ಕನ್ನಡದ ಕ್ಲಾಸಿಕ್​ಗಳಿಗೆ 52ರ ಸಂಭ್ರಮ: ಟ್ರೆಂಡ್ ಸೆಟ್ ಮಾಡಿದ ಶ್ರೀ ಕೃಷ್ಣದೇವರಾಯ ಮತ್ತು ಗೆಜ್ಜೆ ಪೂಜೆ

Cinivani
Published on
ಕನ್ನಡ ಚಿತ್ರರಂಗದಲ್ಲಿ ಕ್ಲಾಸಿಕ್ ಚಿತ್ರಗಳ ಪಟ್ಟಿಗೆ ಸೇರುವ ಎರಡು ಚಿತ್ರಗಳೆಂದರೆ, ‘ಗೆಜ್ಜೆ ಪೂಜೆ’ ಮತ್ತು ‘ಶ್ರೀ ಕೃಷ್ಣದೇವರಾಯ’. ಈ ಎರಡೂ ಚಿತ್ರಗಳು 52 ವರ್ಷಗಳ ಹಿಂದೆ ಫೆಬ್ರವರಿ ತಿಂಗಳಲ್ಲಿ, ಒಂದೇ ವಾರದ ಅಂತರದಲ್ಲಿ ಬಿಡುಗಡೆಯಾಗಿದ್ದವು. ಈ ಎರಡೂ ಚಿತ್ರಗಳು ಕ್ಲಾಸಿಕ್ ಅಷ್ಟೇ ಅಲ್ಲ, ಕನ್ನಡ ಚಿತ್ರರಂಗದಲ್ಲಿ ಟ್ರೆಂಡ್​ಸೆಟರ್ ಚಿತ್ರಗಳೂ ಹೌದು. ಇವುಗಳ ವಿಶೇಷತೆಗಳ ಬಗ್ಗೆ ಒಂದು ಸಣ್ಣ ಮೆಲುಕು ಇಲ್ಲಿದೆ.

| ಚೇತನ್ ನಾಡಿಗೇರ್ ಬೆಂಗಳೂರು

ಶ್ರೀಕೃಷ್ಣದೇವರಾಯ

ಆ ಒಂದು ಅಪವಾದ ಬಿ.ಆರ್. ಪಂತುಲು ಅವರ ಮೇಲಿತ್ತು. 60ರ ದಶಕದಲ್ಲಿ ‘ಚಿನ್ನದ ಗೊಂಬೆ’, ‘ದುಡ್ಡೇ ದೊಡ್ಡಪ್ಪ’, ‘ಎಮ್ಮೆ ತಮ್ಮಣ್ಣ’, ‘ಬೀದಿ ಬಸವಣ್ಣ’, ‘ಚಿನ್ನಾರಿ ಪುಟ್ಟಣ್ಣ’ ಮುಂತಾದ ಹಲವು ಚಿತ್ರಗಳನ್ನು ಮಾಡಿದರೂ, ಕನ್ನಡದಲ್ಲಿ ಯಾವುದೇ ಬಿಗ್ ಬಜೆಟ್ ಚಿತ್ರ ಮಾಡಲಿಲ್ಲ ಎಂಬ ಬೇಸರ ಹಲವರಲ್ಲಿತ್ತು. ಅದಕ್ಕೆ ಪ್ರತಿಯಾಗಿ ಅವರು ತಮಿಳಿನಲ್ಲಿ ‘ಆಯಿರತ್ತಿಲ್ ಒರುವನ್’, ‘ಕರ್ಣನ್’ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿದ್ದರು. ಕನ್ನಡದಲ್ಲಿ ಮಾತ್ರ ಅವರ ಪದ್ಮಿನಿ ಪ್ರೊಡಕ್ಷನ್ಸ್ ಸಂಸ್ಥೆಯಿಂದ ಯಾವುದೇ ಬಿಗ್ ಬಜೆಟ್ ಅಥವಾ ಕಲರ್ ಚಿತ್ರ ಬಂದಿರಲಿಲ್ಲ. ಅದಕ್ಕೆ ಪ್ರತಿಯಾಗಿ ಅವರು ಪ್ರಾರಂಭಿಸಿದ್ದೇ ‘ಶ್ರೀ ಕೃಷ್ಣದೇವರಾಯ’ ಎಂಬ ಐತಿಹಾಸಿಕ ಚಿತ್ರ. ಈ ಚಿತ್ರವು ಕನ್ನಡದ 2ನೇ ಕಲರ್ ಚಿತ್ರವಷ್ಟೇ ಅಲ್ಲ, ರಾಜಕುಮಾರ್ ಅಭಿನಯದ ಮೊದಲ ಕಲರ್ ಚಿತ್ರವಾಗಿತ್ತು.

ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯರ ಜೀವನವನ್ನಾಧರಿಸಿದ ಈ ಚಿತ್ರದಲ್ಲಿ ರಾಜಕುಮಾರ್ ಕೃಷ್ಣದೇವರಾಯರ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನು, ಬಿ.ಆರ್. ಪಂತುಲು ಚಿತ್ರದಲ್ಲಿ ಮಂತ್ರಿ ತಿಮ್ಮರಸುವಾಗಿ ಅಭಿನಯಿಸಿದ್ದರು. ಅಲ್ಲಿಯವರೆಗೂ ಕನ್ನಡ ಚಿತ್ರಗಳು ಅಕ್ಕಪಕ್ಕದ ರಾಜ್ಯಗಳಲ್ಲಿ ಚಿತ್ರೀಕರಣಗೊಂಡಿದ್ದವು. ಉತ್ತರ ಭಾರತದಲ್ಲಿ ಯಾವೊಂದು ಕನ್ನಡ ಚಿತ್ರದ ಚಿತ್ರೀಕರಣವಾಗಿರಲಿಲ್ಲ. ಉತ್ತರ ಭಾರತದಲ್ಲಿ ಅದರಲ್ಲೂ ರಾಜಸ್ತಾನದಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಚಿತ್ರವೆಂಬ ಹೆಗ್ಗಳಿಕೆಯೂ ‘ಶ್ರೀ ಕೃಷ್ಣದೇವರಾಯ’ ಚಿತ್ರಕ್ಕಿದೆ. ಆ ನಂತರ ‘ಹುಲಿಯ ಹಾಲಿನ ಮೇವು’, ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಮುಂತಾದ ಐತಿಹಾಸಿಕ ಚಿತ್ರಗಳ ಯುದ್ಧದ ಸನ್ನಿವೇಶಗಳ ಚಿತ್ರೀಕರಣ ಅಲ್ಲಾಗಿದೆ. ಯುದ್ಧದ ಸನ್ನಿವೇಶಗಳಿಗೆಂದೇ ಆನೆ ಮತ್ತು ಕುದುರೆಗಳನ್ನು ಮದರಾಸಿನಿಂದ ಕರೆದುಕೊಂಡು ಹೋಗಲಾಗಿತ್ತು ಎಂದು ಹೇಳಲಾಗುತ್ತದೆ. ಈ ಚಿತ್ರವು ಬಿಡುಗಡೆಯಾಗಿ ಯಶಸ್ವಿಯಾಗಿದ್ದಷ್ಟೇ ಅಲ್ಲ, ರಾಜ್ಯ ಸರ್ಕಾರದಿಂದ ಮೂರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತ್ತು. ಬಿ.ಆರ್. ಪಂತುಲು ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕರೆ, ಭಾರತಿ ವಿಷ್ಣುವರ್ಧನ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿತ್ತು. ತಮಗೆ ಬಂದ ಅತ್ಯುತ್ತಮ ನಟ ಪ್ರಶಸ್ತಿಯನ್ನು ಬಿ.ಆರ್. ಪಂತುಲು ನಿರಾಕರಿಸುವುದರ ಜತೆಗೆ, ಆ ಪ್ರಶಸ್ತಿಗೆ ಡಾ. ರಾಜಕುಮಾರ್ ಅರ್ಹರು ಎಂದಿದ್ದರು. ಅದರ ಮರು ವರ್ಷದಿಂದ ಅತ್ಯುತ್ತಮ ನಟ ಜತೆಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಕೊಡುವ ಸಂಪ್ರದಾಯ ಶುರುವಾಯಿತು.

ಪ್ರಶಸ್ತಿ ಬಂದಿದ್ದೇ ಆಶ್ಚರ್ಯ: ‘ಶ್ರೀ ಕೃಷ್ಣದೇವರಾಯ’ ಚಿತ್ರದಲ್ಲಿನ ಚಿನ್ನಾದೇವಿ ಪಾತ್ರದ ಅಭಿನಯಕ್ಕಾಗಿ ರಾಜ್ಯ ಸರ್ಕಾರದಿಂದ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದ ಭಾರತಿ ವಿಷ್ಣುವರ್ಧನ್, ಆ ಪ್ರಶಸ್ತಿ ತಮಗೆ ಸಿಕ್ಕಿದ್ದೇ ಆಶ್ಚರ್ಯ ಎನ್ನುತ್ತಾರೆ. ‘ನನಗೆ ಪ್ರಶಸ್ತಿ ಸಿಕ್ಕ ಶ್ರೇಯಸ್ಸು ಪಂತುಲು ಅವರಿಗೆ ಸಲ್ಲುತ್ತದೆ. ಏಕೆಂದರೆ, ಆಗ ನಾನು ಬಹಳ ಬಿಜಿಯಾಗಿದ್ದೆ. ನನ್ನ ಕಾಲ್​ಶೀಟ್ ಸಿಗದೆ ಬಹಳ ದಿನ ನನಗಾಗಿ ಕಾದರು. ಆ ಪಾತ್ರವನ್ನು ಮಾಡುವುದಕ್ಕೆ ಬೇರೆಯವರು ಮುಂದೆ ಬಂದರೂ, ಆ ಪಾತ್ರವನ್ನು ನನ್ನಿಂದಲೇ ಮಾಡಿಸಬೇಕು ಎಂದು ಮಾಡಿಸಿದರು. ನಾನೇ ನಟಿಸಬೇಕು ಎಂಬುದು ಅವರಿಚ್ಛೆಯಾಗಿತ್ತು. ಹಾಗಾಗಿ, ಆ ಪ್ರಶಸ್ತಿ ಅವರಿಗೇ ಸಲ್ಲಬೇಕು. ಇವೆಲ್ಲ ನಿನ್ನೆ-ಮೊನ್ನೆ ನಡೆದ ಹಾಗಿದೆ. ವರ್ಷಗಳು ಎಷ್ಟು ಬೇಗ ಉರುಳುತ್ತವೋ ಗೊತ್ತೇ ಆಗುವುದಿಲ್ಲ’ ಎನ್ನುತ್ತಾರೆ.

ಗೆಜ್ಜೆ ಪೂಜೆ

ಅಷ್ಟರಲ್ಲಾಗಲೇ ಮಹಿಳಾ ಪ್ರಧಾನ ಚಿತ್ರಗಳ ಟ್ರೆಂಡ್ ಕನ್ನಡದಲ್ಲಿ ಸಣ್ಣಮಟ್ಟದಲ್ಲಿ ಶುರುವಾಗಿತ್ತು. ಪುಟ್ಟಣ್ಣನವರೇ ‘ಬೆಳ್ಳಿ ಮೋಡ’ ಮತ್ತು ‘ಕಪು್ಪ ಬಿಳುಪು’ ಚಿತ್ರಗಳನ್ನು ತೆರೆಗೆ ತಂದಿದ್ದರು. ಆದರೆ, ‘ಗೆಜ್ಜೆ ಪೂಜೆ’ ಚಿತ್ರದಿಂದ ಮಹಿಳಾ ಪ್ರಧಾನ ಚಿತ್ರಗಳಿಗೆ ದೊಡ್ಡ ಮಾರುಕಟ್ಟೆ ಸೃಷ್ಟಿಯಾಗುವುದರ ಜತೆಗೆ, ನಂತರದ ದಿನಗಳಲ್ಲಿ ಹಲವು ಚಿತ್ರಗಳು ನಿರ್ವಣವಾದವು. ಅದರಲ್ಲೂ ಪುಟ್ಟಣ್ಣನವರೇ ಮುಂದಿನ ದಿನಗಳಲ್ಲಿ ‘ಎಡಕಲ್ಲು ಗುಡ್ಡದ ಮೇಲೆ’, ‘ಉಪಾಸನೆ’, ‘ಶುಭ ಮಂಗಳ’, ‘ಬಿಳಿ ಹೆಂಡ್ತಿ’, ‘ಧರ್ಮಸೆರೆ’ ಮುಂತಾದ ಸಾಲುಸಾಲು ಮಹಿಳಾ ಪ್ರಧಾನ ಚಿತ್ರಗಳನ್ನು ತೆರೆಗೆ ತಂದರು. ‘ಗೆಜ್ಜೆ ಪೂಜೆ’, ಎಂ.ಕೆ. ಇಂದಿರಾ ಅವರ ಅದೇ ಹೆಸರಿನ ಕಾದಂಬರಿ ಆಧರಿಸಿದ ಚಿತ್ರ. ದೇವದಾಸಿ ಪದ್ಧತಿಯ ಕುರಿತಾದ ಈ ಕಥೆಯನ್ನು ಚಿತ್ರಕ್ಕೆ ಹೊಂದುವಂತೆ ಒಂದಿಷ್ಟು ಬದಲಿಸಿ ಚಿತ್ರಕಥೆ ಬರೆದಿದ್ದರು ಪುಟ್ಟಣ್ಣ ಕಣಗಾಲ್. ಇದು ಸ್ಕ್ರಿಪ್ಟ್ ಇಲ್ಲದೆ ನಿರ್ವಣವಾದ ಚಿತ್ರ ಎಂದು ಹೇಳಲಾಗುತ್ತದೆ. ಆ ಕಥೆಯನ್ನು ಹೇಗೆ ತೆರೆಗೆ ತರಬೇಕು ಎಂಬ ಸ್ಪಷ್ಟ ಚಿತ್ರಣ ಪುಟ್ಟಣ್ಣನವರ ಮನಸ್ಸಿನಲ್ಲಿತ್ತಂತೆ. ಅದಕ್ಕೆ ಅನುಗುಣವಾಗಿ ಸ್ಥಳದಲ್ಲೇ ಸಂಭಾಷಣೆಗಳನ್ನು ರಚಿಸಿ ಚಿತ್ರೀಕರಣ ಮಾಡಲಾಯಿತು ಎಂದು ಹೇಳಲಾಗುತ್ತದೆ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮೂರು ಪ್ರತಿಭೆಗಳ ಆಗಮನವಾಯಿತು. ನಾಯಕ ನಟ ಗಂಗಾಧರ್, ಆರತಿ ಮತ್ತು ಲೋಕನಾಥ್ ಅವರನ್ನು ಈ ಚಿತ್ರದ ಮೂಲಕ ಪರಿಚಯಿಸಿದರು ಪುಟ್ಟಣ್ಣ. ಮಿಕ್ಕಂತೆ ಕಲ್ಪನಾ, ಲೀಲಾವತಿ, ಅಶ್ವತ್ಥ್, ಪಂಡರೀಬಾಯಿ ಮುಂತಾದ ದಿಗ್ಗಜ ಕಲಾವಿದರಿದ್ದರು. ರಾಷ್ಟ್ರ ಮಟ್ಟದಲ್ಲಿ ಈ ಚಿತ್ರಕ್ಕೆ ಅತ್ಯುತ್ತಮ ಚಿತ್ರ ಮತ್ತು ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಸಿಕ್ಕರೆ, ರಾಜ್ಯ ಮಟ್ಟದಲ್ಲಿ ಒಟ್ಟು ಐದು ಪ್ರಶಸ್ತಿಗಳನ್ನು ಈ ಚಿತ್ರ ತನ್ನದಾಗಿಸಿಕೊಂಡಿತ್ತು. ಚಿತ್ರದ ಸಂಗೀತಕ್ಕೆ ವಿಜಯಭಾಸ್ಕರ್ ಅವರಿಗೆ ಪ್ರಶಸ್ತಿ ಸಿಗಬೇಕಿತ್ತು ಎಂಬ ಅಭಿಪ್ರಾಯ ಹಲವರಲ್ಲಿತ್ತಾದರೂ, ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಯು ‘ಶ್ರೀ ಕೃಷ್ಣದೇವರಾಯ’ ಚಿತ್ರಕ್ಕಾಗಿ ಟಿ.ಜಿ. ಲಿಂಗಪ್ಪ ಅವರಿಗೆ ಸಿಕ್ಕಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net