ಚಂದನವನಕ್ಕೀಗ 88: ಇಂದು ಕನ್ನಡ ಚಿತ್ರರಂಗದ ಹುಟ್ಟುಹಬ್ಬ

88
Published on

ಬೆಂಗಳೂರು: ಮಾರ್ಚ್ 03, 1934.. ಕನ್ನಡ ಚಿತ್ರರಂಗಕ್ಕೆ ಮರೆಯಲಾದ ದಿನ ಇದು. ಏಕೆಂದರೆ, ಇದೇ ದಿನ ಕನ್ನಡದ ಮೊದಲ ವಾಕ್ಚಿತ್ರವಾದ ‘ಸತಿ ಸುಲೋಚನಾ’ ಬಿಡುಗಡೆಯಾಗಿತ್ತು. ಅಲ್ಲಿಂದ ಶುರುವಾದ ಕನ್ನಡ ಚಿತ್ರರಂಗ ಇಂದಿಗೆ 88 ವರ್ಷಗಳನ್ನು ಪೂರೈಸಿ 89ನೇ ವರ್ಷಕ್ಕೆ ಕಾಲಿಟ್ಟಿದೆ.

‘ಸತಿ ಸುಲೋಚನಾ’ ಚಿತ್ರವು 1934ರಲ್ಲಿ ಬಿಡುಗಡೆಯಾದರೂ, ಅದರ ಪ್ರಯತ್ನ 1932ರಲ್ಲೇ ಪ್ರಾರಂಭವಾಗಿತ್ತು. 1931ರಲ್ಲಿ ಭಾರತದ ಮೊದಲ ವಾಕ್ಚಿತ್ರ, ಹಿಂದಿಯ ‘ಆಲಂ ಅರಾ’ ಬಿಡುಗಡೆಯಾಗಿತ್ತು. ಇದನ್ನು ನೋಡಿ, ಬೇರೆ ಭಾಷೆಗಳಲ್ಲೂ ವಾಕ್ಚಿತ್ರ ಮಾಡುವ ಪ್ರಕ್ರಿಯೆ ಶುರುವಾಗಿತ್ತು. ಕನ್ನಡದಲ್ಲಿ ಇಂಥದ್ದೊಂದು ಪ್ರಯತ್ನಕ್ಕೆ ಕೈಹಾಕಿದ್ದು ಚಮನ್​ಲಾಲ್ ಡುಂಗಾಜಿ ಎಂಬ ವ್ಯಾಪಾರಿ. ಸೌಥ್ ಇಂಡಿಯಾ ಮೂವೀಟೋನ್ ಎಂಬ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ ಅವರು, ಅದರಡಿ ಚಿತ್ರ ನಿರ್ವಿುಸುವುದಕ್ಕೆ ಮುಂದಾದರು. ಚಿತ್ರದ ನಿರ್ದೇಶನ ಮಾಡಿದವರು ಹಿರಿಯ ನಟಿ ಲಕ್ಷ್ಮೀ ಅವರ ತಂದೆ ವೈ.ವಿ. ರಾವ್. ರಾಮಾಯಣದ ಕಥೆಯನ್ನು ಆಧರಿಸಿ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬರೆಯುವ ಜವಾಬ್ದಾರಿಯನ್ನು ಬೆೆಳ್ಳಾವೆ ನರಹರಿಶಾಸ್ತ್ರಿಗಳಿಗೆ ವಹಿಸಲಾಯಿತು. ಆರ್. ನಾಗೇಂದ್ರ ರಾಯರು ರಾವಣನ ಪಾತ್ರ ಮಾಡಿದರೆ, ಇಂದ್ರಜಿತುವಿನ ಪಾತ್ರವನ್ನು ಸುಬ್ಬಯ್ಯ ನಾಯ್ಡು ಮಾಡಿದರು. ಮಂಡೋದರಿಯಾಗಿ ಲಕ್ಷ್ಮೀ ಬಾಯಿ ಮತ್ತು ಸುಲೋಚನಳಾಗಿ ತ್ರಿಪುರಾಂಭ ನಟಿಸಿದರು.

ಈ ಚಿತ್ರವನ್ನು ಕೊಲ್ಹಾಪುರದ ಛತ್ರಪತಿ ಸ್ಟುಡಿಯೋದಲ್ಲಿ ನಡೆಯಿತಂತೆ. ಈ ಚಿತ್ರವನ್ನು 40 ಸಾವಿರ ರೂಪಾಯಿಗಳಲ್ಲಿ ನಿರ್ಮಾಣ ಮಾಡಲಾಯಿತು ಎಂದು ಹೇಳಲಾಗುತ್ತದೆ. ಬೆಂಗಳೂರಿನ ಪ್ಯಾರಾಮೌಂಟ್ ಚಿತ್ರಮಂದಿರದಲ್ಲಿ (ಇಂದಿನ ಕೃಷ್ಣರಾಜೇಂದ್ರ ಮಾರುಕಟ್ಟೆ ಪ್ರದೇಶ) ‘ಸತಿ ಸುಲೋಚನಾ’ ಬಿಡುಗಡೆಯಾಗಿ ಆರು ವಾರಗಳ ಯಶಸ್ವಿ ಪ್ರದರ್ಶನ ಕಂಡಿತ್ತಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net