

ಅಮೆರಿಕದಲ್ಲೀಗ ಬಾಲಿವುಡ್ ಸಿನಿಮಾದ್ದೇ ಹವಾ. ಬಿಡುಗಡೆ ಆಗಿ 11 ವರ್ಷ ಕಳೆದರೂ ಆ ಚಿತ್ರದ ಕ್ರೇಜ್ ಕಡಿಮೆ ಆಗಿಲ್ಲ. ಲಾಕ್ಡೌನ್ ನೆಪದಲ್ಲಿ ಜನ ಮುಗಿಬಿದ್ದು ನೋಡುತ್ತಿದ್ದಾರೆ. ಹೌದು, ರಾಜ್ಕುಮಾರ್ ಹಿರಾನಿ ನಿರ್ದೇಶನದ ‘3 ಈಡಿಯಟ್ಸ್’ ಸದ್ಯ ಅಮೆರಿಕದಕಲ್ಲಿ ಅತೀ ಹೆಚ್ಚು ವೀಕ್ಷಿಸಲ್ಪಟ್ಟ ಚಿತ್ರವಾಗಿ ಹೊರಹೊಮ್ಮಿದೆ. ಈ ವಿಚಾರ ಚಿತ್ರತಂಡದ ಗಮನಕ್ಕೂ ಬಂದಿದ್ದು, ಧನ್ಯವಾದ ಅರ್ಪಿಸಿದೆ.
ಹಾಲಿವುಡ್ನ ಟಾಪ್ 10 ಸಿನಿಮಾಗಳಾದ ದಿ ಡಾರ್ಕ್ ನೈಟ್, ಎವೆಂಜರ್ಸ್; ಇನ್ಫಿನಿಟಿ ವಾರ್ , ಇನ್ಸೆಪ್ಶನ್, ದಿ ಶಾವ್ಶಂಕ್ ರೆಡಂಪ್ಷನ್. ಮ್ಯಾರೇಜ್ ಸ್ಟೋರಿ, ದಿ ಪ್ಲಾಟ್ಫಾರ್ಮ್, ಸ್ಪೈಡರ್ ಮ್ಯಾನ್, ಟ್ರೇನ್ ಟು ಬುಸಾನ್, ಟು ಆಲ್ ದಿ ಬಾಯ್ಸ್ ಐ ಹ್ಯಾವ್ ಲವ್ಡ್ ಬಿಫೋರ್ ಈ ಸಿನಿಮಾಗಳನ್ನೆಲ್ಲ ಬದಿಗೊತ್ತಿ 3 ಈಡಿಯಟ್ಸ್ ಸಿನಿಮಾ ಮೊದಲ ಸ್ಥಾನದಲ್ಲಿದೆ.
‘ನಮ್ಮ ಈ ಸಿನಿಮಾ ಬಿಡುಗಡೆ ಆಗಿ ದಶಕಗಳೇ ಕಳೆದಿವೆ. ಕರೊನಾ ಹಿನ್ನೆಲೆಯಲ್ಲಿ ಅದೂ ಅಮೆರಿಕದಲ್ಲಿ ಚಿತ್ರ ಮೋಡಿ ಮಾಡಿದ್ದು ನಿಜಕ್ಕೂ ಖುಷಿಯ ವಿಚಾರ. ಈ ಪ್ರೀತಿಗೆ ನಾನು ಋಣಿ’ ಎಂದಿದ್ದಾರೆ ಹಿರಾನಿ.
ಆಮೀರ್ ಖಾನ್, ಮಾಧವನ್, ಶರ್ಮನ್ ಜೋಷಿ, ಕರೀನಾ ಕಪೂರ್, ಬೋಮನ್ ಇರಾನಿ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ 2009ರಲ್ಲಿ ಬಿಡುಗಡೆ ಆಗಿತ್ತು. ಇಂದಿಗೂ ಭಾರತೀಯ ಸಿನಿಮಾರಂಗ ನೆನಪಿನಲ್ಲಿಡುವ ಚಿತ್ರಗಳ ಸಾಲಿನಲ್ಲಿ 3 ಈಡಿಯಟ್ಸ್ ಸ್ಥಾನ ಪಡೆದಿದೆ. (ಏಜೆನ್ಸೀಸ್)