ಯಾವುದೋ ದಾರಿಯಲ್ಲಿ ಅಭಿಮನ್ಯು; ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಸನ್​ ಆಫ್​ ಕಾಶೀನಾಥ್​

asdv
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ನಟ, ನಿರ್ದೇಶಕ ಕಾಶೀನಾಥ್​ ಪುತ್ರ ಅಭಿಮನ್ಯು ಕಾಶೀನಾಥ್​ ಕಮ್​ಬ್ಯಾಕ್​ ಮಾಡುತ್ತಿರುವ ಸಿನಿಮಾ "ಎಲ್ಲಿಗೆ ಪಯಣ ಯಾವುದೋ ದಾರಿ'. ಕಿರಣ್​ ಸೂರ್ಯ ನಿರ್ದೇಶನದ ಈ ಸಿನಿಮಾ ಇಂದು ತೆರೆಗೆ ಬರಲಿದೆ. "ಬಾಜಿ' ಮತ್ತು "12 ಎಎಂ ಮಧ್ಯರಾತ್ರಿ' ಚಿತ್ರಗಳ ಬಳಿಕ ಸುದೀರ್ಘ 12 ವರ್ಷಗಳ ನಂತರ ಅಭಿ ಮತ್ತೆ ವಾಪಸ್ಸಾಗಿರುವುದು ಈ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಿಸಿದೆ. ಚಿತ್ರರಂಗದಿಂದ ದೂರವಿದ್ದಿದ್ದು ಯಾಕೆ? ಕಮ್​ಬ್ಯಾಕ್​ ಹೇಗಾಯಿತು? ಜತೆಗೆ ಮುಂದಿನ ಯೋಜನೆಗಳ ಬಗ್ಗೆ ಅಭಿಮನ್ಯು ವಿಜಯವಾಣಿ ಜತೆ ಮುಕ್ತವಾಗಿ ಮಾತನಾಡಿದ್ದಾರೆ.

ದೂರವಿರಲು ಕಾರಣ...

ಸುದೀರ್ ಗ್ಯಾಪ್​ ಬಗ್ಗೆ ಸ್ಪಷ್ಟನೆ ನೀಡುವ ಅಭಿಮನ್ಯು, "ಅಪ್ಪ ಹುಷಾರಿಲ್ಲದ ಕಾರಣ ಅವರ ಚಿಕಿತ್ಸೆಗಾಗಿ ನಾನು ಮತ್ತು ಚಿಕ್ಕಪ್ಪ ಇಬ್ಬರೂ ಓಡಾಡುತ್ತಿದ್ದೆವು. ಮೂರು ವರ್ಷಗಳ ಕಾಲ ಅವರ ಜತೆಗಿದ್ದೆ. "12 ಎಎಂ ಮಧ್ಯರಾತ್ರಿ' ಚಿತ್ರದಲ್ಲಿ ಅವರ ಜತೆ ನಟಿಸಿದ್ದೆ. ಅವರ ನಿರ್ದೇಶನದಲ್ಲಿ ನಟಿಸಲು ಸಾಧ್ಯವಾಗಿರಲಿಲ್ಲ. ಅಪ್ಪ ನನಗಾಗಿ ಎರಡು ಕಥೆ ಕೂಡ ಪ್ಲಾ$್ಯನ್​ ಮಾಡಿಕೊಂಡಿದ್ದರು. ಆದರೆ, ಮೊದಲು ಬೇರೆ ತಂಡಗಳ ಜತೆ ಕೆಲಸ ಮಾಡಿ ಅನುಭವ ಪಡೆಯಲು ತಿಳಿಸುತ್ತಿದ್ದರು. ಜೀವನದಲ್ಲಿ ನಾನೇನೇ ಕಲಿತಿದ್ದರೂ, ಅವರಿಂದಲೇ. ನನಗೆ ಮೊದಲ ಗೆಳೆಯ, ಸ್ಪೂರ್ತಿ, ಶಿಕ್ಷಕ ಎಲ್ಲವೂ ಅವರೇ' ಎನ್ನುತ್ತಾರೆ.

ಕಮ್​ಬ್ಯಾಕ್​ಗೆ ಸಿದ್ಧತೆ

ಕೆಲ ವರ್ಷಗಳ ಹಿಂದೆ ಮತ್ತೆ ಚಿತ್ರರಂಗಕ್ಕೆ ಬರಬೇಕು ಅಂತನ್ನಿಸಿ, ಅಭಿಮನ್ಯು ಸಿದ್ಧತೆ ಪ್ರಾರಂಭಿಸಿದರಂತೆ. ಅದೇ ಸಮಯದಲ್ಲಿ "ವೀಕೆಂಡ್​ ವಿತ್​ ರಮೇಶ್​' ಕಾರ್ಯಕ್ರಮದಲ್ಲಿ ಕಾಶೀನಾಥ್​ ಅತಿಥಿಯಾಗಿ ಹೋಗಿದ್ದ ಸಂಚಿಕೆ ನೋಡಿದ ಕಿರಣ್​, ಅಭಿಯನ್ನು ಸಂಪರ್ಕಿಸಿದರಂತೆ. "ಟಿವಿಯಲ್ಲಿ ನನ್ನನ್ನು ನೋಡಿ ಅಮರ್​ ಪಾತ್ರಕ್ಕೆ ಹೊಂದುತ್ತೇನೆ ಅಂತ ಅಪ್ರೋಚ್​ ಮಾಡಿದರು. ನೆಗಟಿವ್​ ಮತ್ತು ಪಾಸಿಟಿವ್​, ಎರಡು ಶೇಡ್​ಗಳಿರುವ ಪಾತ್ರ. ಮತ್ತೆ ಚಿತ್ರರಂಗಕ್ಕೆ ಬರಬೇಕು ಅಂತ ನಾನು ವರ್ಕೌಟ್​ ಮಾಡಿ ಬಾಡಿ ಮಾಡಿಕೊಂಡಿದ್ದೆ. ಆದರೆ, ಈ ಪಾತ್ರಕ್ಕೆ ತೂಕ ಇಳಿಸಿಕೊಳ್ಳಲು ತಿಳಿಸಿದರು. ಎರಡು ತಿಂಗಳಲ್ಲಿ ಆರೇಳು ಕೆಜಿ ತೂಕ ಇಳಿಸಿಕೊಂಡೆ. ಆರು ತಿಂಗಳು ಗಡ್ಡ ಬಿಟ್ಟೆ' ಎಂದು ಮಾಹಿತಿ ನೀಡುತ್ತಾರೆ ಅಭಿ.

ಅಣ್ಣಾವ್ರ ಹಾಡಿನ ಸಾಲಿನ ಚಿತ್ರ

ಡಾ. ರಾಜಕುಮಾರ್​ ಅಭಿನಯದ 1972ರ "ಸಿಪಾಯಿ ರಾಮು' ಚಿತ್ರದ ಹಾಡು "ಎಲ್ಲಿಗೆ ಪಯಣ ಯಾವುದೋ ದಾರಿ'. ಆ ಸಾಲನ್ನೇ ಚಿತ್ರದ ಶೀರ್ಷಿಕೆ ಮಾಡಿಕೊಂಡಿರುವುದರ ಬಗ್ಗೆ ಅಭಿ, "ಟೈಟಲ್​ ಉದ್ದ ಅಂತ ನನಗೂ ಅನ್ನಿಸಿತು. ಕಿರುಶೀರ್ಷಿಕೆ ಇದ್ದರೆ, ಹೇಗೆ ಅಂತ ಕಿರಣ್​ಗೂ ಹೇಳಿದೆ. ಆದರೆ, ಅವರು ಕಥೆ ಹೇಳಿದಾಗ ಇದು ಪ್ರತಿಯೊಬ್ಬರೂ ರಿಲೀಟ್​ ಮಾಡಿಕೊಳ್ಳಬಹುದಾದ ಟೈಟಲ್​ ಅಂತನ್ನಿಸಿತು' ಎನ್ನುತ್ತಾರೆ. ಥ್ರಿಲ್ಲರ್​, ಲವ್​ಸ್ಟೋರಿ, ಕಾಮಿಡಿ, ಹೀಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಜಾನರ್​ ಇಷ್ಟವಾಗುತ್ತದೆ. ಆದರೆ, "ಆ ಎಲ್ಲ ಜಾನರ್​ನ ಅಂಶಗಳೂ ಈ ಚಿತ್ರದಲ್ಲಿದೆ. ಗಂಭೀರ ವಿಷಯದ ಕುರಿತ ಕಂಟೆಂಟ್​ ಚಿತ್ರವಿದು' ಎಂದು ಹೇಳಿಕೊಳ್ಳುತ್ತಾರೆ ಅಭಿ.

ಮುಂದಿನ ಚಿತ್ರಗಳು...

"ಎಲ್ಲಿಗೆ ಪಯಣ...'ದ ಮೂಲಕ ಮರುಪಯಣ ಆರಂಭಿಸಿರುವ ಅಭಿ ಅದರ ಜತೆಗೆ "ಸೂರಿ ಲವ್ಸ್​ ಸಂಧ್ಯಾ' ಚಿತ್ರದಲ್ಲೂ ನಟಿಸಿದ್ದು, ಅದರ ಶೂಟಿಂಗ್​ ಪೂರ್ಣಗೊಂಡಿದೆ. ಹಾಗೇ "ಅಭಿಮನ್ಯು ಸನ್​ ಆಫ್​​ ಕಾಶೀನಾಥ್​' ಎಂಬ ಮತ್ತೊಂದು ಸಿನಿಮಾ ಕೆಲವೇ ದಿನಗಳಲ್ಲಿ ಸೆಟ್ಟೇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net