ಬಾಲ್ಯದತ್ತ ಕರೆದೊಯ್ಯುವ ಚಿನ್ನಾರಿ ಮುತ್ತ

MALGUDI
Published on

ನಟ ವಿಜಯ ರಾಘವೇಂದ್ರ, ಹೊಸ ಪ್ರತಿಭೆ ಗ್ರೀಷ್ಮಾ ರಾವ್ ಅಭಿನಯ, ಕಿಶೋರ್ ಮೂಡಬಿದ್ರೆ ನಿರ್ದೇಶನ, ಕೆ. ರತ್ನಾಕರ್ ಕಾಮತ್ ನಿರ್ವಣದ ‘ಮಾಲ್ಗುಡಿ ಡೇಸ್’ ಸಿನಿಮಾ ಶುಕ್ರವಾರ ಎಲ್ಲೆಡೆ ಬಿಡುಗಡೆ ಆಗಿದೆ. ‘ಚಿನ್ನಾರಿ ಮುತ್ತ’ ಎಂದೇ ಹೆಸರುವಾಸಿ ಆಗಿರುವ ವಿಜಯ ರಾಘವೇಂದ್ರ ಈ ಚಿತ್ರದ ಮೂಲಕ ಪ್ರೇಕ್ಷಕರನ್ನು ಮತ್ತೆ ಬಾಲ್ಯದತ್ತ, ಹಳೆಯ ನೆನಪುಗಳತ್ತ ಕೊಂಡೊಯ್ಯಲಿದ್ದಾರೆ. ಆ ಕುರಿತು ಅವರು ಹಂಚಿಕೊಂಡಿರುವ ಅನಿಸಿಕೆಗಳು ಇಲ್ಲಿವೆ.

‘‘ಮಾಲ್ಗುಡಿ ಡೇಸ್’ ಎಂದಾಕ್ಷಣ ಎಲ್ಲರಿಗೂ ಆರ್ ಕೆ. ನಾರಾಯಣ್ ಅವರ ಮಾಲ್ಗುಡಿ, ಟಿವಿಯಲ್ಲಿ ಬರುತ್ತಿದ್ದ ಶಂಕರ್​ನಾಗ್ ನಿರ್ದೇಶನದ ಧಾರಾವಾಹಿ ನೆನಪಾಗುತ್ತದೆ. ಆದರೆ ಈ ಮಾಲ್ಗುಡಿಯೇ ಬೇರೆ. ಅದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ, ಅದಕ್ಕೆ ಇದನ್ನು ಹೋಲಿಸುವುದೂ ಸಲ್ಲ..’ ಎಂದು ಚಿತ್ರದ ಬಗ್ಗೆ ಹೇಳಿಕೊಂಡರು ನಾಯಕ ನಟ ವಿಜಯ ರಾಘವೇಂದ್ರ.

‘ಆರ್.ಕೆ. ನಾರಾಯಣ್ ಅವರ ಮಾಲ್ಗುಡಿ ಎಂದರೆ ನಮಗೆಲ್ಲ ಒಂದಷ್ಟು ನೆನಪುಗಳು ಮೂಡುತ್ತವೆ. ನಮ್ಮ ಮಾಲ್ಗುಡಿ ಡೇಸ್​ನಲ್ಲೂ ನೆನಪುಗಳ ಮೂಡಿಸುವ ಅಂಥದ್ದೇ ಕಥೆ ಇದೆ. ಎಲ್ಲರಿಗೂ ಅವರವರ ಬಾಲ್ಯ, ಕಳೆದ ಜೀವನದ ನೆನಪುಗಳು ಆಗುತ್ತಿರುತ್ತವೆ. ಅದರಲ್ಲೂ ಇಲ್ಲಿ ಕಥಾನಾಯಕ ಒಬ್ಬ ಸಾಹಿತಿ. ಲಕ್ಷ್ಮೀನಾರಾಯಣ ಮಾಲ್ಗುಡಿ ಎಂಬುದು ಅವನ ಹೆಸರು.

ಆತನ ನೆನಪುಗಳೇ ಇಲ್ಲಿ ಕಥಾಹಂದರ. ಹೀಗಾಗಿ ಚಿತ್ರಕ್ಕೆ ಈ ಟೈಟಲ್ ಇಡಲಾಗಿದೆ’ ಎಂದು ಮತ್ತಷ್ಟು ವಿವರಣೆ ನೀಡಿದರು ವಿಜಯ ರಾಘವೇಂದ್ರ.

ವಿಶೇಷ ಎಂದರೆ ಅವರು ಮೊದಲ ಸಲ ಸಾಹಿತಿ ಆಗಿ, ಅದರಲ್ಲೂ ಡ್ಯುಯಲ್ ಶೇಡ್​ನಲ್ಲಿ ಕಾಣಿಸಿಕೊಂಡಿದ್ದಾರೆ. ‘ನಾನು ಸಾಹಿತಿಯಾಗಿ ಕಾಣಿಸಿಕೊಂಡಿದ್ದು ಇದೇ ಮೊದಲು. ಇಲ್ಲಿ 75 ವರ್ಷದ ವೃದ್ಧನ ಪಾತ್ರದಲ್ಲಷ್ಟೇ ಅಲ್ಲ, ಶಾಲಾ ವಿದ್ಯಾರ್ಥಿ ಆಗಿಯೂ ಕಾಣಿಸಿಕೊಂಡಿದ್ದೇನೆ. ಅದರಲ್ಲೂ ವಯಸ್ಸಾದ ಪಾತ್ರದ ಮೇಕಪ್​ಗೆಂದೇ ಗಂಟೆಗಟ್ಟಲೆ ಕುಳಿತು ಕೊಳ್ಳಬೇಕಾಗಿತ್ತು. ಶೂಟಿಂಗ್ 8 ಗಂಟೆಗಿದ್ದರೆ ಬೆಳಗಿನ ಜಾವ 3ಕ್ಕೆ ಮೇಕಪ್ ಆರಂಭಿಸಬೇಕಿತ್ತು. ಒಂದು ದಿನ ಸೂರ್ಯೋದಯದ ವೇಳೆ ಚಿತ್ರೀಕರಣ ಇದ್ದಿದ್ದರಿಂದ ಮಧ್ಯರಾತ್ರಿ ಒಂದರಿಂದಲೇ ಮೇಕಪ್ ನಡೆದಿತ್ತು. ಇನ್ನು ಮೇಕಪ್ ತೆಗೆಯಲು ಮುಕ್ಕಾಲು ಗಂಟೆ ಬೇಕಿತ್ತು’ ಎನ್ನುತ್ತ ವಿಶೇಷ ಗೆಟಪ್ ಹಿಂದಿನ ಶ್ರಮ-ಸಹನೆ ಬಗ್ಗೆ ಹೇಳಿಕೊಂಡರು.

ಶಂಕರ್​ನಾಗ್ ಅವರ ನಿರ್ದೇಶನದಲ್ಲಿ ಮೂಡಿಬಂದ ಆರ್.ಕೆ. ನಾರಾಯಣ್ ಅವರ ‘ಮಾಲ್ಗುಡಿ ಡೇಸ್’ ಎಂಬುದನ್ನೇ ಟೈಟಲ್ ಆಗಿ ಸಿನಿಮಾ ಮಾಡಬೇಕೆಂದರೆ ಅದನ್ನು ಅಷ್ಟೇ ವಿಶೇಷವಾಗಿ ಮಾಡಬೇಕಾದ ಜವಾಬ್ದಾರಿ ಇರುತ್ತದೆ. ಹೀಗಾಗಿ ಇಂಥದ್ದೊಂದು ಟೈಟಲ್​ನಲ್ಲಿ ಸಿನಿಮಾ ಮಾಡುವಾಗ ಯಾರಿಗೇ ಆಗಲಿ, ಒಂದಷ್ಟು ಭಯ ಕಾಡುತ್ತದೆ.

‘ನಿರ್ದೇಶಕರು ಟೈಟಲ್ ಮಾಲ್ಗುಡಿ ಡೇಸ್ ಎಂದಾಗ ಮೊದಲು ಸ್ವಲ್ಪ ಭಯ ಕಾಡಿತ್ತು. ಇಷ್ಟು ದೊಡ್ಡ ಟೈಟಲ್​ಗೆ ನ್ಯಾಯ ಕೊಡಲು ಆಗುತ್ತಾ? ಎಂಬ ಆತಂಕ ಮೊದಲಿತ್ತು. ಆದರೆ ಕಥೆ ಮಾಡುತ್ತ ಸೂಕ್ತ ಪೂರ್ವಸಿದ್ಧತೆಯೊಂದಿಗೆ ಮುಂದುವರಿದಾಗ ಎಲ್ಲ ಅದಾಗೇ ಕೂಡಿಬಂತು’ ಎಂದರು ವಿಜಯ್.

ಹಾಡು-ಫೈಟ್ ಇಲ್ಲದಿದ್ದರೂ ಖುಷಿ ಇದೆ: ನಿರ್ದೇಶಕ ಕಿಶೋರ್ ಒಂದೊಳ್ಳೆಯ ಕಥೆ ಮಾಡಿದ್ದಾರೆ. ಅವರೊಂದಿಗೆ ಮೊದಲ ಸಲ ಕೆಲಸ ಮಾಡಿದ್ದಾದರೂ ಹೊಸಬರೊಂದಿಗೆ ಮಾಡಿದ್ದು ಅನಿಸಲಿಲ್ಲ. ವಿಷಯದ ಬಗ್ಗೆ ತುಂಬ ತಿಳಿದುಕೊಂಡಿದ್ದು ಹಿಡಿತ ಹೊಂದಿದ್ದಾರೆ ಎಂದು ನಿರ್ದೇಶಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ವಿಜಯ್.

‘ಮಾಲ್ಗುಡಿ ಡೇಸ್’ನಲ್ಲಿ ಹಾಡು-ಫೈಟ್ ಇರದಿದ್ದರೂ ಖುಷಿ ಇದೆಯಂತೆ. ‘ಈ ಚಿತ್ರದ ಕಥೆಯೇ ತುಂಬ ವಿಭಿನ್ನ. ಇಲ್ಲಿ ಹಾಡಿಲ್ಲ, ಫೈಟೂ ಇಲ್ಲ. ಕೆಲವು ಕಥೆಗಳಿಗೆ ಅದು ಅಗತ್ಯ ಇರುವುದಿಲ್ಲ. ಜನರಿಗೂ ಅದು ಇರಲೇಬೇಕು ಅಂತೇನೂ ಇಲ್ಲ. ಕಥೆ ಚೆನ್ನಾಗಿರಬೇಕು, ಸಿನಿಮಾ ನೋಡಿಸಿಕೊಂಡು ಹೋಗಬೇಕು’ ಎನ್ನುತ್ತಾರೆ ಅವರು.

ಚಿತ್ರದ ಜತೆಗೆ ನನ್ನ ಪಾತ್ರದ ಬಗ್ಗೆ ಈಗಾಗಲೇ ಜನರು ಮಾತನಾಡಲು ಆರಂಭಿಸಿದ್ದಾರೆ. ವೃದ್ಧನಾಗಿ ಕಾಣಿಸಿಕೊಂಡ ಆ ಪಾತ್ರಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಾತ್ರಕ್ಕಾಗಿ ತೋರಿದ ಡೆಡಿಕೇಷನ್ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಆ ಪಾತ್ರ ಅಷ್ಟೇ ಖುಷಿ ಕೊಡುತ್ತದೆ. ಮಾತ್ರವಲ್ಲ, ಅದಕ್ಕೆ ತಕ್ಕಂತೆ ಕಥೆ ಕೂಡ ಇದೆ. ಅದು ಇನ್ನೂ ಖುಷಿ ಕೊಡುತ್ತದೆ, ಬಂದು ನೋಡಿ..’ ಎಂಬ ಭರವಸೆ ವಿಜಯ ರಾಘವೇಂದ್ರ ಅವರದು.

ಅಭಿನಯಕ್ಕೆ ಪೂರಕ ಮೇಕಪ್

ಸಾಮಾನ್ಯವಾಗಿ ಇದುವರೆಗೂ ಮಾಡಿರದ ಪಾತ್ರ ಮಾಡುವಾಗ ಅದಕ್ಕೆ ಸಂಬಂಧಿಸಿದಂತೆ ಅಥವಾ ಅಂಥ ಯಾರನ್ನಾದರೂ ನೋಡಿ ಒಂದಷ್ಟು ಬಾಡಿ ಲ್ಯಾಂಗ್ವೇಜ್ ತಿಳಿದುಕೊಳ್ಳುವ ಪರಿಪಾಠ ಚಿತ್ರರಂಗದಲ್ಲಿದೆ. ಇಲ್ಲಿ ವಿಜಯ ರಾಘವೇಂದ್ರ ಮೊದಲ ಸಲ ಸಾಹಿತಿಯ ಪಾತ್ರ ಮಾಡಿದ್ದರೂ ಅದಕ್ಕಾಗಿ ಅಂಥ ರೆಫರೆನ್ಸ್ ಏನೂ ತೆಗೆದುಕೊಂಡಿಲ್ಲವಂತೆ. ‘ನನಗೆ ಆ ಪಾತ್ರಕ್ಕೆ ಆ ವಿಶೇಷ ಮೇಕಪ್ ಪರಕಾಯ ಪ್ರವೇಶಕ್ಕೆ ಅಣಿಗೊಳ್ಳುವ ರೀತಿ ಸಹಾಯ ಮಾಡಿತ್ತು.

ಇನ್ನು ಸಾಹಿತಿಗಳು ತುಂಬ ಡಿಫರೆಂಟ್ ಆಗಿ ಏನೂ ಇರಲ್ಲ. ಭಾಷೆ ಮೇಲೆ ಹಿಡಿತ, ವಿಶ್ವಾಸ, ಅಭಿಮಾನ ಇರುತ್ತದೆ. ಅದನ್ನು ನಾನು ನನ್ನ ತಂದೆ, ನಮ್ಮ ದೊಡ್ಡ ಮಾವ ಅವರನ್ನು ನೋಡಿ ಕಲ್ಪಿಸಿಕೊಂಡು ಅಭಿನಯಿಸಿದೆ. ನಾನು ಓದುವ ಅಭ್ಯಾಸ ಅಷ್ಟಾಗಿ ರೂಢಿಸಿಕೊಂಡಿಲ್ಲ. ಈ ಪಾತ್ರ ಮಾಡಿದ ಮೇಲೆ ಇನ್ನುಮುಂದೆ ತುಂಬ ಓದಬೇಕು ಅನಿಸಿದೆ’ ಎನ್ನುತ್ತಾರೆ ವಿಜಯ ರಾಘವೇಂದ್ರ.

| ರವಿಕಾಂತ ಕುಂದಾಪುರ ಬೆಂಗಳೂರು 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net