31days movie review: 31 ದಿನಗಳ ನಲಿವು-ನೋವಿನ ಕಥೆ

31 days a
Published on

ಚಿತ್ರ: 31 ಡೇಸ್

ನಿರ್ದೇಶನ: ರಾಜಾ ರವಿಕುಮಾರ್

ತಾರಾಗಣ: ನಿರಂಜನ್ ಶೆಟ್ಟಿ, ಪ್ರಜ್ವಲಿ ಸುವರ್ಣ, ಮಂಜು, ಅಕ್ಷಯ್ ಮತ್ತಿತರರು

ಶಿವ ಸ್ಥಾವರಮಠ

ಒಬ್ಬರ ಮೇಲೆ ನಮಗೆ ಪ್ರೀತಿ ಮೂಡಬಹುದು. ಆದರೆ, ಅದನ್ನು ಉಳಿಸಿಕೊಳ್ಳುವುದೇ ದೊಡ್ಡ ಚಾಲೆಂಜ್. ಕೆಲವರು ಅರ್ಧಕ್ಕೆ ಕೈಬಿಟ್ಟು ಹೋಗುತ್ತಾರೆ. ಇನ್ನು ಕೆಲವರು ಪ್ರೀತಿ ಗೆಲ್ಲುವಲ್ಲಿ ವಿಫಲವಾಗುತ್ತಾರೆ. ಹಾಗಾದರೆ, ಪ್ರೀತಿ ಎಂದರೆ ಇಷ್ಟೇನಾ? ಇಲ್ಲ, ಎರಡು ಮನುಸ್ಸುಗಳು ರಾಗ-ದ್ವೇಷವಿಲ್ಲದೇ ಅರ್ಥ ಮಾಡಿಕೊಂಡರೆ ಎಂತಹ ಪ್ರೀತಿಯನ್ನು ನಾವು ಗೆಲ್ಲಬಹುದು ಎನ್ನುವುದನ್ನು ರಾಜಾ ರವಿಕುಮಾರ್ ನಿರ್ದೇಶನದ ‘31 ಡೇಸ್’ ಚಿತ್ರ ನಿರೂಪಿಸುತ್ತದೆ.

ಆತ ನಿರಂಜನ್. ಅಪ್ಪನ ವಿರೋಧದ ನಡುವೆಯೂ ಊರು ತೊರೆದು ಐಷಾರಾಮಿ ಜೀವನಕ್ಕಾಗಿ ಬೆಂಗಳೂರಿಗೆ ಬರುತ್ತಾನೆ. ಆಸೆ ಕಣ್ಣಿನಿಂದ ಬಂದ ನಿರಂಜನನಿಗೆ ನಿರಾಸೆಯಾಗುತ್ತದೆ. ಆ ವೇಳೆ ನಿಖಿತಾ (ಪ್ರಜ್ವಲಿ) ಮೇಲೆ ಆತನಿಗೆ ಪ್ರೀತಿ ಮೂಡುತ್ತದೆ. ಪ್ರೀತಿಗೆ ಸಮ್ಮತಿಯೂ ಸಿಗುತ್ತದೆ. ಆದರೆ, ಎಂಬಿಎ ಓದಿರುವ ನಿಖಿತಾಗೆ ವಿದೇಶಕ್ಕೆ ಹಾರಬೇಕು ಎನ್ನುವುದು ಕನಸು. ಇನ್ನು ಊರಿಗೆ ಮರಳಿ ಅಪ್ಪ-ಅಮ್ಮನ ಜತೆ ಬದುಕು ಸಾಗಿಸಬೇಕು ಎನ್ನುವುದು ನಿರಂಜನ್ ನಿರ್ಧಾರ. ಇದರಲ್ಲಿ ಇಬ್ಬರು ಉತ್ತರ-ಧ್ರುವ. ಆಗ ನಿಖಿತಾ, ನಿರಂಜನ್‌ಗೆ 31 ದಿನಗಳ ಟಾಸ್ಕ್ ನೀಡುತ್ತಾಳೆ. ಹಾಗಾದರೆ, ಆ ಟಾಸ್ಕ್ ಏನು? ಅದನ್ನು ನಿರಂಜನ್ ಯಶಸ್ವಿಯಾಗಿ ಪೂರೈಸುತ್ತಾನಾ? ತಿಳಿಯಲು ‘31 ಡೇಸ್’ ಸಿನಿಮಾ ನೋಡಬೇಕಷ್ಟೇ.

‘31 ಡೇಸ್’ ಯುವ ಮನಸ್ಸುಗಳ ಮೇಲೆ ಗಾಢವಾದ ಪರಿಣಾಮ ಬೀರುವ ಕಥೆ. ಈ ಆಧುನಿಕ ಜೀವನದಲ್ಲಿ ಪ್ರೀತಿ ಎಂದರೆ ಕೇವಲ ಆಕರ್ಷಣೆ, ಮೋಹಕ್ಕೆ ಸೀಮಿತವಾಗಿಬಿಟ್ಟಿದೆ. ಇಂತಹ ಅಂಶಗಳನ್ನೇ ಇಟ್ಟುಕೊಂಡು ನಿರಂಜನ್ ಮಧುರವಾದ ಕಥೆ ಬರೆದಿದ್ದಾರೆ. ಆ ಕಥೆಗೆ ತಕ್ಕಂತೆ ರಾಜಾ ರವಿಕುಮಾರ್ ಈ ಸಿನಿಮಾನ ತೆರೆ ಮೇಲೆ ತಂದಿದ್ದಾರೆ. ಬಹುತೇಕ ಕಥೆ ಒಂದೇ ಮನೆಯಲ್ಲಿ ಸಾಗುತ್ತದೆ. ಅರ್ಥಗರ್ಭಿತ ಸಂಭಾಷಣೆ, ತುಟಿ ಮೇಲೆ ನಗು ತರಿಸುವ ಕಾಮಿಡಿ ಚಿತ್ರವನ್ನು ನೋಡಿಸಿಕೊಳ್ಳುತ್ತದೆ. ನಿರಂಜನ್ ಶೆಟ್ಟಿ ಇಡೀ ಕಥೆಯನ್ನು ಹೊತ್ತು ಸಾಗಿದ್ದು, ಚಿತ್ರದ ಕೇಂದ್ರಬಿಂದು ಅವರೇ. ಪ್ರಜ್ವಲಿ ಸುವರ್ಣ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಚಿತ್ರದಾದ್ಯಂತ ಇರುವ ನಾಯಕ ಮತ್ತು ನಾಯಕಿ ನಡುವಿನ ಜುಗಲ್‌ಬಂದಿ ಹಾಗೂ ಜಗಳಬಂದಿ ಇಷ್ಟವಾಗುತ್ತದೆ. ವಿ.ಮನೋಹರ್ ತಮ್ಮ 150ನೇ ಸಿನಿಮಾಕ್ಕೆ ಮಧುರವಾದ ಸಂಗೀತ ನೀಡಿದ್ದು, ಹಾಡುಗಳು ಇಷ್ಟವಾಗುತ್ತವೆ.

ರೇಟಿಂಗ್: 3.5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net