ಆಗಸ್ಟ್‌ನಲ್ಲಿ 31 ಡೇಸ್ : ‘ಜಾಲಿಡೇಸ್’ ನಿರಂಜನ್ ಶೆಟ್ಟಿ ಅಭಿನಯದ ಸಿನಿಮಾ ಬಿಡುಗಡೆಗೆ ಸಿದ್ಧ

niranjana 1
Published on

ಬೆಂಗಳೂರು : ‘ಜಾಲಿಡೇಸ್’, ‘ಕೇಸ್ ನಂ 18/9’ ಖ್ಯಾತಿಯ ನಿರಂಜನ್ ಶೆಟ್ಟಿ ಅಭಿನಯದ, ರಾಜಾ ರವಿಕುಮಾರ್ ನಿರ್ದೇಶನದ ಚಿತ್ರ ‘31 ಡೇಸ್’. ಪೋಸ್ಟ್-ಪ್ರೊಡಕ್ಷನ್ ಕಾರ್ಯಗಳು ಪೂರ್ಣಗೊಂಡು, ಸಿನಿಮಾದ ಸ್ಟ್ ಕಾಪಿ ರೆಡಿಯಾಗಿದೆ. ಎನ್ ಸ್ಟಾರ್ ಎಂಟರ್‌ಪ್ರೈಸಸ್ ಮೂಲಕ ಖುದ್ದು ನಿರಂಜನ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಜತೆಗೆ ವಿ.ಮನೋಹರ್ ಸಂಗೀತ ನಿರ್ದೇಶನದ 150ನೇ ಸಿನಿಮಾ ಎಂಬುದು ಮತ್ತೊಂದು ವಿಶೇಷತೆ. ಈಗಾಗಲೇ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ದೊರೆತಿದ್ದು, ಇತ್ತೀಚೆಗೆ ‘ಮೆಲ್ಲ ಮೆಲ್ಲ, ರತಿ ಜ್ವರ ಜ್ವಾಲೆ’ ಹಾಡು ಬಿಡುಗಡೆಗೊಳಿಸಲಾಗಿದೆ. ಈ ಹಾಡಿಗೆ ಅಭಿಷೇಕ್, ಮೇಘನಾ ಕುಲಕರ್ಣಿ ಧ್ವನಿಯಾಗಿದ್ದು, ನಿರಂಜನ್ ಶೆಟ್ಟಿ ಮತ್ತು ನಾಯಕಿ ಪ್ರಜ್ವಲಿ ಸುವರ್ಣ ಹೆಜ್ಜೆ ಹಾಕಿದ್ದಾರೆ. ಇನ್ನು ಈ ಹಾಡನ್ನು ರೇಡಿಯೋ ಜಾಕಿಗಳ ನೇತೃತ್ವದಲ್ಲಿ ಬಿಡುಗಡೆಗೊಳಿಸಿರುವುದು ಮತ್ತೊಂದು ವಿಶೇಷತೆ. ನಿರಂಜನ್ ಶೆಟ್ಟಿ, ‘ಈ ಸುಂದರ ರೊಮ್ಯಾಂಟಿಕ್ ಸಾಂಗ್‌ನ ಕ್ರೆಡಿಟ್ ಮನೋಹರ್ ಸರ್‌ಗೆ ಸಲ್ಲಬೇಕು. ಅದು ಅವರ ಯೋಚನೆ. ಹೆಬ್ರಿಯ ಒಂದೇ ಮನೆಯಲ್ಲಿ ಸಾಂಗ್ ಶೂಟ್ ಮಾಡಿದ್ದೇವೆ. ಪ್ರೇಮಿಗಳ ನಡುವಿನ ಪಿಸುಮಾತು ಇದಾಗಿದ್ದು, ಪ್ರೀತಿ ಆದಾಗ ಇಬ್ಬರ ನಡುವೆ ಉಂಟಾಗುವ ಮಧುರ ಭಾವನೆಯನ್ನು ವ್ಯಕ್ತಪಡಿಸುವುದಾಗಿದೆ. ಈ ಚಿತ್ರದಲ್ಲಿ 11 ಬಿಟ್ ಸಾಂಗ್‌ಗಳಿವೆ. ಶೀಘ್ರವೇ ಚಿತ್ರದ ಆಡಿಯೋ ಕೂಡ ಬಿಡುಗಡೆ ಮಾಡಲಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ.

ವಿ.ಮನೋಹರ್ ಚಿತ್ರದ ಬಿಗ್‌ಬಾಸ್: 31 ದಿನಗಳ ಜೀವನದ ಪಯಣದ ಕಥೆ ಇದಾಗಿದ್ದು, ‘ಬಿಗ್‌ಬಾಸ್’ ಶೋನಂತೆಯೇ ಫೀಲ್ ನೀಡುತ್ತದೆ ಎನ್ನುವ ನಿರಂಜನ್, ‘ಒಂದೇ ತಿಂಗಳಲ್ಲಿ ಜೀವನದ ಬಗ್ಗೆ ತಿಳಿಸುವ ಕಥೆ. ಇದೊಂತರ ಮಿನಿ ಬಿಗ್‌ಬಾಸ್. ‘ಬಿಗ್‌ಬಾಸ್’ನಲ್ಲಿ 16 ಸ್ಪರ್ಧಿಗಳಿದ್ದರೆ, ಇಲ್ಲಿ ಘಟನೆ, ವಸ್ತು, ಮನುಷ್ಯ ಹಾಗೂ ಮನಸ್ಥಿತಿಗಳೇ ಪಾತ್ರಗಳು. ಪ್ರತಿ ದೃಶ್ಯವನ್ನು ನಾವು ಮ್ಯೂಸಿಕಲ್ ಆಗಿಯೇ ಹೇಳಿದ್ದೇವೆ. ಇದು ವಿ. ಮನೋಹರ್ ಸರ್ ಕಲಾತ್ಮಕ ಆಲೋಚನೆ. ಚಿತ್ರಕ್ಕೆ ಅವರೇ ಬಿಗ್‌ಬಾಸ್. ಸಿನಿಮಾದ ಮೊದಲ ಪ್ರತಿ ಸಿದ್ಧವಾಗಿದ್ದು, ಆಗಸ್ಟ್‌ನಲ್ಲಿ ರಿಲೀಸ್ ಪ್ಲ್ಯಾನ್ ಮಾಡುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು. ‘31 ಡೇಸ್’ ಬಳಿಕ ನಿರಂಜನ್ ಶೆಟ್ಟಿ ‘ಕೇಸ್ ನಂ 18/9’ ಸೀಕ್ವೆಲ್‌ನಲ್ಲಿ ನಟಿಸಲಿದ್ದಾರೆ. ಹಾಗೆಯೇ ಒಂದು ಆ್ಯಕ್ಷನ್ ಸಿನಿಮಾ ಜತೆಗೆ ಕೊಡಚಾದ್ರಿ ಭಾಗದ ನೈಜ ಘಟನೆಯಾಧರಿತ ಚಿತ್ರಕ್ಕೆ ಸಹಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net