

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್.ನಾರಾಯಣ್ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ನವರಸ ನಟನಾ ಅಕಾಡೆಮಿ ಎರಡು ವರ್ಷ ತುಂಬಿ ಮೂರನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ.
ಈ ಎರಡು ವರ್ಷಗಳಲ್ಲಿ ಹತ್ತಾರು ಬ್ಯಾಚ್ಗಳಿಗೆ ನಟನೆ, ನಿರ್ದೇಶನದ ಜತೆಗೆ ಬಣ್ಣದ ಲೋಕದ ಇತರ ಚಟುವಟಿಕೆಗಳ ಬಗ್ಗೆ ತರಬೇತಿ ನೀಡಿರುವ ಅಕಾಡೆಮಿ, ಫೆ.10ರಿಂದ ಹೊಸ ಬ್ಯಾಚ್ ಆರಂಭಿಸುತ್ತಿದೆ. ಈ ಮೊದಲು ವಾರಾಂತ್ಯದಲ್ಲಿ ನಡೆಯುತ್ತಿದ್ದ ನಾಲ್ಕು ಮತ್ತು ಆರು ತಿಂಗಳ ಕೋರ್ಸ್ಗಳು, ಇನ್ಮುಂದೆ ಸಂಜೆ 6 ಗಂಟೆಯಿಂದ 9 ಗಂಟೆವರೆಗೆ ನಡೆಯಲಿವೆ.
ಈ ಮೂಲಕ ಕೋರ್ಸ್ಗೆ ಸೇರುವ ಉದ್ಯೋಗಸ್ಥರಿಗೆ ಅನುಕೂಲ ಮಾಡಿಕೊಡಲು ಅಕಾಡೆಮಿ ಮುಂದಾಗಿದೆ. ಪ್ರಾಂಶುಪಾಲರಾದ ಎಸ್.ನಾರಾಯಣ್ ಹಾಗೂ ಎಸ್.ಮಹೇಂದರ್, ನಿರ್ದೇಶಕ ಲಕ್ಕಿ ಶಂಕರ್ ಸೇರಿ ಖ್ಯಾತ ನಿರ್ದೇಶಕರು, ನಟರು, ಛಾಯಾಗ್ರಾಹಕರು ತರಗತಿ ನೀಡಲಿದ್ದು, ಪ್ರಾಕ್ಟಿಕಲ್ಗೆ ಹೆಚ್ಚು ಒತ್ತು ನೀಡಲಿದ್ದಾರೆ. ನೃತ್ಯ ನಿರ್ದೇಶಕ, ಅಕಾಡೆಮಿ ವ್ಯವಸ್ಥಾಪಕ ಮಾಲೂರು ಶ್ರೀನಿವಾಸ್ ನೃತ್ಯ ಕಲಿಸಿಕೊಡಲಿದ್ದಾರೆ. ನವರಸ ನಟ ಜಗ್ಗೇಶ್ ಸಹಕಾರದೊಂದಿಗೆ ಸಂಸ್ಥೆ ಯಶಸ್ವಿಯಾಗಿ ಮೂರನೇ ವರ್ಷಕ್ಕೆ ಪ್ರವೇಶಿಸುತ್ತಿದೆ.