ಹೈದರಾಬಾದ್ಗೆ ಶಿಫ್ಟ್ ಆಗಲಿದೆಯಂತೆ ಆದಿಪುರುಷ್

Adipurush-Final
Published on

ಹೈದರಾಬಾದ್​: ಪ್ರಭಾಸ್​​ ಅಭಿನಯದ ಅತಿನಿರೀಕ್ಷಿತ ಚಿತ್ರದ ಚಿತ್ರೀಕರಣ ಈಗಾಗಲೇ ಮುಂಬೈನಲ್ಲಿ ಪ್ರಾರಂಭವಾಗಿದ್ದು, ಒಂದಿಷ್ಟು ಭಾಗದ ಚಿತ್ರೀಕರಣ ಸಹ ಆಗಿದೆ. ಈ ಮಧ್ಯೆ, ಚಿತ್ರತಂಡದವರು ಚಿತ್ರೀಕರಣವನ್ನು ಹೈದರಾಬಾದ್​ಗೆ ಶಿಫ್ಟ್​ ಮಾಡುವುದಕ್ಕೆ ಯೋಚಿಸುತ್ತಿದ್ದಾರಂತೆ.

ಹೌದು, ಆದಿಪುರುಷ್​ ನಿರ್ದೇಶಕ ಓಂ ರೌತ್​, ಚಿತ್ರದ ಚಿತ್ರೀಕರಣವನ್ನು ಹೈದರಾಬಾದ್​ಗೆ ಸ್ಥಳಾಂತರಿಸುವುದಕ್ಕೆ ಯೋಚಿಸುತ್ತಿದ್ದಾರಂತೆ. ಅದಕ್ಕೆ ಕಾರಣ, ಮುಂಬೈನಲ್ಲಿ ಕರೊನಾ ಎರಡನೆ ಅಲೆ ಜೋರಾಗಿದ್ದು, ಚಿತ್ರೀಕರಣ ಚಟುವಟಿಕೆಗಳನ್ನೆಲ್ಲ ನಿಲ್ಲಿಸಲಾ್ಗಿದೆ. ಆದರೆ, ಹೈದರಾಬಾದ್​ನಲ್ಲಿ ಆ ಪರಿಸ್ಥಿತಿ ಏನಿಲ್ಲ. ರಜನಿಕಾಂತ್​ ಅಭಿನಯದ ಅಣ್ಣಾತ್ತೆ ಚಿತ್ರವು ಸೇರಿದಂತೆ ಹಲವು ಚಿತ್ರಗಳ ಚಿತ್ರೀಕರಣ ಅಲ್ಲಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಹೈದರಾಬಾದ್​ಗೆ ಯಾಕೆ ಹೋಗಬಾರದು ಎಂಬುದು ಚಿತ್ರತಂಡದ ಯೋಚನೆ.

ಒಂದು ಪಕ್ಷ, ಚಿತ್ರತಂಡದವರೆಲ್ಲರೂ ಒಪ್ಪಿಕೊಂಡ ಪಕ್ಷದಲ್ಲಿ ಚಿತ್ರತಂಡದವರೆಲ್ಲ ಒಪ್ಪಿಕೊಂಡ ಪಕ್ಷದಲ್ಲಿ, ಹೈದರಾಬಾದ್​ನ ರಾಮೋಜಿ ಫಿಲ್ಮ್​ಸಿಟಿಯಲ್ಲಿ ಚಿತ್ರೀಕರಣ ಮುಂದುವರೆಯಲಿದೆ. ಹೇಗೂ ಚಿತ್ರದಲ್ಲಿ ಗ್ರಾಫಿಕ್ಸ್​ ಭಾಗದ ಚಿತ್ರೀಕರಣ ಹೆಚ್ಚಾಗಿದ್ದು, ಗ್ರೀನ್​ಮ್ಯಾಟ್​ನಲ್ಲೇ ಚಿತ್ರೀಕರಣ ಮಾಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಹೈದರಾಬಾದ್​ನ ಸ್ಟುಡಿಯೋಗಳಲ್ಲಿ ಬಹಳ ಸುರಕ್ಷಿತವಾಗಿ ಚಿತ್ರೀಕರಣ ಮಾಡುವ ಸಾಧ್ಯತೆ ಇರುವುದರಿಂದ, ಚಿತ್ರತಂಡದವರು ಸದ್ಯದಲ್ಲೇ ಹೈದರಾಬಾದ್​ನತ್ತ ಪ್ರಯಾಣ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಮಧ್ಯೆ, ವಿಭೀಷಣನ ಪಾತ್ರ ಮಾಡುವುದಕ್ಕೆ ಚಿತ್ರತಂಡದವರು ಸುದೀಪ್​ ಅವರನ್ನು ಕೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಸುದೀಪ್ ಕಡೆಯಿಂದಾಗಲೀ, ಚಿತ್ರತಂಡದವರ ಕಡೆಯಿಂದಾಗಲೀ, ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಅಥವಾ ಘೋಷಣೆ ಹೊರಬಿದ್ದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net