

ಕರೊನಾ ಸೋಂಕಿಗೆ ಒಳಗಾಗಿರುವ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರು ಸದ್ಯ ಕ್ವಾರಂಟೈನ್ನಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುಮಲತಾ ಅವರು ಜುಲೈ 6ರಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುವ ಮೂಲಕ ತಮಗೆ ಕರೊನಾ ಸೋಂಕು ತಗುಲಿದ್ದನ್ನು ಹೇಳಿಕೊಂಡಿದ್ದರು. ಹಾಗೇ, ಮನೆಯಲ್ಲೇ ಕ್ವಾರಂಟೈನ್ ಆಗಿ, ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುತ್ತಿರುವುದಾಗಿಯೂ ತಿಳಿಸಿದ್ದರು.
ಇದೀಗ ಅವರ ಪುತ್ರ ಅಭಿಷೇಕ್ ಅಂಬರೀಷ್ ಅವರು ತನ್ನ ಅಮ್ಮ ಕ್ವಾರಂಟೈನ್ನಲ್ಲಿರುವ ಫೋಟೋವನ್ನು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಕಿದ್ದಾರೆ. ಮಮ್ಮಿ ಡಿಸ್ಟನ್ಸಿಂಗ್ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನಾನೀಗ ಚೆನ್ನಾಗಿದ್ದೇನೆ ಮತ್ತು ಸುರಕ್ಷಿತವಾಗಿದ್ದೇನೆ; ಜಯಶ್ರೀ ರಾಮಯ್ಯ
ನನ್ನ ಅಮ್ಮ ಚೇತರಿಸಿಕೊಳ್ಳುತ್ತಿದ್ದಾರೆ. ದೇವರ ದಯೆಯಿಂದ ಶೀಘ್ರದಲ್ಲೇ ಸಂಪೂರ್ಣವಾಗಿ ಗುಣಮುಖರಾಗಲಿದ್ದಾರೆ. ಹಾಗೇ, ನನ್ನ ತಾಯಿಯ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಕೃತಜ್ಞತೆಗಳು ಎಂದು ಅಭಿ ತಿಳಿಸಿದ್ದಾರೆ.
ಕೊವಿಡ್-19 ಯಾರಿಗೆ ಬೇಕಾದರೂ ಬರಬಹುದು. ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ದಯವಿಟ್ಟು ಎಲ್ಲರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ನಿಯಮಗಳನ್ನು ಸರಿಯಾಗಿ ಪಾಲಿಸಿ. ಸ್ಯಾನಿಟೈಸರ್ ಬಳಕೆ ಮಾಡಿ..ಆಗಾಗ ಕೈ ತೊಳೆಯುತ್ತಿರಿ ಎಂದು ಸಲಹೆ ನೀಡಿದ್ದಾರೆ. (ಏಜೆನ್ಸೀಸ್)