

'ಇದೇ ಪರಿಸ್ಥಿತಿ ಮುಂದುವರೆದರೆ ಚಿತ್ರಮಂದಿರ ಬಿಟ್ಟು ನೇರವಾಗಿ ಒಟಿಟಿಯಲ್ಲೇ ಚಿತ್ರಗಳನ್ನು ಬಿಡುಗಡೆ ಮಾಡುತ್ತೇವೆ …'- ಕಳೆದೊಂದು ವರ್ಷದಲ್ಲಿ ಅದೆಷ್ಟು ನಿರ್ಮಾಪಕರು ಮತ್ತು ನಿರ್ದೇಶಕರು ಹೀಗೆ ಹೇಳಿದ್ದಾರೋ ಎಂಬುದು ಲೆಕ್ಕಕ್ಕೆ ಸಿಗದು. ಹೀಗೆ ಪದೇಪದೆ ಹಲವರು ತಾವು ಒಟಿಟಿಯಲ್ಲಿ ನೇರವಾಗಿ ಚಿತ್ರ ಬಿಡುಗಡೆ ಮಾಡುತ್ತೇವೆ ಎಂದು ಹೇಳಿಹೇಳಿ, ಒಂದು ಹಂತದಲ್ಲಿ ಚಿತ್ರಮಂದಿರಗಳ ಕಥೆಯೇನು ಎಂದು ಎಲ್ಲರೂ ಕೇಳುವಂತಾಯಿತು. ಆ ಮಟ್ಟಿಗೆ ಎಲ್ಲರೂ ಒಟಿಟಿ ಬಗ್ಗೆ ಮಾತಾಡಿದ್ದರು. ಆದರೆ, ಈ ಒಂದು ವರ್ಷದಲ್ಲಿ ಎಷ್ಟು ಚಿತ್ರಗಳು ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಿವೆ? ಎಂಬ ಪ್ರಶ್ನೆಯನ್ನು ಕೇಳಿಕೊಂಡರೆ, ಸಿಗುವ ಉತ್ತರ "್ರೆಂಚ್ ಬಿರಿಯಾನಿ' ಮತ್ತು 'ಲಾ' ಮಾತ್ರ. ಹೋಗಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಅದೆಷ್ಟು ಚಿತ್ರಗಳು ಒಟಿಟಿಯತ್ತ ಬಂದಿವೆ ಎಂದರೆ, 'ಆ್ಯಕ್ಟ್ 1978', 'ಅರಿಷಡ್ವರ್ಗ' ಸೇರಿ ಬೆರಳಣಿಕೆಯಷ್ಟು ಚಿತ್ರಗಳು ಮಾತ್ರ ಕಾಣಿಸುತ್ತವೆ.
ಹಾಗಾದರೆ, ಇಷ್ಟು ದಿನ ನಿರ್ಮಾಪಕರು ಮತ್ತು ನಿರ್ದೇಶಕರು ತಮ್ಮ ಚಿತ್ರಗಳನ್ನು ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದು ಸುಳ್ಳಾ? ಸುಳ್ಳು ಎನ್ನುವುದಕ್ಕಿಂತ, ಅವರಿಗೆ ಆ ಆಸೆ ಇರಬಹುದು. ಆದರೆ, ಚಿತ್ರಗಳ ಹಕ್ಕುಗಳನ್ನು ಖರೀದಿಸುವುದಕ್ಕೆ ಯಾರೂ ಮುಂದೆ ಬರುತ್ತಿಲ್ಲ ಅಷ್ಟೇ.
ಒಟಿಟಿ ಎಂದರೆ ಮೊದಲಿಗೆ ನೆನಪಿಗೆ ಬರುವುದು ಅಮೆಜಾನ್ ಪೆಮ್ ಮತ್ತು ನೆಟ್ಫ್ಲಿಕ್ಸ್. ಮಿಕ್ಕಂತೆ ಹಲವು ಒಟಿಟಿಗಳಿದ್ದರೂ, ಚಿತ್ರರಂಗದ ಮಂದಿಗೆ ಗೊತ್ತಿರುವುದು ಅವೆರೆಡು ಮಾತ್ರ. ಎರಡರ ಪೈಕಿ, ನೆಟ್ಫ್ಲಿಕ್ಸ್ ಕನ್ನಡ ಚಿತ್ರಗಳ ಹಕ್ಕುಗಳನ್ನು ಖರೀದಿಸದೆ ಯಾವುದೋ ಕಾಲವಾಗಿದೆ. ಅಮೆಜಾನ್ ಪೆಮ್ನವರು ಉತ್ಸಾಹ ತೋರಿಸುತ್ತಿ ದ್ದಾರಾದರೂ, ಬೇರೆ ಭಾಷೆಗಳಿಗೆ ಹೋಲಿಸಿದರೆ ಆ ವೇದಿಕೆಯಲ್ಲಿ ಸ್ಟ್ರೀಮ್ ಆಗುತ್ತಿರುವ ಕನ್ನಡ ಚಿತ್ರಗಳ ಸಂಖ್ಯೆ ಕಡಿಮೆಯೆಂದೇ ಹೇಳಬಹುದು.
ಹಾಗಂತ ಇದೇನೋ ದೊಡ್ಡ ತಪ್ಪು ಅಥವಾ ರ್ನಿಲಕ್ಷ್ಯ ಎಂದೆಲ್ಲ ಹೇಳುವುದಕ್ಕೆ ಆಗುವುದಿಲ್ಲ. ವರ್ಷದಲ್ಲಿ 200 ಚಿತ್ರಗಳು ಬಿಡುಗಡೆಯಾಗಬಹುದು. ಆದರೆ, ಸದ್ದು ಮಾಡುವುದು 10 ಪರ್ಸೆಂಟ್ ಮಾತ್ರ. ಅದರಲ್ಲಿ ಒಂದಿಷ್ಟು ಸ್ಟಾರ್ಗಳ ಚಿತ್ರಗಳಾದರೆ, ಇನ್ನೊಂದಿಷ್ಟು ಚಿತ್ರಗಳಲ್ಲಿ ಸ್ಟಾರ್ಗಳಿಲ್ಲದಿದ್ದರೂ, ದೊಡ್ಡ ಬಜೆಟ್ ಇಲ್ಲದಿದ್ದರೂ ಬೇರೆಬೇರೆ ಕಾರಣಗಳಿಂದ ಸುದ್ದಿ ಮಾಡಿರುತ್ತವೆ. ಇಂತಹ ಚಿತ್ರಗಳಿಗೆ ಸಹಜವಾಗಿಯೇ ವೇದಿಕೆ ಸಿಗುತ್ತಿದೆ. ಮಿಕ್ಕಂತೆ ಅದೆಷ್ಟು ಚಿತ್ರಗಳು ಪ್ರದರ್ಶನವಾಗುವುದಕ್ಕೆ ಯಾವುದೇ ವೇದಿಕೆಗಳು ಸಿಗದೆ, ಮಾಯವಾಗಿ ಹೋಗುತ್ತವೋ ಎಂದು ಹೇಳುವುದು ಕಷ್ಟ. ಆದರೆ, ಕನ್ನಡಕ್ಕೆ ಹೋಲಿಸಿದರೆ, ಬೇರೆ ಭಾಷೆಗಳ ಚಿತ್ರಗಳು ಒಟಿಟಿಯಲ್ಲಿ ಹೆಚ್ಚು ಸಿಗುತ್ತವೆ. ಅದರಲ್ಲೂ ಮಲಯಾಳಂ ಚಿತ್ರಗಳಿಗೆ ಒಟಿಟಿಯಲ್ಲಿ ದೊಡ್ಡ ಮಾರುಕಟ್ಟೆ ಇದೆ. ಅದಕ್ಕೆ ಕಾರಣ, ಕಂಟೆಂಟ್ ಮತ್ತು ಗುಣಮಟ್ಟ. ಒಟಿಟಿಗಳಲ್ಲಿ ಎಲ್ಲ ಚಿತ್ರಗಳೂ ಯಶಸ್ವಿ ಆಗುತ್ತವೆ ಎಂದು ಹೇಳುವುದು ಬಹಳ ಕಷ್ಟ. ಅಲ್ಲಿಯ ಅಭಿರುಚಿಯೇ ಮತ್ತು ಪ್ರೇಕ್ಷಕವರ್ಗವೇ ಬೇರೆ. ಹಾಗಾಗಿ, ರೆಗ್ಯುಲರ್ ಎನ್ನುವಂತಹ ಚಿತ್ರಗಳಿಗೆ ಅಲ್ಲಿ ಬೇಡಿಕೆ ಕಡಿಮೆ ಮತ್ತು ವಿಭಿನ್ನ ಕಂಟೆಂಟ್ನ ಸಿನಿಮಾಗಳಿಗೆ ಬೇಡಿಕೆ ಹೆಚ್ಚು.
ಬಾಯ್ತುಂಬ ಒಟಿಟಿ ಎಂದರಷ್ಟೇ ಸಾಲದು
ಇನ್ನಾದರೂ ಚಿತ್ರರಂಗದವರು ಈ ನಿಟ್ಟಿನಲ್ಲಿ ಯೋಚಿಸಬೇಕಿದೆ. ಒಟಿಟಿಯಲ್ಲಿ ಪ್ರಸಾರವಾಗುವುದು ಹಿರಿಮೆ ಅಥವಾ ಹೆಗ್ಗಳಿಕೆ ಅಲ್ಲ. ಅದೊಂದು ವೇದಿಕೆ ಅಷ್ಟೇ. ಆದರೆ, ಬದಲಾಗುತ್ತಿರುವ ಕಾಲಟ್ಟದಲ್ಲಿ, ಕನ್ನಡ ಚಿತ್ರರಂಗ ಸಹ ಹೆಜ್ಜೆ ಹಾಕಬೇಕಿದೆ. ಬೇರೆ ಭಾಷೆಗಳಲ್ಲಿ ಗುಣಮಟ್ಟದ ಮತ್ತು ವಿಭಿನ್ನ ಕಥಾಹಂದರವಿರುವ ಚಿತ್ರಗಳು ಬಿಡುಗಡೆಯಾಗುತ್ತಿರುವಾಗ, ನಮ್ಮಲ್ಲಿ ಮಾತ್ರ ಅದೇ ಹಳೆಯ ಾಮುರ್ಲ ಚಿತ್ರಗಳು ಬರುತ್ತಿರುವುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳ ಬೇಕಿದೆ. ಬೇರೆ ಚಿತ್ರರಂಗಗಳ ಜತೆಗೆ ಬರೀ ಅದ್ದೂರಿತನದ ಹೋಲಿಕೆ ಮಾಡುವುದಷ್ಟೇ ಅಲ್ಲ, ಗುಣಮಟ್ಟದ ಬಗ್ಗೆಯೂ ಹೋಲಿಕೆ ಮಾಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಹೀರೋಗಳು, ನಿರ್ದೇಶಕರು ಮತ್ತು ನಿರ್ಮಾಪಕರೆಲ್ಲ ಒಟ್ಟೊಟ್ಟಿಗೆ ಹೆಜ್ಜೆ ಹಾಕಬೇಕಿದೆ. ಇಲ್ಲವಾದರೆ, ಎಲ್ಲರೂ ಬಾಯ್ತುಂಬ ಒಟಿಟಿ ಎಂದು ಹೇಳಿದ್ದಷ್ಟೇ ಭಾಗ್ಯ, ಮಿಕ್ಕಂತೆ ಒಟಿಟಿ ಎಂಬುದು ಕನ್ನಡ ಚಿತ್ರರಂಗಕ್ಕೆ ಮರೀಚಿಕೆಯಾಗಿಯೇ ಉಳಿದುಬಿಡುತ್ತದೆ.