಖುಷಿಕೊಟ್ಟಿದೆ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ.

ಬಿಗ್​ಬುಲ್​ ಚಿತ್ರವು ಏಪ್ರಿಲ್​ನಲ್ಲಿ ಓಟಿಟಿಯಲ್ಲಿ ಬಿಡುಗಡೆಯಾಗಿತ್ತು. ಅಜಯ್​ ದೇವಗನ್​ ನಿರ್ಮಾಣದ ಈ ಚಿತ್ರವನ್ನು ಕೂಕಿ ಗುಲಾಟಿ ನಿರ್ದೇಶನ ಮಾಡಿದ್ದರು. ಈ ಚಿತ್ರದ ನಂತರ ದಸ್ವಿ ಎಂಬ ಚಿತ್ರದಲ್ಲಿ ಅಭಿಷೇಕ್​ ನಟಿಸುತ್ತಿದ್ದು, ಆ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net