

ವಿಜಯವಾಣಿ ಸುದ್ದಿಜಾಲ ಬೆಂಗಳೂರು
‘ಕಿರಿಕ್ ಪಾರ್ಟಿ’ಯಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ನಾಗೇಂದ್ರ ಗಾಣಿಗ ಮೊದಲ ಬಾರಿಗೆ ಆ್ಯಕ್ಷನ್-ಕಟ್ ಹೇಳಿರುವ ಚಿತ್ರ ‘ಅಭಿರಾಮಚಂದ್ರ’. ಇದೇ ಅ. 6ರಂದು ಸಿನಿಮಾ ಬಿಡುಗಡೆಯಾಗಲಿದ್ದು, ಇತ್ತೀಚೆಗಷ್ಟೆ ಟ್ರೇಲರ್ ರಿಲೀಸ್ ಮಾಡಲಾಯಿತು. ಪ್ರಮೋದ್ ಶೆಟ್ಟಿ ಮತ್ತು ದೀಕ್ಷಿತ್ ಶೆಟ್ಟಿ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಾಶಯ ತಿಳಿಸಿದರು. ಬಾಲ್ಯದ ಸ್ನೇಹ, ಪ್ರೀತಿ ಹಾಗೂ ತ್ರಿಕೋನ ಪ್ರೇಮ ಕಥಾಹಂದರವಿರುವ ಚಿತ್ರವಿದು.
ಮೊದಲ ಬಾರಿಗೆ ಆ್ಯಕ್ಷನ್-ಕಟ್ ಹೇಳಿರುವ ನಾಗೇಂದ್ರ ಗಾಣಿಗ, ‘ಇಡೀ ತಂಡ ನನಗೆ ತುಂಬಾ ಸಪೋರ್ಟ್ ಮಾಡಿದರು. ಬಾಂಧವ್ಯ ಪ್ರೀತಿಗೋಸ್ಕರ ಸಿನಿಮಾ ಮಾಡಿದ್ದೇವೆ. ಸಿನಿಮಾ ಚೆನ್ನಾಗಿ ಬಂದಿದೆ. ಅದ್ಭುತ ಅಲ್ಲದೇ ಹೋದರೂ, ನೋಡಿದವರು ಚೆನ್ನಾಗಿಲ್ಲ ಅನ್ನಲ್ಲ’ ಎಂದು ಭರವಸೆ ವ್ಯಕ್ತಪಡಿಸಿದರು. ನಟ ರಥ ಕಿರಣ್, ‘ನನ್ನನ್ನು ಚಿತ್ರರಂಗದಲ್ಲಿ ಲಾಂಚ್ ಮಾಡಿದ್ದು ಅಪ್ಪು ಸರ್. ಈ ಚಿತ್ರಕ್ಕೆ ಆರಂಭದಿಂದ ಇಲ್ಲಿಯವರೆಗೂ ಬೆನ್ನೆಲುಬಾಗಿ ನಿಂತವರು ರವಿ ಬಸ್ರೂರ್. ಅವರು ಈ ಚಿತ್ರಕ್ಕೆ ಹಣ ಹಾಕಿದ್ದಾರೆ. ಸಂಗೀತ ನೀಡಿದ್ದಾರೆ. ನಾನು ಅಭಿ ಎಂಬ ಪಾತ್ರ ಮಾಡಿದ್ದೇನೆ. ನನ್ನ ಬಾಲ್ಯದ ಪಾತ್ರವನ್ನು ರವಿ ಬಸ್ರೂರ್ ಮಗ ಮಾಡಿದ್ದಾರೆ’ ಎಂದು ಮಾಹಿತಿ ನೀಡಿದರು.
ನಾಟ್ಯರಂಗ, ‘ನಾನು ಚಂದ್ರ ಪಾತ್ರ ಮಾಡಿದ್ದೇನೆ. ನಾಗೇಂದ್ರ ಹಳೆ ಪರಿಚಯ. ನನ್ನನ್ನು ಹತ್ತಿರದಿಂದ ನೋಡಿರುವುದರಿಂದ ನನ್ನ ಗುಣಲಕ್ಷಣಗಳ ಪಾತ್ರವನ್ನು ನೀಡಿದ್ದಾರೆ. ಮಜವಾದ ಕ್ಯಾರೆಕ್ಟರ್’ ಎಂದರು. ನಾಯಕಿ ಶಿವಾನಿ ರೈ, ‘ಇದು ನನ್ನ ಮೊದಲ ಸಿನಿಮಾ. ನಾನು ಮಂಡ್ಯ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ತ್ರಿಕೋನ ಪ್ರೇಮ ಕಥೆಯಿದು’ ಎಂದರು. ಉಳಿದಂತೆ ವೀಣಾ ಸುಂದರ್, ಸುಂದರ್, ಎಸ್. ನಾರಾಯಣ್, ಪ್ರಕಾಶ್ ತುಮ್ಮಿನಾಡು, ಪವನ್ ಪ್ರಮುಖ ಪಾತ್ರಗಳಲ್ಲಿದ್ದಾರೆ.