ಬಾಂಬೆ ಬೇಗಮ್ಸ್​ನಲ್ಲಿ ಕನ್ನಡತಿ ಆದ್ಯಾ ಆನಂದ್...

aadya
Published on

ಬೆಂಗಳೂರು: ಮಾರ್ಚ್ ಎಂಟರ ಮಹಿಳಾ ದಿನದಂದು ನೆಟ್​ಫ್ಲಿಕ್ಸ್​ನಲ್ಲಿ ‘ಬಾಂಬೆ ಬೇಗಮ್್ಸ’ ಎಂಬ ವೆಬ್​ಸರಣಿ ಬಿಡುಗಡೆಯಾಗುತ್ತಿರುವ ವಿಷಯ ಗೊತ್ತಿರಬಹುದು. ಈಗಾಗಲೇ ಈ ಸರಣಿಯ ಟ್ರೖೆಲರ್ ಬಿಡುಗಡೆಯಾಗಿದೆ. ವಿಶೇಷವೆಂದರೆ, ಈ ಸರಣಿಯಲ್ಲಿ ಕನ್ನಡತಿಯೊಬ್ಬರು ನಟಿಸಿದ್ದಾರೆ.

ಸಿಂಗಾಪುರ್​ನಲ್ಲಿನ ಹಲವು ಜಾಹೀರಾತು, ಚಲನಚಿತ್ರ, ಕಿರುಚಿತ್ರ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದ ಉತ್ತರ ಕನ್ನಡ ಜಿಲ್ಲೆ ಮೂಲದ ಆದ್ಯಾ ಆನಂದ್, ಶಾಯ್ ಇರಾನಿಯಾಗಿ ಈ ಸರಣಿಯಲ್ಲಿ ನಟಿಸಿದ್ದಾರೆ. ‘ಬಾಂಬೆ ಬೇಗಮ್ಸ್’ ಮೂಲಕ ಈಕೆ ಈಗ ಭಾರತದಲ್ಲೂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಅಲಂಕೃತ ಶ್ರೀವಾಸ್ತವ ನಿರ್ದೇಶನದ ‘ಬಾಂಬೆ ಬೇಗಮ್ಸ್’ ಆಧುನಿಕ ಮುಂಬೈನ ಐವರು ವಿವಿಧ ಕ್ಷೇತ್ರದ ಮಹಿಳೆಯರ ಸುತ್ತ ಹೆಣೆದುಕೊಂಡಿದೆ. ಪೂಜಾ ಭಟ್, ಶಹಾನಾ ಗೋಸ್ವಾಮಿ, ಅಮೃತಾ ಸುಭಾಶ್, ಪ್ಲಬಿತಾ ಬೋರ್​ಠಾಕೂರ್ ಜತೆಗೆ ಆದ್ಯಾ ಸಹ ಅತಿ ಕಿರಿಯಳಾಗಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ತನ್ನ 7ನೇ ವಯಸ್ಸಿನಲ್ಲೇ ನಟನೆ, ಮಾಡೆಲಿಂಗ್, ನೃತ್ಯ ಮತ್ತು ಬ್ಯಾಡ್ಮಿಂಟನ್​ನಲ್ಲಿ ಆಸಕ್ತಿ ತೋರಿದ ಆದ್ಯಾ, ನಟನೆ ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲಿನ ಸಾಧನೆಗೆ ಸಿಂಗಾಪುರ್​ನ ಸಿಂಗ್ಟೆಲ್​ನಿಂದ 2018ರಲ್ಲಿ ಯುವ ಸಾಧಕಿ ಪ್ರಶಸ್ತಿ, ಸಿಂಗಾಪುರ್​ನಲ್ಲಿ ನಡೆದ ಅಂತರರಾಷ್ಟ್ರೀಯ ಕನ್ನಡ ಸಾಂಸ್ಕೃತಿಕ ಹಬ್ಬದಲ್ಲಿ ಸಿಂಗಾರ ಪುರಸ್ಕಾರ ಪ್ರಶಸ್ತಿ ಸಿಕ್ಕಿದೆ. ಸುಮಾರು 500ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದ ‘ಬಾಂಬೆ ಬೇಗಮ್ಸ್’ ಆಡಿಷನ್​ನಲ್ಲಿ ಅವಕಾಶ ಪಡೆದ ಆದ್ಯಾ, ಈ ಮೂಲಕ ಎಂಟ್ರಿ ಕೊಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net