College Kalavida ; ಕಾಲೇಜ್​ ಕಲಾವಿದನ ಪ್ರೀತಿ, ಗೀತಿ ಇತ್ಯಾದಿ

asc
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ಕಾಲೇಜು ಕಥೆ ಎಂದರೆ ಅಲ್ಲೊಂದು ಸಿದ್ಧಸೂತ್ರ ಸಾಮಾನ್ಯ. ವಿದ್ಯಾರ್ಥಿಗಳ ಹುಡುಗಾಟ, ತರಲೆ, ಗೆಳೆತನ, ಹದಿಹರೆಯದ ಹೃದಯಗಳ ಪ್ರೀತಿ, ಮನೆಯ ಸಮಸ್ಯೆಗಳು, ಮನದ ತೊಳಲಾಟ, ರ್ಯಾಗಿಂಗ್​... ಹೀಗೆ. ಆದರೆ, ಸಂಜಯ್​ ಮಳವಳ್ಳಿ ನಿರ್ದೇಶನದ "ಕಾಲೇಜ್​ ಕಲಾವಿದ' ಚಿತ್ರದಲ್ಲಿ ಅದೆಲ್ಲವನ್ನೂ ಮೀರಿದ ಅಂಶಗಳಿವೆ. ಕಾಲೇಜು ಅಂಗಳದಲ್ಲಿ ದಿನೇ ದಿನೆ ಹೆಚ್ಚುತ್ತಿರುವ ಡ್ರಗ್ಸ್​ ಪೀಡೆ, ತಾಯಿ-ಮಗ, ತಂದೆ-ಮಗಳ ಬಾಂಧವ್ಯ.. ಹೀಗೆ.

ಆತ ಆರ್ಯ (ಆರವ್​ ಸೂರ್ಯ). ಕಾಲೇಜಿನಲ್ಲಿ ವಿದ್ಯಾರ್ಥಿ. ಜತೆಗೆ ಸ್ಕೆಚ್​ ಆರ್ಟಿಸ್ಟ್​ ಕೂಡ. ಆತನ ಕಾಲೇಜಿಗೆ ಕಾಸರಗೋಡಿನ ಹುಡುಗಿ ಸಾರಿಕಾ (ಚೈತ್ರ) ಬಂದು ಸೇರುತ್ತಾಳೆ. ಆತನಿಗೆ ಆಕೆಯ ಮೇಲೆ ಮನಸಾಗುತ್ತದೆ. ಆಕೆಗೂ ಆತನೆಂದರೆ ಇಷ್ಟ. ಆದರೆ, ಅವರ ಕಾಲೇಜಿನಲ್ಲಿ ಸೀನಿಯರ್​ಗಳ ಗ್ಯಾಂಗ್​ ಒಂದು ಮಾದಕ ವಸ್ತುಗಳ ದಂಧೆ ನಡೆಸುತ್ತಿರುತ್ತದೆ. ಆರ್ಯನೂ ಡ್ರಗ್ಸ್​ ಪೂರೈಸುತ್ತಾನೆ ಎಂದು ಆರೋಪಿಸಿ ಪೊಲೀಸರು ಆತನನ್ನು ಬಂಧಿಸುತ್ತಾರೆ. ಇದರಿಂದ ಆರ್ಯ ಮತ್ತು ಸಾರಿಕಾ ದೂರವಾಗುತ್ತಾರೆ. ಮುಂದೆ? ತನ್ನ ಮೇಲಿನ ಆರೋಪದಿಂದ ಆರ್ಯ ಮುಕ್ತನಾಗುತ್ತಾನಾ? ಮತ್ತೆ ಸಾರಿಕಾ ಪ್ರೀತಿ ಪಡೆಯುತ್ತಾನಾ? ಜೀವನದಲ್ಲಿ ಗೆಲ್ಲುತ್ತಾನಾ? ಎಂಬುದರ ಸುತ್ತ "ಕಾಲೇಜ್​ ಕಲಾವಿದ' ಕಥೆ ಸಾಗುತ್ತದೆ.

ನಿರ್ದೇಶಕ ಸಂಜಯ್​ ಚೊಚ್ಚಲ ಬಾರಿಗೆ ನಿರ್ದೇಶಿಸಿರುವ ಚಿತ್ರವಿದು. ಹಳೆಯ ಸ್ಟೋರಿಲೈನ್​ ಅಂತನ್ನಿಸಿದರೂ, ಡ್ರಗ್ಸ್​, ಸಂಬಂಧಗಳ ಮೌಲ್ಯ, ಲವ್​ಸ್ಟೋರಿಯನ್ನು ಅವರು ತೋರಿಸಿರುವ ರೀತಿ ವಿಭಿನ್ನವಾಗಿದೆ. ಕೆಲವೆಡೆ ಚಿತ್ರಕಥೆ ನಿಧಾನವೆನಿಸಿದರೂ, ತಾಳ್ಮೆ ಕೇಳುತ್ತದೆ. ಆರ್ಯನಾಗಿ ಆರವ್​ ಸೂರ್ಯ ಮಿಂಚಿದ್ದಾರೆ. ಲವಲವಿಕೆಯಿಂದ ಕಥೆಯನ್ನು ನೋಡಿಸಿಕೊಂಡು ಹೋಗುತ್ತಾರೆ. ನಟನೆಯ ಜತೆಗೆ ಫೈಟ್​ಗಳಲ್ಲೂ ಗಮನ ಸೆಳೆಯುತ್ತಾರೆ. ಅವರಿಗೆ ಸರಿಸಮನಾಗಿ ನಿಲ್ಲಲು ನಾಯಕಿ ಚೈತ್ರ ಪ್ರಯತ್ನಿಸಿದ್ದಾರೆ. ನಾಯಕನ ತಾಯಿಯಾಗಿ ಹರಿಣಿ ಶ್ರೀಕಾಂತ್​, ನಾಯಕಿಯ ತಂದೆಯ ಪಾತ್ರದಲ್ಲಿ ರಮೇಶ್​ ಭಟ್​ ಮತ್ತು ಅಣ್ಣನಾಗಿ ತರುಣ್​ ಶರ್ಮಾ ಅಚ್ಚುಕಟ್ಟಾಗಿ ಪಾತ್ರಗಳನ್ನು ನಿಭಾಯಿಸಿದ್ದಾರೆ. ಅಲ್ಲಲ್ಲಿ ಹುಲಿ ಕಾರ್ತಿಕ್​ ನಗಿಸುತ್ತಾರೆ. ಸೂರಜ್​ ಜೋಯಿಸ್​ ಸಂಗೀತ ಮತ್ತು ಆನಂದ್​ ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net