

‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಬಂದಿರುವ ಮಾಡೆಲಿಂಗ್ ಲೋಕದ ಚೆಲುವೆ ಮಾನುಷಿ ಛಿಲ್ಲರ್. 2017ರ ವಿಶ್ವ ಸುಂದರಿ ಮಾನುಷಿ ಮೊದಲ ಚಿತ್ರದಲ್ಲೇ ಅಕ್ಷಯ್ ಕುಮಾರ್ ಅವರಂತಹ ಸೂಪರ್ಸ್ಟಾರ್ ಜತೆ ತೆರೆ ಹಂಚಿಕೊಳ್ಳುತ್ತಿರುವ ಸಂಭ್ರಮ. ಅದರ ಜತೆಗೆ ‘ಸಾಮ್ರಾಟ್ ಪೃಥ್ವಿರಾಜ್’ ಅಂತಹ ಐತಿಹಾಸಿಕ ಚಿತ್ರದಲ್ಲಿ ಯುವರಾಣಿಯ ಪಾತ್ರದಲ್ಲಿ ನಟಿಸುತ್ತಿರುವುದು ಮತ್ತೊಂದು ಸಡಗರ. ಹೀಗಾಗಿಯೇ ಮಾನುಷಿ ಛಿಲ್ಲರ್ ಅವರು ಈ ಚಿತ್ರಕ್ಕಾಗಿ ಸಾಕಷ್ಟು ಶ್ರಮವಹಿಸಿದ್ದಾರೆ, ಸಮಯ ಕೊಟ್ಟಿದ್ದಾರೆ. ಅದರಲ್ಲಂತೂ ಮದುವೆ ಸನ್ನಿವೇಶವೊಂದರಲ್ಲಿ ನಟಿಸಲು ಅವರು ಮಾಡಿದ ಸರ್ಕಸ್ ಒಂದೆರಡಲ್ಲ.
ಆ ಸೀನ್ ಬಗ್ಗೆ ಹೇಳಿಕೊಳ್ಳುವ ಮಾನುಷಿ, ‘ತುಂಬ ಸರಳವಾಗಿ ಕಾಣಬೇಕು ನೀವು ಅಂತ ನಿರ್ದೇಶಕರು ಹೇಳಿದ್ದರು. ಹೀಗಾಗಿ ನಾನೂ 20 ನಿಮಿಷದಲ್ಲಿ ಮೇಕಪ್ ಮುಗಿದುಬಿಡುತ್ತೆ ಅಂತ ಅಂದುಕೊಂಡಿದ್ದೆ. ಆದರೆ ಮೇಕಪ್ಗೆ ಹೋದಾಗ, ಅಲ್ಲಿ ನೋಡಿದರೆ ಬರೋಬ್ಬರಿ 3 ತಾಸು ಬೇಕಾಯಿತು. ಸುಮಾರು 25 ಜನ ನನ್ನ ಮೇಕಪ್, ಕೇಶವಿನ್ಯಾಸ, ಉಡುಗೆ, ಆಭರಣ, ಒಬ್ಬರು ಕೈಗೆ ಹಳದಿ ಹಚ್ಚುತ್ತಿದ್ದರೆ ಮತ್ತೊಬ್ಬರು ಕಾಲಿಗೆ, ಸ್ಥಳದಲ್ಲೇ ಅಳತೆ ನೋಡಿಕೊಂಡು ಬಟ್ಟೆಯ ಸ್ಟಿಚಿಂಗ್ ಹೀಗೆ ತರಾತುರಿಯಲ್ಲಿ ಕೆಲಸ ಮಾಡುತ್ತಿದ್ದರು. ಇನ್ನು ನಾನು ಧರಿಸಿದ್ದ ಬಟ್ಟೆಯಂತೂ ತುಂಬ ಭಾರವಿತ್ತು. ನನಗೂ ಆಗ ಕತ್ತು ಮತ್ತು ಬೆನ್ನು ನೋವಿತ್ತು. ತಲೆಯ ಮೇಲೆ ಭಾರವಾದ ದುಪ್ಪಟ್ಟ ಬೇರೆ ಹಾಕಿಕೊಳ್ಳಬೇಕಿತ್ತು. ಅದನ್ನು ಧರಿಸಿ ತಲೆ ಎತ್ತಲೂ ಕಷ್ಟವಾಗುತ್ತಿತ್ತು. ಪ್ರತಿ ಬಾರಿ ನಿರ್ದೇಶಕರು ಕಟ್ ಅಂದಾಗಲೂ ಇಬ್ಬರು ಸಹಾಯಕರು ಬಂದು ಆ ಭಾರವಾದ ದುಪ್ಪಟ್ಟಾವನ್ನು ತೆಗೆಯಬೇಕಿತ್ತು’ ಎಂದು ತಮಗೆ ಕಷ್ಟವಾದ ಸನ್ನಿವೇಶದ ಬಗ್ಗೆ ಹೇಳಿಕೊಳ್ಳುತ್ತಾರೆ ಮಾನುಷಿ.
ಇನ್ನು ‘ಸಾಮ್ರಾಟ್ ಪೃಥ್ವಿರಾಜ್’: ಸಿನಿಮಾ ಪ್ರಾರಂಭವಾದಾಗಿ ನಿಂದಲೂ ಚಿತ್ರಕ್ಕೆ ‘ಪೃಥ್ವಿರಾಜ್’ ಎಂಬ ಶೀರ್ಷಿಕೆ ಇಡಲಾಗಿತ್ತು. ಕೆಲ ದಿನಗಳಿಂದೀಚೆಗೆ ಶ್ರೀ ರಜ್ಪೂತ್ ಕರ್ಣಿ ಸೇನೆಯವರು ಶೀರ್ಷಿಕೆಯನ್ನು ಬದಲಿಸಬೇಕು ಎಂದು ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ನಿರ್ವಪಕರಾದ ಯಶ್ ರಾಜ್ ಫಿಲಂಸ್ ಸಂಸ್ಥೆ ಈಗ ‘ಸಾಮ್ರಾಟ್ ಪೃಥ್ವಿರಾಜ್’ ಎಂದು ಬದಲಿಸಿದೆ. ಹಿರಿಯ ನಿರ್ದೇಶಕ ಡಾ. ಚಂದ್ರಶೇಖರ್ ದ್ವಿವೇದಿ ನಿರ್ದೇಶನದ ಚಿತ್ರ ಇದೇ ಜೂನ್ 3ರಂದು ತೆರೆಗೆ ಬರಲಿದೆ.