ಮಧುರವಾದ ‘31 ಡೇಸ್’: ಚಿತ್ರದ ಆಡಿಯೋ ರಿಲೀಸ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

31 DAYS
Published on

ಬೆಂಗಳೂರು: ‘31 ಡೇಸ್’ ಉತ್ತಮ ಕಂಟೆಂಟ್ ಇರುವ ಸಿನಿಮಾ. ಈ ಕಾರಣಕ್ಕಾಗಿಯೇ ಹಾಕಿದ ಬಂಡವಾಳದಲ್ಲಿ ಶೇ.70ರಷ್ಟು ವಾಪಸ್ ಬಂದಿದೆ. ಕನ್ನಡದಲ್ಲಿ ಮಧ್ಯಮ ವರ್ಗದ ಬಜೆಟ್ ಸಿನಿಮಾಗಳಿಗೆ ಹೆಚ್ಚು ಆದ್ಯತೆ ನೀಡಬೇಕು. ಇದು ಚಿತ್ರೋದ್ಯಮ ಉನ್ನತಿಗೆ ಕಾರಣವಾಗುತ್ತದೆ’. - ಇದೇ ಆಗಸ್ಟ್‌ನಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ‘31 ಡೇಸ್’ ಚಿತ್ರದ ನಟ ನಿರಂಜನ್ ಶೆಟ್ಟಿ ಮನದಾಳದ ಮಾತುಗಳು.

ರಾಜಾ ರವಿಕುಮಾರ್ ನಿರ್ದೇಶನದ ಹಾಗೂ ‘ಜಾಲಿಡೇಸ್’ ಖ್ಯಾತಿಯ ನಿರಂಜನ್ ಶೆಟ್ಟಿ, ಪ್ರಜ್ವಲಿ ಸುವರ್ಣ ಅಭಿನಯದ ‘31 ಡೇಸ್’ ಚಿತ್ರವು ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಚಿತ್ರತಂಡವು ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದೆ. ಇತ್ತೀಚೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಸಂಗೀತ ನಿರ್ದೇಶಕ ಗುರುಕಿರಣ್ ಆಡಿಯೋ ರಿಲೀಸ್ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು. ನಟ ನಿರಂಜನ್ ಶೆಟ್ಟಿ, ‘ಕನ್ನಡದಲ್ಲಿ ಕಾಶೀನಾಥ್, ರಿಷಬ್ ಶೆಟ್ಟಿ, ರಾಜ್ ಬಿ.ಶೆಟ್ಟಿ ಹಾಗೂ ಡಾರ್ಲಿಗ್ ಕೃಷ್ಣ ಅವರಂತೆ ಸಣ್ಣ ಬಜೆಟ್‌ನಲ್ಲಿ ಉತ್ತಮ ಕಂಟೆಂಟ್ ಇರುವ ಚಿತ್ರ ನೀಡಲು ಪ್ರಯತ್ನಿಸಬೇಕು. ನಾವು ‘31 ಡೇಸ್’ ಮೂಲಕ ಈ ಪ್ರಯತ್ನ ಮಾಡಿದ್ದೇವೆ. ಅದರಲ್ಲಿ ಯಶಸ್ಸು ಕಂಡಿದ್ದೇವೆ. ಬಿಡುಗಡೆಯಾಗುವ ಮುನ್ನವೇ ಚಿತ್ರಕ್ಕೆ ಹಾಕಿದ ಶೇ.70ರಷ್ಟು ಬಂಡವಾಳ ಬಂದಿದೆ. ರಿಲೀಸ್ ಆದ ಬಳಿಕ ಬಾಕಿ ಮೊತ್ತ ಬರುತ್ತದೆ ಎಂಬ ಭರವಸೆಯಿದೆ. ಕಡಿಮೆ ಬಂಡವಾಳವಾದರೂ ಕಂಟೆಂಟ್‌ಗೆ ಹೆಚ್ಚು ಆದ್ಯತೆ ನೀಡಬೇಕು. ಆ ಕಂಟೆಂಟ್ ಈ ಚಿತ್ರದಲ್ಲಿದೆ. ಇತ್ತೀಚೆಗೆ ಸಿನಿಮಾದ ಫಸ್ಟ್ ಕಾಫಿ ನೋಡಿದಾಗ ಖುಷಿಯಾಯಿತು. ಮನುಷ್ಯ ಒಂದೊಂದು ಬಾರಿ, ಒಂದೊಂದು ಭಾವನೆಯಲ್ಲಿರುತ್ತಾನೆ. ಹಾಗೆಯೇ ಈ ಎಲ್ಲ ಭಾವನೆಗಳು ಇರುವ ಹುಡುಗ ಅಥವಾ ಹುಡುಗಿ ಸಮಯ ಸಂದರ್ಭಕ್ಕಾನುಸಾರವಾಗಿ ಹೇಗೆ ಬದಲಾಗುತ್ತಾರೆ ಎನ್ನುವುದೇ ಚಿತ್ರದ ಕಥೆ’ ಎಂದು ಮಾಹಿತಿ ನೀಡಿದರು. ನಟಿ ಪ್ರಜ್ವಲಿ ಸುವರ್ಣ, ‘ಈ ಹಿಂದೆ ತುಳು ಚಿತ್ರಗಳಲ್ಲಿ ನಟಿಸಿದ್ದೆ. ಇದು ನನ್ನ ಕನ್ನಡದ ಮೊದಲ ಸಿನಿಮಾ. ಹಾಗಾಗಿ, ಕನ್ನಡ ಪ್ರೇಕ್ಷಕರು ನನ್ನನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಕಾತರದಲ್ಲಿದ್ದೇನೆ. ಒಂದೊಳ್ಳೆ ಕಥೆಯಲ್ಲಿ ನಟಿಸಿದ ಹೆಮ್ಮೆಯಿದೆ’ ಎಂದರು. ಚಿತ್ರಕ್ಕೆ ‘ಎನ್ ಸ್ಟಾರ್’ ಎಂಟರ್‌ಪ್ರೈಸಸ್ ಮೂಲಕ ನಾಗವೇಣಿ ಶೆಟ್ಟಿ ಬಂಡವಾಳ ಹೂಡಿದ್ದಾರೆ.

ಮನೋಹರ ಅಭಿನಂದನ

ಸಂಗೀತ ನಿರ್ದೇಶಕ ವಿ.ಮನೋಹರ್ ಸಂಗೀತ ಸಂಯೋಜಿಸಿರುವ 150ನೇ ಸಿನಿಮಾ ಎನ್ನುವುದು ಈ ಚಿತ್ರದ ಹೆಗ್ಗಳಿಕೆ. ಈ ಹಿನ್ನಲೆಯಲ್ಲಿ ಚಿತ್ರತಂಡವು ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿದರು. ಬಳಿಕ ವಿ. ಮನೋಹರ್, ‘ ಸಂಗೀತ ನಿರ್ದೇಶನದ ನನ್ನ 150ನೇ ಸಿನಿಮಾ. ತುಂಬಾ ಸಂತೋಷವಿದೆ. ಸುದೀರ್ಘವಾದ ವೃತ್ತಿ ಅನುಭವದಲ್ಲಿ ‘ಜನುಮದ ಜೋಡಿ’, ‘ಸೂರ್ಯವಂಶ’, ‘ಜೋಡಿಹಕ್ಕಿ’ ಸೇರಿ ಹಲವು ಸಿನಿಮಾಗಳಿಗೆ ಕೆಲಸ ಮಾಡಿದ ಖುಷಿಯಿದೆ. ಆ ಖುಷಿ ಇಂದಿಗೂ ಮುಂದುವರಿದಿದೆ. ಈ ಚಿತ್ರದಲ್ಲಿ 10 ಬಿಟ್ ಸಾಂಗ್‌ಗಳಿವೆ. ಈ ಕಾರಣಕ್ಕಾಗಿ ಈ ಚಿತ್ರ ಸದ್ದು ಮಾಡುತ್ತದೆ ಎಂಬ ಭರವಸೆಯಿದೆ. ನಿರಂಜನ್ ಶೆಟ್ಟಿ ದೊಡ್ಡ ಯಶಸ್ಸಿಗೆ ಕಾಯುತ್ತಿದ್ದಾರೆ. ಅದು ಈ ಚಿತ್ರದಿಂದ ಸಾಧ್ಯವಾಗುತ್ತದೆ ಎಂಬ ಭರವಸೆ ನನ್ನಲ್ಲಿದೆ’ ಎಂದು ಖುಷಿ ಹಂಚಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net