

ಬೆಂಗಳೂರು: ಸಿನಿಮಾ ಮಾಡುವುದಕ್ಕಿಂತ ಮುನ್ನ ಕಿರುಚಿತ್ರ ಮಾಡಿ, ತಮ್ಮ ಪ್ರತಿಭೆ ತೋರಿಸಿದ ಹಲವು ನಿರ್ದೇಶಕರಿದ್ದಾರೆ. ಈಗ ಹರಿಪ್ರಕಾಶ್ ಡಿ '69 ವೀವ್ಸ್' ಎಂಬ ಕಿರುಚಿತ್ರವನ್ನು ನಿರ್ದೇಶಿಸಿದ್ದು, ಆ ಚಿತ್ರವು ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಸಂಕಲನ, ಚಿತ್ರಕಥೆ, ನಿರ್ದೇಶನ ಸೇರಿದಂತೆ 20ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.
ಸಸ್ಪೆನ್ಸ್-ಥ್ರಿಲ್ಲರ್ ಜಾನರ್ನಲ್ಲಿ ಮೂಡಿಬಂದಿರುವ ಈ ಕಿರುಚಿತ್ರ 26 ನಿಮಿಷಗಳ ಅವಧಿಯಿದ್ದು, ತಾಂತ್ರಿಕವಾಗಿ ಅದ್ಧೂರಿಯಾಗಿ ಮೂಡಿಬಂದಿದೆ. ಅಷ್ಟೇ ಅಲ್ಲ, ಸಿನಿಮಾ ಗುಣಮಟ್ಟದಲ್ಲಿ ಮೂಡಿಬಂದಿದೆ ಎಂಬ ಪ್ರಶಂಸೆಗೂ ಪಾತ್ರವಾಗಿದೆ. ಅಂಡರ್ ವಾಟರ್ ಶೂಟಿಂಗ್ ಮಾಡಿರುವುದು ಈ ಕಿರುಚಿತ್ರದ ಮತ್ತೊಂದು ಹೈಲೈಟ್.
ಸೆಪ್ಟೆಂಬರ್ 09ರಂದು ಅಮೇಜಾನ್ ಪ್ರೈಮ್, ಟಾಟಾ ಪ್ಲೇ ಬಿಂಜ್, ಏರ್ ಟೆಲ್ ಎಕ್ಸ್ ಟ್ರೀಮ್ ಹಾಗೂ ನಮ್ಮ ಫ್ಲಿಕ್ಸ್ ಓಟಿಟಿ ಆ್ಯಪ್ ಮೂಲಕ ಬಿಡುಗಡೆಯಾಗಿರುವ ಈ ಕಿರುಚಿತ್ರಕ್ಕೆ ಬಹುತೇಕ ಸಿನಿಮಾ ತಂತ್ರಜ್ಞರೇ ಕಾರ್ಯ ನಿರ್ವಹಿಸಿರುವುದು ವಿಶೇಷ. ಸ್ವಾಮಿ ಮೈಸೂರು ಛಾಯಾಗ್ರಹಣ, ಪುಷ್ಕರ್ ಗಿರಿಗೌಡ ಸಂಕಲನ, ಆನಂದ್ ರಾಜಾ ವಿಕ್ರಮ್ ಸಂಗೀತ ಸಂಯೋಜನೆ '69 ವೀವ್ಸ್'ಗಿದೆ.
ಪ್ರಿಯಾಂಕಾ.ಕೆ ನಿರ್ಮಿಸಿರುವ '69 ವೀವ್ಸ್' ಕಿರುಚಿತ್ರದಲ್ಲಿ ರಂಗಭೂಮಿ ಕಲಾವಿದರಾದ ಶಶಾಂಕ್ ಶರ್ಮಾ, ರೋವನ್ ಪೂಜಾರಿ, ನಳೀನ್ ಅರಕಲ್ ಸೇರಿದಂತೆ ಅನೇಕರು ತಾರಾಗಣದಲ್ಲಿದ್ದಾರೆ. ಇದೇ ತಂಡದೊಂದಿಗೆ ಮುಂದಿನ ದಿನಗಳಲ್ಲಿ ಸಿನಿಮಾ ಮಾಡುವ ಆಲೋಚನೆಯೂ ಇದೆ ಎಂಬುದು ನಿರ್ದೇಶಕ ಹರಿ ಪ್ರಕಾಶ್ ಹೇಳಿಕೊಂಡಿದ್ದಾರೆ.