‘3 ಬಿಎಚ್‌ಕೆ'ನಲ್ಲಿ ದಿವ್ಯಾ: ಅಪಾರ್ಟ್‌ಮೆಂಟ್‌ನಲ್ಲಿ ಹಾರರ್-ಥ್ರಿಲ್ಲರ್

Divya Uruduga 23 MAR 20
Published on

ಬೆಂಗಳೂರು: ದೇಶ ಮಾತ್ರವಲ್ಲದೆ ರಾಜ್ಯದಲ್ಲೂ ಬಹುತೇಕ ಎಲ್ಲರೂ ಗೃಹಬಂಧನದಲ್ಲಿದ್ದಂತೆ, ನಟಿ ದಿವ್ಯಾ ಉರುಡುಗ ‘3 ಬಿಎಚ್‌ಕೆ’ನಲ್ಲಿದ್ದಾರೆ. ವಿಶೇಷವೆಂದರೆ, ವಿಜಯ್ ರಾಘವೇಂದ್ರ ಕೂಡ ಅವರಿಗೆ ಜತೆಯಾಗಿದ್ದಾರೆ. ಅರ್ಥಾತ್, ವಿಜಯ್ ರಾಘವೇಂದ್ರ ಅಭಿನಯದ ‘3 ಬಿಎಚ್‌ಕೆ’ ಎಂಬ ಸಿನಿಮಾದಲ್ಲಿ ದಿವ್ಯಾ ನಟಿಸುತ್ತಿದ್ದಾರೆ.

ಹಾರರ್-ಥ್ರಿಲ್ಲರ್ ಶೈಲಿಯ ಈ ಸಿನಿಮಾಗೆ ನಿರ್ದೇಶಕರಾರ ರವಿ ಹಾಗೂ ಚೇತನ್ ಜತೆಯಾಗಿ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ‘ಇದೊಂದು ಹಾರರ್ ಸಿನಿಮಾ. ನಾನು ಹಾಗೂ ವಿಜಯ್ ರಾಘವೇಂದ್ರ ಇಬ್ಬರೂ ಇಲ್ಲಿ ನವವಿವಾಹಿತರ ಪಾತ್ರದಲ್ಲಿ ನಟಿಸಿದ್ದೇವೆ. ಚಿತ್ರದ ಬಹುತೇಕ ಕಥೆ ಅಪಾರ್ಟ್‌ಮೆಂಟ್‌ವೊಂದರಲ್ಲಿ ಸಾಗುತ್ತದೆ. ಹಾರರ್ ಎಂದಾಕ್ಷಣ ಇಲ್ಲಿ ಮಾಮೂಲಿ ದೆವ್ವ-ಭೂತದ ಕಥೆ ಇರುವುದಿಲ್ಲ’ ಎನ್ನುತ್ತ ಸಿನಿಮಾದ ಪಾತ್ರ ಹಾಗೂ ಕಥೆ ಕುರಿತು ಮಾಹಿತಿ ನೀಡಿದರು ದಿವ್ಯಾ.

‘ರವಿ-ಚೇತನ್ ಅವರಿಗೆ ಇದು ಎರಡನೇ ಸಿನಿಮಾ. ಈ ಹಿಂದೆ ‘ಕೋಮಾ’ ಎಂಬ ಚಿತ್ರಕ್ಕೆ ಅವರು ನಿರ್ದೇಶನ ಮಾಡಿದ್ದರು. ಚಿತ್ರದ ಕಥಾಹಂದರ ಚೆನ್ನಾಗಿರುವುದರಿಂದ ಒಪ್ಪಿದೆ. ವಿಜಯ್ ರಾಘವೇಂದ್ರ ಅವರ ಜತೆ ಅಭಿನಯಿಸಲು ಅವಕಾಶ ಸಿಕ್ಕಿದ್ದಕ್ಕೆ ತುಂಬ ಖುಷಿಯಾಗಿದೆ. ಸಿನಿಮಾದ ಶೇ. 90 ಶೂಟಿಂಗ್ ಮುಗಿದಿದ್ದು, ಕೆಲವು ದೃಶ್ಯಗಳ ಚಿತ್ರೀಕರಣವಷ್ಟೇ ಬಾಕಿ ಇದೆ’ ಎನ್ನುತ್ತಾರೆ ದಿವ್ಯಾ.

‘ಹುಲಿರಾಯ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶಿಸಿರುವ ಅವರ ಅಭಿನಯದ ‘ರಾಂಚಿ’ ಸಿನಿಮಾ ಸಂಪೂರ್ಣಗೊಂಡಿದ್ದು, ಬಿಡುಗಡೆಗೆ ಸಿದ್ಧವಿದೆ. ಉಳಿದಂತೆ ಇನ್ನೆರಡು ಸಿನಿಮಾಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ‘ವೀರೇಶ್ ನಿರ್ದೇಶನದ, ವಿಲೋಕ್‌ರಾಜ್ ಅಭಿನಯದ ‘ಗಿರಕಿ’, ನಾಗಭೂಷಣ್ ನಿರ್ದೇಶನ ಮತ್ತು ಧನುಷ್ ಅಭಿನಯದ ‘ಜೋರು’ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದೇನೆ’ ಎನ್ನುತ್ತ ತಮ್ಮ ಇತರ ಚಿತ್ರಗಳ ಕುರಿತ ಮಾಹಿತಿ ಹಂಚಿಕೊಳ್ಳುತ್ತಾರೆ ದಿವ್ಯಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net