ಒಂದಲ್ಲಾ ಎರಡಲ್ಲಾ ... ಅಮೇಜಾನ್ ಪ್ರೈಮ್‌ನಲ್ಲಿ ಏಳು ಚಿತ್ರಗಳ ಪ್ರೀಮಿಯರ್

Amazon Final
Published on

ಚಿತ್ರಮಂದಿರಗಳಲ್ಲಿಗಿಂಥ ಮುಂಚೆ ಓಟಿಟಿಯಲ್ಲಿ ಚಿತ್ರ ಬಿಡುಗಡೆ ಮಾಡುವ ಸಂಖ್ಯೆ, ಇಲ್ಲಿಯವರೆಗೂ ಬಹಳ ಕಡಿಮೆ ಇತ್ತು. ಆದರೆ, ಲಾಕ್‌ಡೌನ್‌ನಿಂದಾಗಿ ನೇರವಾಗಿ ಓಟಿಟಿಯಲ್ಲಿ ಬಿಡುಗಡೆ ಮಾಡುವವರ ಸಂಖ್ಯೆ ಸಖತ್ ಹೆಚ್ಚುತ್ತಿದೆ. ಅದಕ್ಕೆ ಉದಾಹರಣೆಯಾಗಿ ಮುಂದಿನ ಎರಡು ತಿಂಗಳಲ್ಲಿ ಅಮೇಜಾನ್ ಪ್ರೈಮ್‌ನಲ್ಲಿ ಐದು ಭಾಷೆಗಳ ಏಳು ಚಿತ್ರಗಳು ಪ್ರೀಮಿಯಾಗುವುದಕ್ಕೆ ಸಿದ್ಧತೆ ನಡೆಸಿವೆ.

ಹೌದು, ಸದ್ಯಕ್ಕೆ ಚಿತ್ರಮಂದಿರಗಳು ಮುಚ್ಚಿವೆ. ಲಾಕ್‌ಡೌನ್ ಮುಗಿದ ಮೇಲೂ ಚಿತ್ರಮಂದಿರಗಳು ತಕ್ಷಣ ಪ್ರಾರಂಭವಾಗುತ್ತವೋ ಇಲ್ಲವೋ ಎಂಬುದು ಯಾರಿಗೂ ಗೊತ್ತಿಲ್ಲ. ಏಕೆಂದರೆ, ಜನರಲ್ಲಿ ಇನ್ನೂ ಕರೊನಾ ಬಗ್ಗೆ ಭೀತಿ ಇರುವುದರಿಂದ ಹಲವರು ಚಿತ್ರಮಂದಿರಗಳಿಗೆ ಹೋಗುವುದಕ್ಕೆ ಈಗಲೇ ತಯಾರಿಲ್ಲ ಎಂದು ಹೇಳಲಾಗುತ್ತಿದೆ. ಈ ಪರಿಸ್ಥಿತಿ ಸರಿ ಹೋಗುವುದಕ್ಕೆ ಇನ್ನೂ ನಾಲ್ಕೈದು ತಿಂಗಳುಗಳಾದರೂ ಬೇಕು. ಆದರೆ, ಈಗಾಗಲೇ ಹಲವು ಚಿತ್ರಗಳು ಸಂಪೂರ್ಣವಾಗಿ ಬಿಡುಗಡೆಗೆ ಎದುರು ನೋಡುತ್ತಿದ್ದವು. ಬಿಡುಗಡೆ ಇನ್ನೂ ವಿಳಂಬವಾಗುತ್ತದೆ ಎಂದು ಗೊತ್ತಾಗುತ್ತಿದ್ದಂತೆಯೇ ಹಲವು ನಿರ್ಮಾಪಕರು ಓಟಿಟಿಗಳ ಕಡೆ ಮುಖ ಮಾಡುತ್ತಿದ್ದಾರೆ. ಅದಕ್ಕೆ ಸರಿಯಾಗಿ ಚಿತ್ರಗಳ ಡಿಜಿಟಲ್ ಹಕ್ಕುಗಳನ್ನು ಖರೀದಿಸುವುದಕ್ಕೆ ಹಲವು ಓಟಿಟಿಗಳು ಪ್ರಯತ್ನ ನಡೆಸಿದ್ದು, ಈ ಪೈಕಿ ಅಮೇಜಾನ್ ಮುಂಚೂಣಿಯಲ್ಲಿದೆ. ಹಲವು ಚಿತ್ರಗಳನ್ನು ಈಗಾಗಲೇ ಖರೀದಿಸಿರುವ ಅಮೇಜಾನ್ ಪ್ರೈಮ್, ಮುಂದಿನ ಮೂರು ತಿಂಗಳುಗಳಲ್ಲಿ ಐದು ಭಾಷೆಗಳ ಏಳು ಚಿತ್ರಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ.

ಈ ಪೈಕಿ ಹಿಂದಿ, ಕನ್ನಡ ಮತ್ತು ತಮಿಳಿನಿಂದ ಎರಡೆರೆಡು ಚಿತ್ರಗಳಿದ್ದು, ಮಲಯಾಳಂನಿಂದ ಒಂದು ಚಿತ್ರವಿದೆ. ವಿಶೇಷವೆಂದರೆ, ಕನ್ನಡದ ಎರಡೂ ಚಿತ್ರಗಳು, ಪುನೀತ್ ರಾಜಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್ಸ್ ಬ್ಯಾನರ್‌ನಿಂದ ನಿರ್ಮಾಣಗೊಂಡಿವೆ.

ಈ ಏಳು ಚಿತ್ರಗಳ ಪೈಕಿ ಮೊದಲನೆಯದಾಗಿ ತಮಿಳಿನ ‘ಪೊನ್ಮಗಳ್ ವಂದಾಳ್’ ಮೇ 29ಕ್ಕೆ ಬಿಡುಗಡೆಯಾಗುತ್ತಿದೆ. ಜ್ಯೋತಿಕಾ ಅಭಿನಯದ ಈ ಚಿತ್ರದ ನಂತರ, ಅಮಿತಾಭ್ ಬಚ್ಚನ್ ಮತ್ತು ಆಯುಷ್ಮಾನ್ ಖುರಾನ ಅಭಿನಯದ ‘ಗುಲಾಬೋ ಸಿತಾಬೋ’ ಜೂನ್ 12ಕ್ಕೆ ತೆರೆಕಾಣಲಿದೆ. ಆ ನಂತರ ಕನ್ನಡದ ‘ಲಾ’ ಜೂನ್ 26ಕ್ಕೆ ಬಿಡುಗಡೆಯಾದರೆ, ಕೀರ್ತಿ ಸುರೇಶ್ ಅಭಿನಯದ ತಮಿಳು ಚಿತ್ರ ‘ಪೆಂಗ್ವಿನ್’ ಜುಲೈ 17ಕ್ಕೆ ಬರಲಿದೆ. ಐದನೇ ಚಿತ್ರವಾಗಿ ಕನ್ನಡದ ‘ಫ್ರೆಂಚ್ ಬಿರಿಯಾನಿ’ ಜುಲಥ 24ಕ್ಕೆ ಪ್ರೀಮಿಯರ್ ಆಗಲಿದೆ. ಇದಲ್ಲದೆ ಹಿಂದಿಯ ‘ಶಕುಂತಲಾ ದೇವಿ’ ಮತ್ತು ಮಲಯಾಳಂನ ‘ಸೂಫಿಯಮ್ ಸುಜಾತೆಯಮ್’ ಚಿತ್ರಗಳ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ. ಈ ಎರಡೂ ಚಿತ್ರಗಳು ಆಗಸ್ಟ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net