

ಸಿನಿಮಾ ಎನ್ನುವುದು ಬಹಳ ದೊಡ್ಡ ಆಕರ್ಷಣೆ, ಇದರ ಮೋಹಕ್ಕೆ ಒಳಗಾಗಿ ಉತ್ತರ ಕರ್ನಾಟಕದಿಂದ ಬಹಳಷ್ಟು ಜನ ಬರುತ್ತಾರೆ, ಅಂತಹ ಸಾಕಷ್ಟು ಜನರಿಗೆ ನನ್ನ ಅಸೋಸಿಯೇಟ್ ಅಭಿ ಉತ್ತರವಾಗಿ ನಿಲ್ಲುತ್ತಾನೆ ಎನ್ನುತ್ತಾರೆ ನಟ ಕಮ್ ನಿರ್ದೇಶಕ ದುನಿಯಾ ವಿಜಯ್.
ಸಲಗ ಸಿನಿಮಾದ ‘ಸೂರಿಯಣ್ಣ’ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಅಭಿ ಎಂಬ ಯುವಕನ ಬಗ್ಗೆ ನಟ ಶಿವರಾಜ್ಕುಮಾರ್ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಅದೇ ಹುಡುಗನ ಬಗ್ಗೆ ದುನಿಯಾ ವಿಜಯ್ ಕೂಡಾ ಹೆಮ್ಮೆಯಿಂದ ಮಾತನಾಡುತ್ತಾರೆ.
‘ಸಲಗ’ ನನ್ನ ವೃತ್ತಿ ಬದುಕಿನ ಮಹತ್ತರ ಸಿನಿಮಾ. ನಾನು ನಿರ್ದೇಶನ ಮಾಡುತ್ತಿರುವ ಮೊದಲ ಚಿತ್ರ. ಹಾಡುಗಳು, ಟೀಸರ್, ಮೇಕಿಂಗ್ ವಿಡಿಯೋ ಎಲ್ಲದಕ್ಕೂ ಅದ್ಭುತವಾದ ರೆಸ್ಪಾನ್ಸ್ ಬಂದಿದೆ. ಅದರ ಕ್ರೆಡಿಟ್ ಅಭಿಗೂ ಹೋಗುತ್ತದೆ. ಉತ್ತರ ಕರ್ನಾಟಕದಿಂದ ಬಹಳಷ್ಟು ಜನ ವಿದ್ಯಾಭ್ಯಾಸವಿಲ್ಲದೆ ಸಿನಿಮಾ ಕ್ಷೇತ್ರದತ್ತ ಬರುತ್ತಾರೆ, ಆದರೆ ಬಾಗಲಕೋಟೆ ಜಿಲ್ಲೆಯ ಹಳ್ಳಿಯ ಅಭಿ ಡಬಲ್ ಡಿಗ್ರಿ ಮಾಡಿಕೊಂಡು ಬಂದಿದ್ದಾನೆ. ಜತೆಗೆ ನಿರ್ದೇಶಕ ಸೂರಿ ಜತೆ 8 ವರ್ಷ ಕೆಲಸ ಮಾಡಿದ್ದಾನೆ. ಅವನಿಗೆ ಇರುವ ತಾಳ್ಮೆ ಬಹಳ ದೊಡ್ಡದು. ನಾನು ಏನೇ ತಪು್ಪ ಮಾಡಿದರೂ ಅದನ್ನು ಹೀಗಲ್ಲ ಹೀಗೆ ಎಂದು ಸರಿ ಮಾಡಿದ್ದಾನೆ’ಎನ್ನುತ್ತಾರೆ ವಿಜಯ್.
‘ಒಬ್ಬ ಡೈರೆಕ್ಟರ್ ತಪ್ಪು ಮಾಡೇ ಮಾಡುತ್ತಾನೆ, ಅದನ್ನು ಸರಿ ಮಾಡುವವನು ಅಸೋಸಿಯೇಟ್. ಆ ಕೆಲಸವನ್ನು ಅಭಿ ಮಾಡಿದ್ದಾನೆ. ಬಹಳ ಸ್ವಾಭಿಮಾನಿ. ಅವರ ಫ್ಯಾಮಿಲಿಯಲ್ಲಿ ಎಲ್ಲರೂ ಶಾಲಾ ಶಿಕ್ಷಕರು. ಹಾಗಾಗಿ ಆ ಹುಡುಗ ಅಷ್ಟೊಂದು ತಾಳ್ಮೆ, ಶಿಸ್ತನ್ನು ಕಲಿತಿದ್ದಾನೆ. ಇನ್ನು ಇಂತಹ ಒಬ್ಬ ಹುಡುಗ ಅಸೋಸಿಯೇಟ್ ಆಗಿ ಸಿಕ್ಕಿದ್ದೇ ನನ್ನ ಅದೃಷ್ಟ. ನಾವಿಬ್ಬರೂ ಸೆಟ್ನಲ್ಲಿ ಒಂದೇ ಮನಸ್ಸು ಎರಡು ದೇಹಗಳಂತೆ ಕೆಲಸ ಮಾಡಿದ್ದೇವೆ. ಸ್ಯಾಂಡಲ್ವುಡ್ನ ಒಬ್ಬ ಒಳ್ಳೆಯ ನಿರ್ದೇಶಕ ಮತ್ತು ಉತ್ತಮ ಮೇಕರ್ ಆಗುವ ಎಲ್ಲ ಲಕ್ಷಣಗಳು ಅಭಿಯಲ್ಲಿದೆ’ಎಂದು ಹೇಳುತ್ತಾರವರು.
ಅಸೋಸಿಯೇಟ್ ಇಲ್ಲದೆ ಹೋದರೆ ಸೆಟ್ನಲ್ಲಿ ಏನೂ ಮಾಡಲಾಗುವುದಿಲ್ಲ. ‘ಸಲಗ’ದ ನಿರ್ದೇಶಕ ವಿಜಿ ಹಿಂದೆ ಈ ಹುಡುಗ ಇದ್ದಾನೆ. ಪ್ರತಿ ಹೆಜ್ಜೆಯಲ್ಲೂ ನನಗೆ ಬೆನ್ನೆಲುಬಾಗಿ ನಿಂತುಕೊಂಡು, ಪಾಸಿಟಿವ್ ಎನರ್ಜಿ ತುಂಬಿದ್ದಾನೆ. | ವಿಜಯ್ ನಿರ್ದೇಶಕ , ನಟ