ಅದ್ಭುತ ಗಾಯಕರ ಹಾಡು ಕರ್ನಾಟಕ

HADU
Published on

ಕಲರ್ಸ್ ಕನ್ನಡದ ಹೊಚ್ಚ ಹೊಸ ಮ್ಯೂಸಿಕ್ ರಿಯಾಲಿಟಿ ಶೋ ‘ಹಾಡು ಕರ್ನಾಟಕ’ದ ಮೆಗಾ ಆಡಿಷನ್ ಇದೇ ಶನಿವಾರ ಫೆ. 8ರ ಸಂಜೆಯಿಂದ ಕಲರ್ಸ್ ಕನ್ನಡದಲ್ಲಿ ಆರಂಭವಾಗಲಿದೆ.

ರಾಜ್ಯದ ಮೂಲೆ ಮೂಲೆಗಳಲ್ಲಿ ಆಡಿಷನ್ ನಡೆಸಿ ಆಯ್ಕೆ ಮಾಡಿದ ಎಲ್ಲ ಹಾಡುಗಾರರು ಅಪೂರ್ವ ಪ್ರತಿಭೆಗಳು. ಅದರಲ್ಲಿ ಕೆಲವರು ಯಾವುದೇ ತರಬೇತಿ ಪಡೆಯದೆ, ತಮ್ಮ ಜೀವನದ ಸಂಕಷ್ಟಗಳ ಮಧ್ಯೆಯೇ ಸಂಗೀತವನ್ನೇ ಉಸಿರಾಗಿಸಿಕೊಂಡವರು. ಇಂಥ ಅಪ್ಪಟ ದೇಸಿ ಪ್ರತಿಭೆಗಳನ್ನು ನೋಡಿ ‘ಹಾಡು ಕರ್ನಾಟಕ‘ದ ತೀರ್ಪಗಾರರೇ ಬೆರಗಾಗಿದ್ದಾರಂತೆ.

ಸಂಗೀತ ನಿರ್ದೇಶಕರಾದ ಸಾಧುಕೋಕಿಲ, ವಿ. ಹರಿಕೃಷ್ಣ, ರಘು ದೀಕ್ಷಿತ್, ಹಿನ್ನೆಲೆ ಗಾಯಕಿಯರಾದ ವಾರಿಜಾಶ್ರೀ, ಇಂದೂ ನಾಗರಾಜ್ ತೀರ್ಪಗಾರರಾಗಿ ಈ ಮೆಗಾ ಆಡಿಷನ್​ನಲ್ಲಿ ಇರುತ್ತಾರೆ. ‘ಮೊದಲು ಮೂವತ್ತೂ ಜಿಲ್ಲೆಗಳಲ್ಲಿ ಆಡಿಷನ್ ನಡೆಸಿದೆವು. ಆಗ ನಮ್ಮ ರಾಜ್ಯದಲ್ಲಿ ಇರುವ ಪ್ರತಿಭೆಗಳನ್ನು ನೋಡಿ ನಮಗೇ ಆಶ್ಚರ್ಯವಾಯಿತು.

ಅದ್ಭುತ ಸಿಂಗರ್​ಗಳಿದ್ದಾರೆ. ನಮ್ಮ ಶೋಗೆ ಬೇಕಾಗಿರುವುದು ಹದಿನಾರು ಮಂದಿ ಮಾತ್ರ. ಮೆಗಾ ಆಡಿಷನ್​ಗೇ 46 ಮಂದಿಯನ್ನು ಕರೆದಿದ್ದೆವು. ಯಾರನ್ನು ವಾಪಸ್ ಕಳುಹಿಸಿದರೂ ಅವರಿಗೆ ಅನ್ಯಾಯವಾಗಬಹುದು ಎಂದೆನಿಸುವಷ್ಟು ಒಳ್ಳೆಯ ಸಿಂಗರ್​ಗಳು ನಮಗೆ ಸಿಕ್ಕಿದ್ದಾರೆ.

ನಮ್ಮ ಈ ಸಂಕಷ್ಟ ಈ ಶನಿವಾರ ಆರಂಭವಾಗುವ ಮೆಗಾ ಆಡಿಷನ್​ನಲ್ಲಿಯೇ ಕಾಣಲಿದೆ. ಆದರೆ ಇದೊಂದು ಹಿತಕರವಾದ ತಲೆನೋವು’ ಎನ್ನುತ್ತಾರೆ ವಯಾಕಾಂ18 ಸಂಸ್ಥೆಯ ಕನ್ನಡ ಕ್ಲಸ್ಟರ್​ನ ಬಿಜಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್. ‘ನಾವು ಇಲ್ಲಿ ಸಂಗೀತವನ್ನು ಮಾತ್ರ ನೋಡುತ್ತೇವೆ.

ಹಾಡುಗಾರರ ಕಂಠವೇ ಮುಖ್ಯ, ಅವರ ಹಿನ್ನೆಲೆ ಮುನ್ನೆಲೆ ಆಮೇಲೆ. ಇದುವರೆಗೂ ನಾನು ನೋಡಿದಂತೆ ಈ ಶೋ ಮುಗಿಯುವುದರೊಳಗೆ ಇಬ್ಬರಿಗಾದರೂ ಸಿನಿಮಾದಲ್ಲಿ ಹಾಡಲು ಅವಕಾಶ ಸಿಗುತ್ತದೆ’ ಎನ್ನುವುದು ತೀರ್ಪಗಾರರಲ್ಲಿ ಒಬ್ಬರಾಗಿರುವ ಸಾಧು ಕೋಕಿಲ ಅಭಿಪ್ರಾಯ.

‘ನಾನು ಯಾವುದೇ ತರಬೇತಿ ಪಡೆಯದೆ ಹಾಡುತ್ತ ಹಾಡುತ್ತ ಕಲಿತವನು. ಕಚ್ಚಾ ಪ್ರತಿಭೆಗಳನ್ನು ನೋಡುವಾಗ ನನಗೆ ನನ್ನದೇ ಬಾಲ್ಯ ನೆನಪಾಗುತ್ತದೆ. ಈ ಕಾರ್ಯಕ್ರಮದ ಬಗ್ಗೆ ನಾನು ಬಹಳ ಆಶಾಭಾವನೆ ಇಟ್ಟುಕೊಂಡಿದ್ದೇನೆ’ ಎನ್ನುತ್ತಾರೆ ಇನ್ನೊಬ್ಬ ತೀರ್ಪಗಾರ ರಘು ದೀಕ್ಷಿತ್. ಈ ‘ಹಾಡು ಕರ್ನಾಟಕ’ದ ಮೆಗಾ ಆಡಿಷನ್ ಶನಿವಾರ ಮತ್ತು ಭಾನುವಾರ ಸಂಜೆ 7ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗಲಿದೆ.

ಮೆಗಾ ಆಡಿಷನ್ 46 ಮಂದಿ ಅದ್ಭುತ ಗಾಯಕರ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾಗಿದೆ. ಈ ಶನಿವಾರ ಮತ್ತು ಭಾನುವಾರ ವೀಕ್ಷಕರಿಗೆ ಒಳ್ಳೆಯ ಮನರಂಜನೆಯಂತೂ ಪಕ್ಕಾ. | ಪರಮೇಶ್ವರ ಗುಂಡ್ಕಲ್ ಬಿಜಿನೆಸ್ ಹೆಡ್, ಕನ್ನಡ ಕ್ಲಸ್ಟರ್, ವಯಾಕಾಂ18.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net