ಕ್ಷಮಿಸಿ ಎಂದು ಜೋರಾಗಿ ಕೇಳಿ; ರಿತೇಶ್ ದೇಶ್ಮುಖ್ ಎದುರೇ ಫೋಟೋಗ್ರಾಫರ್ಸ್‌ ಕಾಲೆಳೆದ ಸಲ್ಮಾನ್ ವಿಡಿಯೋ ವೈರಲ್! Salman Khan

Salman Khan ಚಿತ್ರ Instagram
Salman Khan ಚಿತ್ರ Instagram
Published on
ಮುಂಬೈ: ಬಾಲಿವುಡ್‌ನ ‘ಸುಲ್ತಾನ್’ ಸಲ್ಮಾನ್ ಖಾನ್ (Salman Khan) ಮತ್ತು ಪಾಪರಾಜಿಗಳ ನಡುವಿನ ಸಂಬಂಧ ಯಾವಾಗಲೂ ಸದ್ದು ಮಾಡುತ್ತಿರುತ್ತದೆ. ಇತ್ತೀಚೆಗೆ ಮುಂಬೈನ ಆಸ್ಪತ್ರೆಯೊಂದರ ಹೊರಗೆ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ತನ್ನ ವೈಯಕ್ತಿಕ ಭೇಟಿಯ ಸಮಯದಲ್ಲಿ ಪಾಪರಾಜಿಗಳು ನಡೆದುಕೊಂಡ ರೀತಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಸಲ್ಮಾನ್​​ ಮರುದಿನವೇ ಎಲ್ಲವನ್ನೂ ಮರೆತು ಕ್ಷಮೆಯಾಚಿಸಿದ್ದಾರೆ.
ನಟ ಸಲ್ಮಾನ್ ಖಾನ್ ಮರಾಠಿ ಚಿತ್ರ 'ರಾಜಾ ಶಿವಾಜಿ' ಚಿತ್ರದ ಯಶಸ್ಸಿನ ಸಮಾರಂಭದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಅವರು ತಮ್ಮ ಭದ್ರತಾ ಸಿಬ್ಬಂದಿಯೊಂದಿಗೆ ಕಾರಿನಿಂದ ಇಳಿದು ಬರುತ್ತಿದ್ದಂತೆ, ಅಲ್ಲಿದ್ದ ಎಲ್ಲಾ ಫೋಟೋಗ್ರಾಫರ್‌ಗಳು (ಸರ್ವಾನುಮತದಿಂದ), "ಸಾರಿ ಸರ್... ನಿನ್ನೆ ನಡೆದ ಘಟನೆಗೆ ದಯವಿಟ್ಟು ಕ್ಷಮಿಸಿ" ಎಂದು ಕೂಗಿ ಹೇಳುತ್ತಿರುವುದು ಕಂಡುಬಂದಿದೆ.
ಸಲ್ಮಾನ್ ಖಾನ್ ಅಲ್ಲಿಗೇ ಸುಮ್ಮನಾಗಲಿಲ್ಲ. ಬದಲಿಗೆ 'ರಾಜಾ ಶಿವಾಜಿ' ಚಿತ್ರದ ನಾಯಕ ನಟ ಹಾಗೂ ನಿರ್ದೇಶಕ ರಿತೇಶ್ ದೇಶ್ಮುಖ್ ಜೊತೆ ನಿಂತು ಫೋಟೋಗ್ರಾಫರ್‌ಗಳ ಕಡೆಗೆ ತಿರುಗಿ, ಕ್ಷಮಿಸಿ ಎಂದು ಜೋರಾಗಿ ಹೇಳಿ! ಎನ್ನುತ್ತಾ ಕೀಟಲೆ ಮಾಡಲು ಶುರು ಮಾಡಿದರು. ನಟನ ಈ ವರ್ತನೆ ನೋಡಿ ರಿತೇಶ್​ ನಗಾಡಲು ಪ್ರಾರಂಭಿಸಿದರು.

ನಿನ್ನೆ ನಡೆದಿದ್ದೇನು?

ಮಂಗಳವಾರ ರಾತ್ರಿ ಸಲ್ಮಾನ್ ಮುಂಬೈ ಆಸ್ಪತ್ರೆಗೆ ಆತ್ಮೀಯರನ್ನು ಭೇಟಿಯಾಗಲು ಹೋಗಿದ್ದರು. ಈ ವೇಳೆ ಫೋಟೋಗ್ರಾಫರ್ಸ್​ ಅವರ ಹೆಸರನ್ನು ಕೂಗುತ್ತಾ ಮಾತೃಭೂಮಿ ಚಿತ್ರದ ಬಗ್ಗೆ ಕೇಳಲು ಆರಂಭಿಸಿದರು. ಇದಾದ ಬಳಿಕ ಕೋಪಗೊಂಡ ನಟ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಖಾಸಗಿ ಸ್ಥಳಗಳಿಗೆ ಅದರಲ್ಲೂ ವಿಶೇಷವಾಗಿ ಆಸ್ಪತ್ರೆಗಳಂತಹ ಸ್ಥಳಗಳಲ್ಲಿ ಈ ಪಾಪರಾಜಿಗಳು ಈ ರೀತಿ ನಡೆದುಕೊಳ್ಳಬಾರದು ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.

ಒಂಟಿತನದ ಬಗ್ಗೆ ಸಲ್ಮಾನ್ ಖಾನ್ ಅವರ ನಿಗೂಢ ಪೋಸ್ಟ್!

ಸಲ್ಮಾನ್​ಖಾನ್​ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಭಾನುವಾರ (ಮೇ 17), ಒಬ್ಬಂಟಿಯಾಗಿರುವುದು (Alone) ಮತ್ತು ಒಂಟಿತನದ (Lonely) ಚಿಂತನಶೀಲ ಶೀರ್ಷಿಕೆಯೊಂದಿಗೆ ಪೋಸ್ಟ್​ ಹಂಚಿಕೊಂಡಿದ್ದರು.
ನಾನು ನನ್ನಿಂದ, ನಿಮ್ಮಿಂದ ಒಬ್ಬಂಟಿಯಾಗಿರಲು 2 ಮಾರ್ಗಗಳು - ಒಬ್ಬಂಟಿ(Alone) ಮತ್ತು ಒಂಟಿತನ (Lonely). ಒಂಟಿತನ ಎಂದರೆ ಅದು ನಮ್ಮ 'ಆಯ್ಕೆ' (Choice) ಆಗಿರುತ್ತದೆ. ಆದರೆ, ಯಾರೂ ನಿಮ್ಮೊಂದಿಗೆ ಇರಲು ಬಯಸದಿದ್ದಾಗ ಕಾಡುವುದು ನಿಜವಾದ ಒಂಟಿತನ... ನೀವು ಏನು ಮಾಡಬೇಕೆಂದು ಲೆಕ್ಕಾಚಾರ ಮಾಡಿದರೆ ಸಾಕು ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಅಭಿಮಾನಿಗಳು ಮಾತ್ರವಲ್ಲದೇ, ಹಳೆಯ ನಟಿ ಸ್ನೇಹಾ ಉಲ್ಲಾಲ್ ಕೂಡಾ ಪ್ರತಿಕ್ರಿಯಿಸಿ, "ಉಫ್ಫ್ ಅದೀ, ಲಕ್ಕಿ ಸಮಯದಲ್ಲಿ ನೀವು ಇದನ್ನೆಲ್ಲಾ ಏಕೆ ಮಾಡಲಿಲ್ಲ?" ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು ಲಕ್ಷಾಂತರ ಜನರು ನಿಮ್ಮೊಂದಿಗೆ ಇರಲು ಬಯಸಿದಾಗ ಅದೇಗೆ ಒಂಟಿಯಾಗಿದ್ದೀರಿ ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬ ಬಳಕೆದಾರ ಒಂಟಿಯಾಗಿರುವುದು ಶಾಂತಿಯುತವಾಗಿರಬಹುದು, ಆದರೆ ಒಂಟಿತನವು ನಿಧಾನವಾಗಿ ವ್ಯಕ್ತಿಯನ್ನು ಒಳಗಿನಿಂದ ಮುರಿಯುತ್ತದೆ ಎಂದು ಕಾಮೆಂಟ್​ ಮಾಡಿದ್ದಾರೆ.
ಬಾಲಿವುಡ್‌ನ ಅತ್ಯಂತ ಪ್ರಭಾವಶಾಲಿ ಮತ್ತು ಜನಪ್ರಿಯ ನಟರಲ್ಲಿ ಸಲ್ಮಾನ್ ಖಾನ್ ಕೂಡಾ ಒಬ್ಬರು. ಹಮ್ ಆಪ್ಕೆ ಹೈ ಕೌನ್, ದಬಾಂಗ್, ಬಜರಂಗಿ ಭಾಯಿಜಾನ್ ಮತ್ತು ಟೈಗರ್ ಸರಣಿಯಂತಹ ಹಲವಾರು ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ. ಆದಾಗ್ಯೂ, ನಟ ತಮ್ಮ ಮುಂಬರುವ ಚಿತ್ರಗಳಾದ ಸಿಕಂದರ್, ಕಿಕ್ 2 ಮತ್ತು ಟೈಗರ್ ವರ್ಸಸ್ ಪಠಾಣ್ ಚಿತ್ರಗಳಲ್ಲಿ ನಟಿಸುತ್ತಿದ್ದು, ಅಭಿಮಾನಿಗಳಲ್ಲಿ ಭಾರೀ ಕುತೂಹಲವನ್ನು ಹುಟ್ಟುಹಾಕಿದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net