Nimde Kathe Review; ನಿಮ್ದೆ ವ್ಯಥೆಗಳ ಸುತ್ತ "ನಿಮ್ದೆ ಕಥೆ'

zsc
Published on

ಚಿತ್ರ: ನಿಮ್ದೆ ಕಥೆ

ನಿರ್ದೇಶನ: ರಾಘವೇಂದ್ರ ರಾಜ್​

ತಾರಾಗಣ: ಅಭಿಲಾಷ್​ ದಳಪತಿ, ರಾಶಿಕಾ ಶೆಟ್ಟಿ, ಸಿಹಿಕಹಿ ಚಂದ್ರು, ಮನೋಹರ್​, ರೇಷ್ಮಾ ಮತ್ತಿತರರು.

| ಹರ್ಷವರ್ಧನ್​ ಬ್ಯಾಡನೂರು

ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳ ಬಗ್ಗೆ ಓದುತ್ತಿರುತ್ತೇವೆ. ಲೈಂಗಿಕ ಸಮಸ್ಯೆಗಳಿಂದ ಹೇಳಿಕೊಳ್ಳಲಾಗದೇ, ಬಿಡಲಾಗದೇ ನೊಂದು-ಬೆಂದು ಬದುಕು ಚೆಲ್ಲಿದವರೂ ಇದ್ದಾರೆ. ನೋಟ್​ ಬ್ಯಾನ್​ನಿಂದ ನಷ್ಟ ಅನುಭವಿಸಿದವರು, ಕರೊನಾದಿಂದ ಕೆಲಸ ಕಳೆದುಕೊಂಡವರಿಗೂ ಕಡಿಮೆಯಿಲ್ಲ. ಈ ಸಮಸ್ಯೆಗಳಿಂದ ಸುಖಿ ಕುಟುಂಬಗಳು ಒಡೆದ, ಮಾನಸಿಕ ಖಿನ್ನತೆಗೆ ಒಳಗಾದ, ಸಮಸ್ಯೆ ಎದುರಿಸಲಾಗದೇ ಕಣ್ಮರೆಯಾದವರೂ ಇದ್ದಾರೆ. ಇಂತಹ ಜನಸಾಮಾನ್ಯರ ಹಲವು ಸಮಸ್ಯೆಗಳಿಗೆ ಅಲ್ಲಲ್ಲಿ ಕಾಮಿಡಿ ಸ್ಪರ್ಶ ಕೊಟ್ಟು ನಿರ್ದೇಶಕ ರಾಘವೇಂದ್ರ ರಾಜ್​ "ನಿಮ್ದೆ ಕಥೆ' ನಿರೂಪಿಸಿದ್ದಾರೆ.

ಇನ್ಶೂರೆನ್ಸ್​ ಮ್ಯಾನೇಜರ್​ ವಿಕ್ರಮ್​ದು (ಅಭಿಲಾಷ್​) ಸುಂದರ ಕುಟುಂಬ, ಸುಖಿ ಜೀವನ. ಕಷ್ಟದಲ್ಲಿರುವವರಿಗೆ ತನ್ನ ಕೈಲಾದ ಸಹಾಯ ಮಾಡುತ್ತಾ ಎಲ್ಲರ ಮೆಚ್ಚುಗೆಗೆ ಪಾತ್ರನಾದ ಮಾದರಿ ವ್ಯಕ್ತಿ. ಹೆಂಡತಿ ಕಾವ್ಯ (ರಾಶಿಕಾ), ಮಗ, ಅಪ್ಪ, ಅಮ್ಮನ ಜತೆ ತಾನಾಯಿತು, ತನ್ನ ಕೆಲಸವಾಯಿತು ಅಂತಿರುವ ವಿಕ್ರಮ್​ ಲೈಂಗಿಕ ಸಮಸ್ಯೆಗೆ ಒಳಗಾಗುತ್ತಾನೆ. ಅದನ್ನು "ಕಂಟ್ರೋಲ್​'ಗೆ ತರಲು ಡಾಕ್ಟರ್​ (ಸಿಹಿಕಹಿ ಚಂದ್ರು) ಭೇಟಿಯಾಗುತ್ತಾನೆ. ಆ ಸಮಸ್ಯೆ ಬಗೆಹರಿಸಿಕೊಂಡ ಬೆನ್ನಲ್ಲೇ ವಿಕ್ರಮ್​ ಮತ್ತೊಂದು ಸಂಕಷ್ಟಕ್ಕೆ ಸಿಲುಕುತ್ತಾನೆ. ಹೀಗೆ ಒಂದಾದ ಮೇಲೆ ಒಂದರಂತೆ ಎದುರಾದ ಸಮಸ್ಯೆಗಳು ಆತನ ಕೌಟುಂಬಿಕ ಜೀವನವನ್ನೂ ಅಸ್ತವ್ಯಸ್ತಗೊಳಿಸುತ್ತವೆ. ಹಾಗಾದರೆ ವಿಕ್ರಮ್​ ಎದುರಿಸುತ್ತಿರುವ ಲೈಂಗಿಕ ಸಮಸ್ಯೆ ಏನು? ಜನಮೆಚ್ಚಿದ ವಿಕ್ರಮ್​ ಸಾಲದ ಸುಳಿಗೆ ಹೇಗೆ ಸಿಲುಕುತ್ತಾನೆ? ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಾನಾ? "ನಿಮ್ದೆ ಕಥೆ' ನೋಡಿ.

"ಲವ್​ ಮಾಕ್ಟೇಲ್​' ಸರಣಿಯಲ್ಲಿ ನಾಯಕನ ಗೆಳೆಯನಾಗಿ ಕಾಣಿಸಿಕೊಂಡಿದ್ದ ಅಭಿಲಾಷ್​ ಈ ಚಿತ್ರದಲ್ಲಿ ನಾಯಕನಾಗಿ ಮಿಂಚಿದ್ದಾರೆ. ವಿಕ್ರಮ್​ ಪಾತ್ರವನ್ನು ಹಲವರು ರಿಲೇಟ್​ ಮಾಡಿಕೊಳ್ಳಬಹುದು. ಕಷ್ಟ ಕಾಲದಲ್ಲಿ ಗಂಡನಿಗೆ ಕೈಕೊಡದೇ, ಆತನ ಜತೆಗೆ ನಿಲ್ಲುವ ಕಾವ್ಯ ಪಾತ್ರದಲ್ಲಿ ರಾಶಿಕಾ ಇಷ್ಟವಾಗುತ್ತಾರೆ. ಡಾಕ್ಟರ್​ ಆಗಿ ಸಿಹಿಕಹಿ ಚಂದ್ರು ಪ್ರೇಕ್ಷಕರ ಕಣ್ತೆರೆಸಲು ಪ್ರಯತ್ನಿಸಿದ್ದಾರೆ. ಉಳಿದ ಪಾತ್ರಗಳು ಅಚ್ಚುಕಟ್ಟಾಗಿ ಮೂಡಿಬಂದಿವೆ. 130 ನಿಮಿಷಗಳ ಕಥೆಯಲ್ಲಿ ರಾಘವೇಂದ್ರ ರಾಜ್​ ಹಲವು ವಿಷಯಗಳನ್ನು ಸೇರಿಸಿದ್ದಾರೆ. ಚಿತ್ರಕಥೆ ಇನ್ನಷ್ಟು ಗಟ್ಟಿಯಾಗಿದ್ದರೆ ಪ್ರೇಕ್ಷಕರಿಗೆ ಸಿನಿಮಾ ಮತ್ತಷ್ಟು ಹತ್ತಿರವಾಗುತ್ತಿತ್ತು. ಆದರೂ, ಹೀರೋಯಿಸಂ, ಬಿಲ್ಡಪ್​, ಮಸಾಲಾ, ಮಚ್ಚು-ಲಾಂಗು ಎಲ್ಲದರಿಂದ ಹೊರತಾಗಿ ಕಂಟೆಂಟ್​ ಪ್ರಧಾನ "ನಿಮ್ದೆ ಕಥೆ'ಯನ್ನು ಒಮ್ಮೆ ನೋಡಲಡ್ಡಿಯಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net