

ಬೆಂಗಳೂರು: ಸಾಮಾನ್ಯವಾಗಿ ಒಂದು ಸಿನಿಮಾಗೆ ಒಬ್ಬರು ಇಲ್ಲ ಇಬ್ಬರು ನಿರ್ವಪಕರು ಇರುತ್ತಾರೆ. ಅಬ್ಬಬ್ಬಾ ಎಂದರೆ ನಾಲ್ಕು ಜನ ಇರುತ್ತಾರೆ. ಆದರೆ ಸೃಜನ್ ಲೊಕೇಶ್ ಮತ್ತು ಮೇಘನಾ ರಾಜ್ ನಟಿಸಿರುವ ‘ಸೆಲ್ಪಿ ಮಮ್ಮಿ ಗೂಗಲ್ ಡ್ಯಾಡಿ’ ಚಿತ್ರಕ್ಕೆ ಬರೋಬ್ಬರಿ 40 ಮಂದಿ ನಿರ್ವಪಕರಿದ್ದಾರೆ. ಮೊಬೈಲ್ ಫೋನ್ಗೆ ಅಡಿಕ್ಟ್ ಆಗಿರುವವರ ಕಥೆಯನ್ನು ಹಾಸ್ಯದ ಮೂಲಕ ಹೇಳಲು ಹೊರಟಿರುವ ಈ ಚಿತ್ರಕ್ಕೆ 40 ಮಂದಿ ಬಂಡವಾಳ ಹೂಡಿರುವುದು ವಿಶೇಷವಾಗಿದೆ. ‘ಸೈಬರ್ ಯುಗದೋಳ್ ನವಯುಗ ಪ್ರೇಮ ಕಾವ್ಯ’ ಸೇರಿ 2-3 ಚಿತ್ರಗಳಿಗೆ ಆಕ್ಷನ್-ಕಟ್ ಹೇಳಿದ್ದ ಮಧುಚಂದ್ರ ಈಗ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
‘ನನ್ನ ಕಥೆಯನ್ನು ಪರಿಚಯಸ್ಥರಿಗೆ ಹೇಳಿ, ಅವರ ಅಭಿಪ್ರಾಯ ಸಂಗ್ರಹಿಸುವ ಉದ್ದೇಶದಿಂದ ಒಂದಷ್ಟು ಮಂದಿಗೆ ಹೇಳಿದ್ದೆ. ಕಥೆ ಕೇಳಿದ ಅವರೆಲ್ಲರೂ, ಇದು ನಮ್ಮ ಮನೆಯಲ್ಲಿಯೂ ಇರುವ ಸಮಸ್ಯೆ ಎಂದು ಕಥೆ ಜತೆ ಕನೆಕ್ಟ್ ಆದರು. ಕೆಲ ದಿನಗಳ ನಂತರ ಅವರೆಲ್ಲರೂ ಬಂದು ಈ ಚಿತ್ರಕ್ಕೆ ನಾವೇ ಬಂಡವಾಳ ಹೂಡುತ್ತೇವೆ ಎಂದು ನಿರ್ವಪಕರಾಗಿದ್ದಾರೆ. ಮೂರ್ನಾಲ್ಕು ಮಂದಿ ನಿರ್ವಪಕರು ಇರುವಾಗಲೇ ಚಿತ್ರ ನಿಂತು ಹೋಗುತ್ತದೆ, ಇನ್ನು 40 ಮಂದಿ ಇರುವಾಗ ಏನೇನು ಆಗುತ್ತದೋ ಎಂದು ಕೆಲವರು ಹೇಳಿದರು. ಆದರೆ ನಮ್ಮ ಚಿತ್ರ ಕಂಪ್ಲೀಟ್ ಆಗಿ ರಿಲೀಸ್ ಹಂತಕ್ಕೂ ಬಂದಿದೆ’ ಎನ್ನುತ್ತಾರೆ ನಿರ್ದೇಶಕ ಮಧುಚಂದ್ರ.
ಇತ್ತೀಚಿನ ದಿನಗಳಲ್ಲಿ ಮನೆಮಂದಿಯೆಲ್ಲ ಮೊಬೈಲ್ಫೋನ್ಗೆ ಅಂಟಿಕೊಂಡಿರುತ್ತಾರೆ, ಅದರಿಂದ ಆಗುವ ಪರಿಣಾಮಗಳೇನು ಎಂಬುದೇ ಈ ‘ಸೆಲ್ಪಿ ಮಮ್ಮಿ, ಗೂಗಲ್ ಡ್ಯಾಡಿ’. ಈ ಚಿತ್ರದಲ್ಲಿ ಸೃಜನ್ ಲೊಕೇಶ್ ಮತ್ತು ಮೇಘನಾ ರಾಜ್ ದಂಪತಿಯಾಗಿ ಕಾಣಿಸಿಕೊಂಡಿದ್ದಾರೆ. ಇದೇ ಸಮಯದಲ್ಲಿ ನಿರ್ವಪಕರ ಬಗ್ಗೆ ಮಾತನಾಡಿದ ಸೃಜನ್, ‘ನನ್ನ ಪ್ರಕಾರ ಈ ಚಿತ್ರಕ್ಕೆ 80 ಮಂದಿ ನಿರ್ವಪಕರು. ಏಕೆಂದರೆ 40 ಮಂದಿ ಗಂಡಂದಿರು ಇನ್ವೆಸ್ಟ್ ಮಾಡುತ್ತೇವೆ ಎಂದು ಹೊರಟಾಗ, ಅವರ ಪತ್ನಿಯರು ಸಹ ಸಹಕಾರ ನೀಡಿದ್ದಾರೆ. ಹಾಗಾಗಿ ಇದಕ್ಕೆ 80 ಮಂದಿ ನಿರ್ವಪಕರು. ಎಲ್ಲರಿಗೂ ನನ್ನ ಧನ್ಯವಾದಗಳು’ ಎಂದು ಸುದ್ದಿಗೋಷ್ಠಿಯಲ್ಲಿ ನಗೆ ಚಟಾಕಿ ಹಾರಿಸಿದರು.