60ರ ದಶಕದ ನಟಿಯಾದ ಜಾಕ್​ಲೀನ್; ಪ್ರಿಯಾ ರಾಜ್​ವಂಶ್ ಬಯೋಪಿಕ್​ನಲ್ಲಿ ನಟನೆ

Jacqueline
Published on

ಬಾಲಿವುಡ್​ನ ಹಲವು ಜನಪ್ರಿಯ ನಟಿಯರ ಪೈಕಿ ಪ್ರಿಯಾ ರಾಜ್​ವಂಶ್ ಸಹ ಒಬ್ಬರು. ಈಗ್ಯಾಕೆ ಮರೆತು ಹೋದ ನಟಿಯ ವಿಷಯ ಎಂದರೆ, ಅದಕ್ಕೂ ಕಾರಣವಿದೆ. ಪ್ರಿಯಾ ರಾಜ್​ವಂಶ್ ಕುರಿತು ಬಾಲಿವುಡ್​ನಲ್ಲೊಂದು ಬಯೋಪಿಕ್ ಆಗುತ್ತಿದೆ. ಪ್ರಿಯಾ ರಾಜವಂಶ್ ಅವರ ನಿಗೂಢ ಜೀವನವನ್ನು ತೆರೆಗೆ ತರುತ್ತಿದ್ದಾರೆ ಪ್ರದೀಪ್ ಸರ್ಕಾರ್. ಅಷ್ಟೇ ಅಲ್ಲ, ಪ್ರಿಯಾ ಪಾತ್ರಕ್ಕೆ ಜಾಕ್​ಲೀನ್ ಫರ್ನಾಂಡಿಸ್ ಅವರನ್ನು ಆಯ್ಕೆ ಮಾಡಿದ್ದಾರೆ.

22 ವರ್ಷಗಳ ಸುಧೀರ್ಘ ಚಿತ್ರಜೀವನದಲ್ಲಿ ಪ್ರಿಯಾ ನಟಿಸಿದ್ದು ಕೇವಲ ಏಳು ಚಿತ್ರಗಳಲ್ಲಷ್ಟೇ. ಅದು ಅವರು ಬೇರೆ ಯಾವ ನಿರ್ದೇಶಕರ ಚಿತ್ರಗಳಲ್ಲೂ ನಟಿಸಲಿಲ್ಲ. ನಟಿಸಿದ್ದು ದೇವ್ ಆನಂದ್ ಅವರ ಅಣ್ಣ ಚೇತನ್ ಆನಂದ್ ನಿರ್ದೇಶನದ ಚಿತ್ರಗಳಲ್ಲಿ ಮಾತ್ರ. ಏಕೆಂದರೆ, ಆಕೆಯನ್ನು ಚಿತ್ರರಂಗಕ್ಕೆ ‘ಹಕೀಕತ್’ ಎಂಬ ಚಿತ್ರದ ಮೂಲಕ ಬೆಳ್ಳಿತೆರೆ ಪರಿಚಯಿಸಿದ್ದು ಅದೇ ಚೇತನ್ ಆನಂದ್.

ಪ್ರಿಯಾ ಅವರನ್ನು ಬೇರೆಯವರ ಚಿತ್ರಗಳಲ್ಲಿ ನಟಿಸುವುದಕ್ಕೆ ಒಪ್ಪದ ಚೇತನ್, ತಮ್ಮ ಚಿತ್ರಗಳಲ್ಲಿನ ಪ್ರಮುಖ ಸ್ತ್ರೀಪಾತ್ರಗಳನ್ನು ಪ್ರಿಯಾಗೆ ಕೊಡುತ್ತಿದ್ದರು. ಅವರಿಬ್ಬರೂ ಮದುವೆಯಾಗದಿದ್ದರೂ, ಅವರಿಬ್ಬರ ಗೆಳೆತನದ ಕುರಿತು 60-70ರ ದಶಕದಲ್ಲಿ ಸಾಕಷ್ಟು ಗಾಸಿಪ್​ಗಳು ಕೇಳಿ ಬಂದಿದ್ದವು. ಆದರೆ, ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಚೇತನ್ ಮತ್ತು ಪ್ರಿಯಾ, ಜತೆಗೆ ಏಳು ಚಿತ್ರಗಳನ್ನು ಮಾಡಿದರು. ಆ ನಂತರ 1997ರಲ್ಲಿ ಚೇತನ್ ಆನಂದ್ ಅವರ ನಿಧನವಾಯ್ತು. ಅದಾಗಿ ಕೆಲವೇ ವರ್ಷಗಳಲ್ಲಿ ಪ್ರಿಯಾ ನಿಗೂಢವಾಗಿ ಹತ್ಯೆಯಾದರು. ಇವೆಲ್ಲವನ್ನೂ ಒಳಗೊಂಡ ಈ ಚಿತ್ರ ಸದ್ಯದಲ್ಲೇ ಪ್ರಾರಂಭವಾಗಲಿದೆ. ದೀಪಕ್ ಮುಕುಟ್ ಈ ಚಿತ್ರವನ್ನು ನಿರ್ವಿುಸುತ್ತಿದ್ದಾರೆ. - ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net