

ಬೆಂಗಳೂರು: ‘ಹಳ್ಳಿಯ ಬಗ್ಗೆ, ರಾಗಿಯ ಬಗ್ಗೆ ತಾತ್ಸಾರ ಇರುವವರಿಗೆ ‘ಆನೆಬಲ’ ಬೇರೆಯದ್ದೇ ಅನುಭವ ನೀಡುತ್ತದೆ’ ಎಂದು ಅಭಿಪ್ರಾಯ ಪಟ್ಟರು ನಿರ್ಮಾಪಕ ಇ. ಕೃಷ್ಣಪ್ಪ.
‘ಆನೆಬಲ’ ಚಿತ್ರದ ಟ್ರೇಲರ್ ರಿಲೀಸ್ ಮಾಡಿ ಮಾತನಾಡಿದ ಅವರು, ‘ ಮುಂಗಾರು ಮಳೆ’ ಮಾಡಿದಾಗ ನಾನು ಹೊಸಬ, ಜನ ಉತ್ತಮ ಬೆಂಬಲ ನೀಡಿ ದೊಡ್ಡ ಗೆಲುವನ್ನು ತಂದುಕೊಟ್ಟರು. ಈಗ ‘ಆನೆಬಲ’ಕ್ಕೂ ಅಂಥದ್ದೇ ಬೆಂಬಲ ನೀಡಲಿ. ಈ ಚಿತ್ರದ ಟ್ರೇಲರ್ ಮತ್ತು ಹಾಡುಗಳನ್ನು ನೋಡುತ್ತಿದ್ದರೆ ನಮ್ಮ ಹಳ್ಳಿಗಳ ಕಥೆ ಹೇಳಿದ್ದಾರೆ ಅನಿಸುತ್ತದೆ. ಸೂನಗಹಳ್ಳಿ ರಾಜು, ಪಕ್ಕಾ ನಾಟಿ ಶೈಲಿಯಲ್ಲಿ ಸಿನಿಮಾ ಮಾಡಿದ್ದಾರೆ. ಎಲ್ಲರಿಗೂ ಒಳ್ಳೆಯದಾಗಲಿ’ ಎಂದರು.
ನಿರ್ವಪಕ ವೇಣುಗೋಪಾಲ್ ಮಾತನಾಡಿ, ‘ಗ್ರಾಮೀಣ ಸೊಗಡಿನ ಚಿತ್ರ ಮಾಡಬೇಕು ಎಂದು ‘ಆನೆಬಲ’ ಚಿತ್ರವನ್ನು ನಿರ್ವಿುಸಿದ್ದೇನೆ. ಹಾಸ್ಯದ ಜತೆಗೆ ಕಲೆ-ಸಂಸ್ಕೃತಿಯೂ ಚಿತ್ರದಲ್ಲಿದೆ. ಈ ಚಿತ್ರದ ಹಾಡುಗಳನ್ನು ಕೇಳಿದ ಕವಿ ಎಚ್.ಎಸ್.ವೆಂಕಟೇಶಮೂರ್ತಿ ಮೆಚ್ಚುಗೆ ವ್ಯಕ್ತಪಡಿಸಿರುವುದಲ್ಲದೆ ಬಹಳ ದಿನ ಉಳಿಯುತ್ತವೆ ಎಂದಿದ್ದಾರೆ’ ಎಂದರು. ‘ಅಪ್ಪಟ ಮಂಡ್ಯದ ದೇಸಿತನ ಆನೆಬಲದಲ್ಲಿದೆ, ಇದು ನನ್ನ ಊರಿನ ಚಿತ್ರವಾದ್ದರಿಂದ ನನಗೆ ಬಹಳ ಹತ್ತಿರದ ಸಿನಿಮಾ’ ಎಂದು ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಸಂತಸ ವ್ಯಕ್ತಪಡಿಸಿದರು. ಈ ಚಿತ್ರದ ಮೂಲಕ ಕಲಾನಿರ್ದೇಶಕ ಈಶ್ವರಿ ಕುಮಾರ್ ಅವರ ಪುತ್ರ ಸಾಗರ್ ಚಿತ್ರರಂಗಕ್ಕೆ ನಾಯಕರಾಗಿ ಎಂಟ್ರಿ ಆಗಿದ್ದಾರೆ. ತಮ್ಮ ಮೊದಲ ಸಿನಿಮಾದ ಬಗ್ಗೆ ಮಾತನಾಡಿದ ಸಾಗರ್, ‘ಈ ಚಿತ್ರದಲ್ಲಿ ಟೆಕ್ನಿಷಿಯನ್ಗಳೇ ಹೀರೋಗಳು. ಇನ್ನು ಕೋ-ಡೈರೆಕ್ಟರ್ ಶಿವು ಅವರಿಲ್ಲದಿದ್ದರೆ ಈ ಸಿನಿಮಾ ಆಗುತ್ತಿರಲಿಲ್ಲ. ಕಳೆದು ಹೋಗುತ್ತಿರುವ ಸಾಕಷ್ಟು ಅಂಶಗಳನ್ನು ಇಟ್ಟುಕೊಂಡು ಈ ಚಿತ್ರ ಮಾಡಿದ್ದೇವೆ. ಫೆ. 21ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ ಎಲ್ಲರೂ ನೋಡಿ’ ಎಂದು ಹೇಳಿದರು.