‘45’ ಝಲಕ್ : ಕನ್ನಡದ ಮಲ್ಟಿಸ್ಟಾರರ್ ಸಿನಿಮಾದ ಟೀಸರ್ ಬಿಡುಗಡೆ

45
Published on

ಬೆಂಗಳೂರು: ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮೊದಲ ಬಾರಿಗೆ ಆ್ಯಕ್ಷನ್-ಕಟ್ ಹೇಳುತ್ತಿರುವ ಮಲ್ಟಿಸ್ಟಾರರ್ ಸಿನಿಮಾ ‘45’. ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ. ಶೆಟ್ಟಿ ಮುಖ್ಯಭೂಮಿಕೆಯಲ್ಲಿರುವ ಚಿತ್ರವಿದು. ಈ ಹಿಂದೆ ಮೂವರು ನಾಯಕರ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದ ಚಿತ್ರತಂಡ, ಇದೀಗ ಯುಗಾದಿ ಸಂಭ್ರಮದಲ್ಲಿ ಟೀಸರ್ ಬಿಡುಗಡೆ ಮಾಡಿದೆ. ಉಪೇಂದ್ರ ಅವರ ‘ಓಂ ಚಿತ್ರದ ಡೈರೆಕ್ಟರ್ ನಾನೇ’ ಎಂಬ ಡೈಲಾಗ್‌ಗೆ ‘ಆ ಫಿಲಂ ಹೀರೋ ನಾನೇ’ ಎಂಬ ಶಿವಣ್ಣ ‘ಓಂ’ ಸ್ಟೈಲ್ ಕೌಂಟರ್ ‘45’ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸುವಂತಿದೆ. ಟೀಸರ್ ಬಿಡುಗಡೆಯಲ್ಲಿ ಅರ್ಜುನ್ ಜನ್ಯ, ‘ಸಿನಿಮಾದ ಮೂಲ ಕಾರಣಕರ್ತರು ಶಿವಣ್ಣ. ಅವರಿಂದಲೇ ಚಿತ್ರ ಪೂರ್ಣಗೊಳ್ಳಲು ಸಾಧ್ಯವಾಯಿತು. ಬಳಿಕ ಉಪೇಂದ್ರ ಹಾಗೂ ರಾಜ್ ಬಿ.ಶೆಟ್ಟಿ ಅವರನ್ನು ಒಪ್ಪಿಸಿದೆ. ಈ ಜರ್ನಿ ಆರಂಭಕ್ಕೂ ಮುನ್ನ ನಾನೊಂದು ನೀಲನಕ್ಷೆ ಹಾಕಿಕೊಂಡಿದ್ದೆ. ಅದರಂತೆ ಮುಂದುವರಿದೆ. ಹಾಲಿವುಡ್ ಅವರಿಂದ ಸಿಜಿ (ಕಂಪ್ಯೂಟರ್ ಗ್ರಾಫಿಕ್ಸ್) ಮಾಡಿಸುವಾಗಲೂ ಈ ನೀಲನಕ್ಷೆ ಅಡಿಯಲ್ಲಿ ಕೆಲಸಗಳು ನಡೆದವು. ಅಚ್ಚುಕಟ್ಟಾದ ಪ್ಲಾನಿಂಗ್‌ನಿಂದ ಒಂದು ವರ್ಷದಲ್ಲಿ ಸಿನಿಮಾ ಮುಗಿಯಲು ಸಾಧ್ಯವಾಯಿತು. ಇಲ್ಲಿರುವ ಮೂವರು ನಾಯಕರ ಅಭಿಮಾನಿ ನಾನು. ಅವರಿಗೆ ನಿರ್ದೇಶನ ಮಾಡಿದ್ದು ನನ್ನ ಪುಣ್ಯವೇ ಸರಿ. ಚಿತ್ರದಲ್ಲಿ ‘ಓಂ’ ಛಾಯೆ ಇದೆ’ ಎಂದು ಒಪ್ಪಿಕೊಂಡರು.

ಕ್ಲೈಮ್ಯಾಕ್ಸ್‌ನಲ್ಲಿ ಹೊಸ ಜಗತ್ತಿನ ಅನಾವರಣ: ‘45’ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆಯೇ ಶಿವಣ್ಣ ಅನಾರೋಗ್ಯದ ವಿಚಾರ ಜಗಜ್ಜಾಹೀರಾಗಿತ್ತು. ಎದೆಗುಂದದೆ ಚಿತ್ರದ ಎಲ್ಲ ಕಾರ್ಯಗಳನ್ನು ಅವರು ಮುಗಿಸಿಕೊಟ್ಟರು. ಈ ಬಗ್ಗೆ ಶಿವಣ್ಣ, ‘ಯಾವುದೇ ಕೆಲಸವಿರಲಿ ಕಮಿಟ್‌ಮೆಂಟ್ ಹಾಗೂ ಜವಾಬ್ದಾರಿ ಮುಖ್ಯ. ಅದನ್ನು ನಿರ್ವಹಿಸಿದ್ದೇನೆ. ಕಿಮೋ ವಿಚಾರ ತಿಳಿದು ಅರ್ಜುನ್ ಮಗುವಿನಂತೆ ಅತ್ತಿದ್ದರು. ಚಿತ್ರೀಕರಣ ಮುಂದೂಡುವ ಮಾತಾಡಿದ್ದರು. ಆದರೆ, ನಾನೇ ಬೇಡ ಅಂತ ಎಲ್ಲವನ್ನೂ ಮುಗಿಸಿಕೊಟ್ಟೆ. ದೇವರ ಆಶೀರ್ವಾದ ಹಾಗೂ ಪ್ರಾರ್ಥನೆಯಿಂದ ಎಲ್ಲವೂ ಸರಾಗವಾಗಿ ನಡೆಯಿತು. ‘45’ ಉತ್ತಮ ಸ್ಕೋರ್ ಮಾಡುತ್ತೆ. ಚಿತ್ರದ ಕ್ಲೈಮ್ಯಾಕ್ಸ್ ಹೊಸ ಜಗತ್ತಿಗೆ ಕರೆದುಕೊಂಡು ಹೋಗುವುದಂತೂ ಸತ್ಯ. ಜತೆಗೆ ಈ ಮೂಲಕ ಅರ್ಜುನ್ ಭಾರತದ ಅತ್ಯುತ್ತಮ ನಿರ್ದೇಶಕರ ಪೈಕಿ ಓರ್ವರಾಗುತ್ತಾರೆ’ ಎಂದು ಭವಿಷ್ಯ ನುಡಿದರು.

‘ಸೋಲ್ ಸ್ಟಾರ್’ ರಾಜ್ ಬಿ. ಶೆಟ್ಟಿ: ರಾಜ್ ಬಿ.ಶೆಟ್ಟಿಗೆ ನಟ ಶಿವರಾಜ್‌ಕುಮಾರ್ ‘ಸೋಲ್ ಸ್ಟಾರ್’ ಎಂದು ಬಿರುದು ನೀಡಿದರು. ಬಳಿಕ ರಾಜ್ ಶೆಟ್ಟಿ, ‘ಇಲ್ಲಿ ಇಬ್ಬರು ಸೂಪರ್‌ಸ್ಟಾರ್ ಇದ್ದಾರೆ. ನಾನು ಕೇವಲ ಆ್ಯಕ್ಟರ್ ಮಾತ್ರ. ನಾನು ಆ್ಯಕ್ಟಿಂಗ್ ಮಾಡಿದ್ರೆ ಡೈರೆಕ್ಷನ್‌ನಿಂದ ದೂರ ಉಳಿಯಬೇಕಾಗುತ್ತದೆ ಎಂಬ ಕಾರಣಕ್ಕೆ ಅರ್ಜುನ್ ಸರ್‌ಗೆ ಬೇರೆ ಕಲಾವಿದರನ್ನು ನೋಡಿಕೊಳ್ಳಿ ಎಂದು ಸೂಚಿಸಿದ್ದೆ. ಆದರೆ, ಅವರು ಈ ಕಥೆಗೆ ನೀವೇ ಬೇಕು ಎಂದರು. ಅದಕ್ಕೆ ಒಪ್ಪಿಕೊಂಡೆ’ ಎಂದರು.

ಮೇಕಿಂಗ್ ಅದ್ಭುತ: ‘ಓಂ 2’ ಚಿತ್ರದ ಬಗ್ಗೆ ಮೌನ ಮುರಿದ ಉಪೇಂದ್ರ, ‘ಅದು ಸಸ್ಪೆನ್ಸ್, ಎಲ್ಲವನ್ನೂ ಇಲ್ಲಿಯೇ ಹೇಳಲು ಸಾಧ್ಯವಿಲ್ಲ’ ಎಂದರು. ಹಾಗೇ ‘45’ ಕುರಿತು, ‘ಇಂತಹ ಒಳ್ಳೆಯ ಕಥೆಯನ್ನು ನೀವೆ ನಿರ್ದೇಶನ ಮಾಡಿ ಎಂದು ಅರ್ಜುನ್‌ಗೆ ಹೇಳಿದ್ದು ಶಿವಣ್ಣ ಅವರ ದೊಡ್ಡಗುಣ. ಇಂಡಸ್ಟ್ರಿಗೆ ಸೂಪರ್‌ಸ್ಟಾರ್ ನಿರ್ಮಾಪಕರ ಅಗತ್ಯವಿದೆ. ಅದನ್ನು ರಮೇಶ್ ರೆಡ್ಡಿ ತುಂಬಲಿದ್ದಾರೆ. ಕೆನಡಾದಲ್ಲಿ ಸಿಜಿ ಮಾಡಿಸಿದ್ದಾರೆ. ಮೇಕಿಂಗ್ ಅದ್ಭುತವಾಗಿ ಮೂಡಿಬಂದಿದೆ’ ಎಂದು ಹೇಳಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net