31 ದಿನಗಳ ಜೀವನಗಾಥೆ: ವಿಆರ್‌ಎಲ್ ಸಮೂಹ ಸಂಸ್ಥೆಗಳ ಎಂಡಿ ಡಾ. ಆನಂದ ಸಂಕೇಶ್ವರ ಅವರಿಂದ ಚಿತ್ರದ ಪೋಸ್ಟರ್ ಬಿಡುಗಡೆ

31 days
Published on

ಬೆಂಗಳೂರು: ‘ಜಾಲಿಡೇಸ್’, ‘ಕೇಸ್ ನಂ 18/9’ ಖ್ಯಾತಿಯ ನಟ ನಿರಂಜನ್ ಶೆಟ್ಟಿ ಅಭಿನಯದ ‘ಶಾನುಭೋಗರ ಮಗಳು’ ಚಿತ್ರವು ಕಳೆದ ಫೆ.21ರಂದು ರಿಲೀಸ್ ಆಗಿತ್ತು. ಅದರ ಬೆನ್ನಲ್ಲೇ ಅವರ ಮತ್ತೊಂದು ಸಿನಿಮಾ ‘31 ಡೇಸ್’ ಬಿಡುಗಡೆಗೆ ಸಿದ್ಧವಾಗಿದೆ. ಇದು ನಿರಂಜನ್ ನಿರ್ಮಾಣದ ಮೊದಲ ಹಾಗೂ ವಿ.ಮನೋಹರ್ ಸಂಗೀತ ನಿರ್ದೇಶನದ 150ನೇ ಚಿತ್ರ ಎಂಬುದು ವಿಶೇಷ. ‘ರಾಜರು’, ‘ಜಗತ್ ಕಿಲಾಡಿ’ಯಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ರಾಜಾ ರವಿಕುಮಾರ್ ‘31 ಡೇಸ್’ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಇಲ್ಲಿ ನಿರಂಜನ್‌ಗೆ ಪ್ರಜ್ವಲಿ ಸುವರ್ಣ ಜೋಡಿಯಾಗಿದ್ದಾರೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಸದ್ಯ ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ವಿಆರ್‌ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ ಅವರು ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದರು. ಚಿತ್ರದ ಬಗ್ಗೆ ನಿರಂಜನ್ ಶೆಟ್ಟಿ, ‘ಇದು ಜೀವನದ 31 ದಿನಗಳ ಕಥೆ. ಇಂಟರ್ವಲ್‌ವರೆಗೆ 15 ದಿನ, ಆನಂತರ 15 ದಿನಗಳ ಕಥೆ, ಕೊನೆಗೆ ಕ್ಲೈಮ್ಯಾಕ್ಸ್ ಒಂದು ದಿನ ನಡೆಯುತ್ತದೆ. ಆ 31 ದಿನಗಳಲ್ಲಿ ನಗಿಸುವ ಮೂಲಕವೇ ಸಂದೇಶ ನೀಡುವ ಪ್ರಯತ್ನ ಮಾಡಿದ್ದೇವೆ. ನನ್ನ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ, ಇದು ತುಂಬಾ ವಿಶಿಷ್ಠ ಅನುಭವ. ಮೊದಲ ಬಾರಿಗೆ ಕಾಮಿಡಿ ಪಾತ್ರ ಮಾಡಿದ್ದೇನೆ. ಉಡುಪಿಯ ಹೆಬ್ರಿಯಲ್ಲಿ 20 ದಿನ ಹಾಗೂ ಬೆಂಗಳೂರಿನಲ್ಲಿ 5 ದಿನಗಳ ಕಾಲ ಶೂಟಿಂಗ್ ಮಾಡಿದ್ದೇವೆ. ಈ ಚಿತ್ರಕ್ಕೆ ಮುಂಜಾನೆಯ ದೃಶ್ಯಗಳು ಹೆಚ್ಚು ಬೇಕಿತ್ತು. ಹಾಗಾಗಿ, ಮಂಜು ಮುಸುಕಿರುವಾಗಲೇ ಶೂಟಿಂಗ್ ಮಾಡಿದ್ದು ಸಾಹಸವೇ ಸರಿ’ ಎಂದು ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ತುಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಪ್ರಜ್ವಲಿ ಸುವರ್ಣ ‘31 ಡೇಸ್’ ಮೂಲಕ ನಾಯಕಿಯಾಗಿ ಚಂದನವನಕ್ಕೆ ಕಾಲಿಡುತ್ತಿದ್ದಾರೆ. ‘ನನ್ನದು ಮಂಗಳೂರು ಸ್ಲ್ಯಾಂಗ್ ಕನ್ನಡ. ಈ ಚಿತ್ರಕ್ಕಾಗಿ ಬೆಂಗಳೂರು ಕನ್ನಡ ಬೇಕಾಗಿತ್ತು. ಭಾಷೆ, ಉಚ್ಛಾರಣೆ ನನಗೆ ಸವಾಲಾಗಿತ್ತು. ಚಿತ್ರತಂಡದಲ್ಲಿ ಬಹುತೇಕ ಕರಾವಳಿ ಭಾಗದವರೇ ಇದ್ದ ಕಾರಣ ಒಂದು ಕುಟುಂಬದಂತಿತ್ತು. ಹಾಗಾಗಿ, ಸಿನಿಮಾ ಚೆನ್ನಾಗಿ ಮೂಡಿಬರಲು ಸಾಧ್ಯವಾಯಿತು. ಈ ಚಿತ್ರದ ಬಳಿಕ ನನಗೆ ಹೆಚ್ಚು ಅವಕಾಶಗಳು ಸಿಗಲಿವೆ ಎಂಬ ಭರವಸೆಯಿದೆ’ ಎಂದು ಖುಷಿ ವ್ಯಕ್ತಪಡಿಸುತ್ತಾರೆ ಪ್ರಜ್ವಲಿ.

ಹಾಡುಗಳ ಪ್ರೇಮಕಾವ್ಯ: ‘31 ಡೇಸ್’ ಪಕ್ಕಾ ಮನರಂಜನಾತ್ಮಕ ಸಿನಿಮಾ ಎನ್ನುವ ನಿರಂಜನ್ ಶೆಟ್ಟಿ, ‘ರಾಜ್ಯದಲ್ಲಿ 31 ಜಿಲ್ಲೆಗಳಿವೆ. ಹಾಗೆಯೇ ವರ್ಷದ ಕೊನೆಯ ತಿಂಗಳಾದ ಡಿಸೆಂಬರ್‌ನಲ್ಲಿ 31 ದಿನಗಳಿವೆ. ಹೀಗಾಗಿ ಚಿತ್ರಕ್ಕೆ ‘31 ಡೇಸ್’ ಎಂದು ಟೈಟಲ್ ಇಟ್ಟಿದ್ದೇವೆ. ಚಿತ್ರದಲ್ಲಿ 11 ಹಾಡುಗಳಿದ್ದು, ವಿ. ಮನೋಹರ್ ಸಂಗೀತದಲ್ಲಿ ಪ್ರೇಮ ಕಾವ್ಯದಂತೆ ಮೂಡಿಬಂದಿವೆ. ಇಲ್ಲಿ ಹಾಸ್ಯ, ನವಿರು ಪ್ರೇಮ, ಎಮೋಷನ್ಸ್ ಎಲ್ಲವೂ ಹೈವೋಲ್ಟೇಜ್’ ಎಂದು ಮಾಹಿತಿ ನೀಡುತ್ತಾರೆ.

ಯೂಥ್‌ಫುಲ್ ಸಿನಿಮಾ: ನಿರ್ದೇಶಕ ರಾಜಾ ರವಿಕುಮಾರ್, ‘ಹಾದಿ ತಪ್ಪುತ್ತಿರುವ ಯುವಕರನ್ನು ಹೇಗೆ ಸರಿದಾರಿಗೆ ತರಬೇಕು ಎಂಬುದನ್ನು ಸಂದೇಶದ ಮೂಲಕ ತಿಳಿಸುವ ಪ್ರಯತ್ನ ಮಾಡಿದ್ದೇವೆ. ಇದೊಂದು ಪಕ್ಕಾ ಯೂಥ್‌ಫುಲ್ ಸಿನಿಮಾ. ಪ್ರೇಕ್ಷಕರು ಥಿಯೇಟರ್‌ನಲ್ಲೇ ಸಿನಿಮಾ ನೋಡುವಂತಹ ಕಥೆ. 31 ದಿನಗಳಲ್ಲಿ ಜೀವನಪೂರ್ತಿ ನಡೆಯುವ ವಿಷಯಗಳು ಅಡಕವಾಗಿವೆ’ ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net