ವಿವೇಕ್ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ

Vivek
Published on

ಬೆಂಗಳೂರು: ಆಗಸ್ಟ್ 9ರಂದು ‘ಲವ್ ಯೂ ರಚ್ಚು’ ಸಿನಿಮಾ ಶೂಟಿಂಗ್ ವೇಳೆ ನಡೆದ ದುರ್ಘಟನೆ ಇಡೀ ಕನ್ನಡ ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿತ್ತು. ಸಾಹಸ ದೃಶ್ಯದ ಚಿತ್ರೀಕರಣದ ಸಂದರ್ಭದಲ್ಲಿ ಫೈಟರ್ ವಿವೇಕ್ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದರು. ಇದೀಗ ಮೃತ ಕುಟುಂಬಕ್ಕೆ ಚಿತ್ರದ ನಿರ್ವಪಕ ಗುರು ದೇಶಪಾಂಡೆ ಪರಿಹಾರ ನೀಡಿದ್ದಾರೆ.

ಬುಧವಾರ ನೇರವಾಗಿ ವಿವೇಕ್ ಮನೆಗೆ ತೆರಳಿದ ಗುರು ದೇಶಪಾಂಡೆ ಮತ್ತು ಸಾಹಸ ನಿರ್ದೇಶಕ ವಿನೋದ್ ಹಣಕಾಸಿನ ನೆರವು ನೀಡಿದ್ದಾರೆ. ಈ ವೇಳೆ ಪ್ರತಿಕ್ರಿಯೆ ನೀಡಿರುವ ಅವರು, ‘ನಾನೆಲ್ಲಿಯೂ ಕಣ್ಮರೆಯಾಗಿಲ್ಲ. ಕಾನೂನು ರೀತಿಯಲ್ಲಿಯೇ ವಿಚಾರಣೆಯಲ್ಲಿ ಭಾಗವಹಿಸಿದ್ದೇನೆ. ಇದೀಗ ಜಾಮೀನು ಸಿಗು ತ್ತಿದ್ದಂತೆ ಆತನ ಮನೆಗೆ ಬಂದಿದ್ದೇನೆ. ವಿವೇಕ್​ನನ್ನು ತಂದು ಕೊಡುವ ಶಕ್ತಿ ನನಗಿಲ್ಲ. ನನ್ನ ಇನ್ನೊಬ್ಬ ಮಗ ಎಂದುಕೊಂಡು ಆತನ ಸಹೋದರನ ವಿದ್ಯಾಭ್ಯಾಸಕ್ಕೆ ಜತೆಗಿರುತ್ತೇನೆ. ಇದೀಗ 5 ಲಕ್ಷ ರೂ ಮೊತ್ತದ ಚೆಕ್ ನೀಡಿದ್ದೇನೆ. ‘ಲವ್ ಯೂ ರಚ್ಚು’ ಸಿನಿಮಾ ಬಿಡುಗಡೆ ಆದ ಬಳಿಕ ಮತ್ತೆ 5 ಲಕ್ಷ ನೀಡುತ್ತೇನೆ’ ಎಂದಿದ್ದಾರೆ ಗುರು ದೇಶಪಾಂಡೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net