

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಪ್ರೇಕ್ಷಕರು ಥಿಯೇಟರ್ಗೆ ಬರುತ್ತಿಲ್ಲ ಅಂತ ಚಿತ್ರತಂಡಗಳು ದೂರುತ್ತಿವೆ. ಅದರ ನಡುವೆಯೇ ಕೆಲ ಟೀಮ್ಗಳು ಪ್ರೇಕ್ಷಕರನ್ನು ಸೆಳೆಯಲು ಹೊಸ ಹೊಸ ಪ್ರಯತ್ನಗಳನ್ನು ಮಾಡುತ್ತಿವೆ. ಆ ಸಾಲಿಗೆ ಸೇರುವ ಸಿನಿಮಾ "ಆರಾಮ್ ಅರವಿಂದಸ್ವಾಮಿ'. "ನಮ್ ಗಣಿ ಬಿಕಾಂ ಪಾಸ್' ಖ್ಯಾತಿಯ ಅಭಿಷೇಕ್ ಶೆಟ್ಟಿ ಆ್ಯಕ್ಷನ್-ಕಟ್ ಹೇಳುತ್ತಿರುವ, ಅನೀಶ್ ತೇಜೇಶ್ವರ್, ಮಿಲನಾ ನಾಗರಾಜ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಚಿತ್ರವಿದು. ಈಗಾಗಲೇ "ಮುಂದೆ ಹೇಗೋ...', "ಹುಡುಕುತಾ' ಮತ್ತು ಟೈಟಲ್ ಟ್ರಾ$್ಯಕ್ ರಿಲೀಸ್ ಆಗಿದ್ದು, ಜಾಲತಾಣದಲ್ಲಿ ವೈರಲ್ ಆಗಿವೆ.
ಇದೇ ತಿಂಗಳ 22ರಂದು ಸಿನಿಮಾ ರಿಲೀಸ್ ಆಗಲಿದ್ದು, ಚಿತ್ರತಂಡ ಮೊದಲ ಮೂರು ದಿನಗಳ ಕಾಲ ಕೇವಲ 99 ರೂ.ಗೆ ಟಿಕೆಟ್ ನಿಗದಿಪಡಿಸಿದೆ. ವಿಶೇಷ ಅಂದರೆ ಥಿಯೇಟರ್ ಮಾತ್ರವಲ್ಲ, ಮಲ್ಟಿಪ್ಲೆಕ್ಸ್ಗಳಿಗೂ ಈ ಆರ್ ವಿಸ್ತರಿಸುವ ಮೂಲಕ ಹೊಸ ಸಾಹಸಕ್ಕೆ ಕೈ ಹಾಕಿದೆ. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್, ನಿರ್ಮಾಪಕ ಕಮ್ ವಿತರಕ ಜಯಣ್ಣ, ಕಾರ್ತಿಕ್ ಗೌಡ, ಯೋಗಿ ಜಿ. ರಾಜ್, ನಿರ್ದೇಶಕ ತರುಣ್ ಸುಧೀರ್, ನಟ ಯುವರಾಜಕುಮಾರ್ ಸೇರಿ ಹಲವು ತಾರೆಯರು 99 ರೂ. ಕೊಟ್ಟು "ಆರಾಮ್ ಅರವಿಂದಸ್ವಾಮಿ' ಚಿತ್ರದ ಟಿಕೆಟ್ ಖರೀದಿಸಿದ್ದಾರೆ.
ಒಬ್ಬ ವ್ಯಕ್ತಿ ಸಿನಿಮಾ ನೋಡಬೇಕು ಅಂದರೆ 500ರೂ. ಬೇಕು. ನಾಲ್ಕು ಜನರ ಒಂದು ಕುಟುಂಬಕ್ಕೆ ಎರಡು ಸಾವಿರ ರೂ. ಬೇಕು. ಆಂಧ್ರ, ತೆಲಂಗಾಣ, ತಮಿಳುನಾಡಿನಲ್ಲಿ ಟಿಕೆಟ್ ದರ ಕಡಿಮೆಯಿದೆ. ಹೀಗಾಗಿಯೇ ಅಲ್ಲಿ ರಿಲೀಸ್ ಆಗುವ ಸಣ್ಣ, ದೊಡ್ಡ ಚಿತ್ರಗಳನ್ನೂ ಜನ ನೋಡುತ್ತಾರೆ. ಅದೇ ರೀತಿ ಟಿಕೆಟ್ ದರ ಕಡಿಮೆ ಮಾಡಿದರೆ, ಪ್ರೇಕ್ಷಕರು ಬರುತ್ತಾರೆ ಎಂಬ ಭರವಸೆಯಲ್ಲಿ ಮೊದಲ ಮೂರು ದಿನಗಳ ಕಾಲ 99 ರೂ. ಟಿಕೆಟ್ ದರ ನಿಗದಿ ಪಡಿಸಿದ್ದೇವೆ. ಪ್ರೇಕ್ಷಕರ ಕೊರತೆಯಿದೆ ಎನ್ನುವ ಸಂದರ್ಭದಲ್ಲಿ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲೇಬೇಕು. 10 ಜನ ಬರುವ ಜಾಗಕ್ಕೆ 100 ಜನ ಬಂದಾಗ ಅದು ಪ್ಲಸ್ ಆಗುತ್ತದೆ.
-ಅಭಿಷೇಕ್ ಶೆಟ್ಟಿ, ನಿರ್ದೇಶಕ