ಅಮೃತಮತಿಯ ಆತ್ಮಸಾಕ್ಷಿ ಶೋಧಿಸುವ ಪ್ರಯತ್ನ

AMRUTA MATI
Published on

‘ರಾಮಾಯಣ-ಮಹಾಭಾರತಗಳೂ ಅನೇಕ ಇವೆ. ಇದು ಪುನರ್ ಸೃಷ್ಟಿ ಪರಂಪರೆಯ ಪ್ರತೀಕ. 13ನೇ ಶತಮಾನದ ಜನ್ನಕವಿಯ ’ಯಶೋಧರ ಚರಿತೆ’ಯ ‘ಅಮೃತಮತಿ’ ಪ್ರಸಂಗವನ್ನು ಆರಿಸಿಕೊಂಡು ಮಾಡಿರುವ ಈ ಸಿನಿಮಾ ಕೂಡ ಅಂಥದ್ದೇ ಒಂದು ಪುನರ್ ಸೃಷ್ಟಿ’ ಎಂದು ತಮ್ಮ ನಿರ್ದೇಶನದ ‘ಅಮೃತಮತಿ’ ಸಿನಿಮಾ ಬಗ್ಗೆ ಹೇಳಿಕೊಂಡರು ನಿರ್ದೇಶಕ ಬರಗೂರು ರಾಮಚಂದ್ರಪ್ಪ.

‘ಮೂಲ ಅಮೃತಮತಿ ಕೊನೆಯಲ್ಲಿ ಎಲ್ಲರಿಗೂ ವಿಷ ಕೊಟ್ಟು ಸಾಯಿಸುತ್ತಾಳೆ. ಆದರೆ ಇಲ್ಲಿ ಏನಾಗುತ್ತದೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು. ಪುನರ್ ಸೃಷ್ಟಿ ಆಗಿರವುದರಿಂದ ಒಂದಷ್ಟು ಬದಲಾವಣೆ ಮಾಡಿಕೊಳ್ಳಲಾಗಿದೆ. ಇಲ್ಲಿ ಆನೆ ಲಾಯದ ಬದಲು, ಕುದುರೆ ಲಾಯ ಬಳಸಿಕೊಳ್ಳಲಾಗಿದೆ.

ಕುದುರೆ ಕಾಮದ ಸಂಕೇತ. ಅರಮನೆ ಅವಳಿಗೆ ಸೆರೆಮನೆ ಅನಿಸಿದ್ದರಿಂದ ಹೊರಮನೆಗೆ ಹೋಗುತ್ತಾಳೆ. ಈ ಚಿತ್ರದ ಮೂಲಕ ಅಮೃತಮತಿಯ ಆತ್ಮಸಾಕ್ಷಿಯನ್ನು ಶೋಧಿಸುವ ಪ್ರಯತ್ನವನ್ನೂ ಮಾಡಲಾಗಿದೆ’ ಎಂದರು ಬರಗೂರು. ‘ಬರಗೂರರ ಸಿನಿಮಾ ತುಂಬ ಅರ್ಥಪೂರ್ಣ ಆಗಿರುತ್ತದೆ. ಬುದ್ಧಿ ಬಂದಾಗಿನಿಂದ ಚಿತ್ರರಂಗದಲ್ಲಿದ್ದೇನೆ, ಎಲ್ಲ ಇಲ್ಲಿಂದಲೇ ಕಲಿತಿದ್ದು. ಸಂಭಾಷಣೆ ಗ್ರಾಂಥಿಕವಾಗಿ ಇದ್ದಿದ್ದರಿಂದ ಹೊಸ ಕನ್ನಡ ಪದಗಳನ್ನು ಕಲಿತೆ’ ಎಂದರು ಚಿತ್ರದಲ್ಲಿ ‘ಅಮೃತಮತಿ’ ಆಗಿ ನಟಿಸಿರುವ ನಾಯಕಿ ಹರಿಪ್ರಿಯಾ.

‘ಸಿನಿಮಾ ಇಂದಿಗೂ ನಿರ್ದೇಶಕರ ಮಾಧ್ಯಮವಾಗಿಯೇ ಉಳಿದುಕೊಂಡಿದೆ. ಬರಗೂರರ ಗರಡಿಯಲ್ಲಿ ಲರ್ನಿಂಗ್​ಅನ್​ಲರ್ನಿಂಗ್ ಎರಡೂ ಇತ್ತು’ ಎಂಬ ಅನಿಸಿಕೆ ವ್ಯಕ್ತಪಡಿಸಿದರು ನಟ ಸುಂದರ್​ರಾಜ್. ಆಡಿಯೋ ಬಿಡುಗಡೆ ಮಾಡಿದ ನಟ ರಾಘವೇಂದ್ರ ರಾಜ್​ಕುಮಾರ್ ಮಾತನಾಡಿ, ‘ಈ ಮೇಷ್ಟ್ರಿಗೆ ನಾವು ವಿದ್ಯಾರ್ಥಿ. ‘ಜನುಮದ ಜೋಡಿ’ ಚಿತ್ರಕ್ಕೆ ಸಂಭಾಷಣೆ ಬರೆದಿದ್ದರು’ ಎಂದು ಬರಗೂರರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಗಾಯಕಿ ಶಮಿತಾ ಮಲ್ನಾಡ್ ಸಂಗೀತ ಸಂಯೋಜಿಸಿದ್ದಾರೆ. ನಾಯಕ ಕಿಶೋರ್, ನಟಿಯರಾದ ಪ್ರಮೀಳಾ ಜೋಷಾಯ್, ಸುಪ್ರಿಯಾ ರಾವ್ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net