ರಾಜೀವನಿಗೆ ಸ್ಪೂರ್ತಿ ಬಂಗಾರದ ಮನುಷ್ಯ!

MAYUR
Published on

ಬೆಂಗಳೂರು: ನಟ ಮಯೂರ್ ಪಟೇಲ್ ನೆನಪಿದ್ಯಾ? ‘ಮಣಿ’, ‘ಲವ್​ಸ್ಟೋರಿ’, ‘ಹುಂಜ’, ‘ಮುನಿಯಾ’ ಸೇರಿ ಹಲವು ಸಿನಿಮಾಗಳಲ್ಲಿ ನಾಯಕನಾಗಿ ಕಾಣಿಸಿಕೊಂಡು, ಬಳಿಕ ದಿಢೀರ್ ಅಂತ ತೆರೆಯ ಮರೆಗೆ ಸರಿದಿದ್ದರು. ಈಗ ಐದು ವರ್ಷಗಳ ಗ್ಯಾಪ್​ನ ಬಳಿಕ ‘ರಾಜೀವ’ನಾಗಿ ಕಂಬ್ಯಾಕ್ ಮಾಡುತ್ತಿದ್ದಾರೆ. ಇಂದು ಆ ಚಿತ್ರ ತೆರೆಕಾಣುತ್ತಿದ್ದು, ಯುವ ರೈತನಾಗಿ ಹೊಸ ಅವತಾರದಲ್ಲಿ ಮಯೂರ್ ಆಗಮಿಸಿದ್ದಾರೆ.

‘ರಾಜೀವ’ ಎಂಬುದು ಯುವ ರೈತನ ಕಥೆ. ಐಎಎಸ್ ಪರೀಕ್ಷೆ ಬರೆದ ಕಥಾನಾಯಕ, ಕೆಲಸ ಬಿಟ್ಟು ಹಳ್ಳಿಗೆ ಬಂದು ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಾನೆ. ಆತ ಆ ನಿರ್ಧಾರ ತೆಗೆದುಕೊಂಡಿದ್ದೇಕೆ? ಎಂಬ ಅಂಶವನ್ನೇ ಪ್ರಧಾನವಾಗಿಟ್ಟುಕೊಂಡು ನಿರ್ದೇಶಕ ಮಂಜು ‘ರಾಜೀವ’ ಸಿನಿಮಾ ಮಾಡಿದ್ದಾರೆ. ಇಂದಿನ ಯುವ ಜನತೆಗೆ ಕೃಷಿ ಬೇಡವಾಗಿದೆ. ಬೆಂಗಳೂರಿನಂತಹ ಮಹಾನಗರಗಳಿಗೆ ವಲಸೆ ಬಂದು ಉದ್ಯೋಗ ಕಂಡುಕೊಳ್ಳುವ ತರಾತುರಿಯಲ್ಲಿದ್ದಾರೆ. ಅದೆಲ್ಲಕ್ಕಿಂತ ಕೃಷಿಯೇ ನೆಮ್ಮದಿಯ ಬದುಕು ಕಟ್ಟಿಕೊಳ್ಳುವ ಕಾಯಕ. ಅದನ್ನು ಯುವಜನತೆಗೆ ತಿಳಿಸುವ ಉದ್ದೇಶದಿಂದಲೇ ‘ರಾಜೀವ’ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಮಂಜು.

ವಿಶೇಷ ಏನೆಂದರೆ, ‘ರಾಜೀವ’ ಸಿನಿಮಾ ಸೃಷ್ಟಿಯಾಗಲು ಡಾ. ರಾಜ್​ಕುಮಾರ್ ಕಾರಣವಂತೆ! ಅಂದರೆ, ಕನ್ನಡದ ಎವರ್​ಗ್ರೀನ್ ಸಿನಿಮಾ ‘ಬಂಗಾರದ ಮನುಷ್ಯ’ ಚಿತ್ರ ನೋಡಿದ ನಿರ್ವಪಕ ಬಿ.ಎಮ್ ರಮೇಶ್, ಅದರ ಸ್ಪೂರ್ತಿಯಿಂದ ಕಥೆ ಬರೆದಿದ್ದರು. ಅದನ್ನೇ ಸಾಕ್ಷ್ಯಚಿತ್ರದ ರೀತಿ ಮಾಡಲು ಮುಂದಾಗಿದ್ದರು. ಕೊನೆಗೆ ಒಂದಷ್ಟು ಕಮರ್ಷಿಯಲ್ ಅಂಶಗಳನ್ನು ಬೆರೆಸಿ ಸಿನಿಮಾ ಮಾಡಿದರೆ ಹೇಗೆ ಎಂಬ ಆಲೋಚನೆ ಅವರಿಗೆ ಬಂದಿತಂತೆ. ಆಗ ಶುರುವಾಗಿದ್ದೇ ‘ರಾಜೀವ’ ಸಿನಿಮಾ. ಹಾಗಂತ ಆ ಚಿತ್ರಕ್ಕೂ ಈ ಸಿನಿಮಾಕ್ಕೂ ಯಾವುದೇ ಸಂಬಂಧ ಇಲ್ಲ ಎಂಬುದನ್ನೂ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.

ಆನಂದ ಇಳೆಯರಾಜ ಛಾಯಾಗ್ರಹಣ, ವಿಜಯ್ ಸೋವರ್ ಸಂಕಲನ, ವರ್ಧನ್ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ಕಾಕೋಳು ರಾಮಯ್ಯ ಸಂಭಾಷಣೆ ಬರೆದಿದ್ದಾರೆ. ಶೇಖರ್ ಸೋವರ್ ಹಾಡುಗಳನ್ನು ರಚಿಸಿದ್ದಾರೆ. ಮಯೂರ್​ಗೆ ಜೋಡಿಯಾಗಿ ನಾಯಕಿ ಅಕ್ಷತಾ ಜತೆ ಆಗಿದ್ದಾರೆ.

ಐದು ವರ್ಷ ಗ್ಯಾಪ್ ಆಯಿತು ಎಂದು ನನಗೆ ಅನಿಸಿಲ್ಲ. ಬದಲಿಗೆ ಆ ಅವಧಿಯಲ್ಲಿ ಬಹಳಷ್ಟು ಕೆಲಸಗಳಾಗಿವೆ. ಸಿನಿಮಾ ಸಂಬಂಧಿ ಕಥೆಗಳನ್ನು ಆಯ್ದುಕೊಳ್ಳವುದರಲ್ಲೂ ಸಮಯ ಕಳೆದಿದ್ದೇನೆ. ಹೀಗಿರುವಾಗ ‘ರಾಜೀವ’ ಸಿನಿಮಾ ಕಥೆ ಇಷ್ಟವಾಯ್ತು. ಹಾಗಾಗಿ ಮೊದಲ ಸಿನಿಮಾ ಎಂಬ ಎಗೈಟ್​ಮೆಂಟ್​ನಲ್ಲೇ ಇದ್ದೇನೆ. | ಮಯೂರ್ ಪಟೇಲ್ ನಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net