

ಬೆಂಗಳೂರು : ಸಪ್ಪೆಯಾಗಿದ್ದ ಸ್ಯಾಂಡಲ್ವುಡ್ಗೆ ‘ಪ್ರೇಮದ ಊರಲಿ’ ಚಿತ್ರದಿಂದ ಬೂಸ್ಟ್ ಸಿಕ್ಕಿದೆ. ಸಣ್ಣ ಬಜೆಟ್ನ ಚಿತ್ರವೊಂದು 100 ಕೋಟಿ ರೂ..ಕಲೆಕ್ಷನ್ ಮಾಡಬಹುದು ಎಂಬುದನ್ನು ಆ ಸಿನಿಮಾ ಮತ್ತೊಮ್ಮೆ ಸಾಬೀತುಪಡಿಸುವ ಜತೆಗೆ ಮುಚ್ಚಿದ್ದ ಹಲವು ಚಿತ್ರಮಂದಿರಗಳನ್ನು ರೀ-ಓಪನ್ ಮಾಡಿಸಿದೆ. ಹೀಗಾಗಿ, ಸಣ್ಣ ಚಿತ್ರಗಳಿಗೂ ಹೊಸ ಕಳೆ ಬಂದಂತಾಗಿದೆ. ಅದೇ ಅಲೆಯಲ್ಲಿ ಹಲವು ತಂಡಗಳು ಸಿನಿಮಾ ರಿಲೀಸ್ ಮಾಡಿ, ಅದೃಷ್ಟ ಪರೀಕ್ಷೆಗೆ ಇಳಿಯಲು ಮುಂದಾಗುತ್ತಿವೆ. ಹೀಗಾಗಿ ನವೆಂಬರ್ನಲ್ಲಿ ಸಿನಿಮಾ ರಶ್ ಉಂಟಾಗಲಿದೆ. ಹಾಗೇ ಇಡೀ ತಿಂಗಳಿರುವ ಕನ್ನಡ ರಾಜ್ಯೋತ್ಸವದ ರಂಗು ಮತ್ತು ದೀಪಾವಳಿ ಹಬ್ಬದ ಕಲರವವನ್ನು ಸದುಪಯೋಗಿಸಿಕೊಳ್ಳುವುದು ಸ್ಯಾಂಡಲ್ವುಡ್ ಮಂದಿ ಯೋಚನೆ. ಸದ್ಯದ ಪ್ರಕಾರ ನವೆಂಬರ್ನಲ್ಲಿ 25ಕ್ಕೂ ಅಧಿಕ ಕನ್ನಡ ಚಿತ್ರಗಳು ರಿಲೀಸ್ ಆಗುತ್ತಿದ್ದು, ಈ ಸಂಖ್ಯೆ ಹೆಚ್ಚುವ ನಿರೀಕ್ಷೆಯಿದೆ. ಹೀಗಾಗಿ ಈ ಮಾಸದಲ್ಲಿ ಸ್ಯಾಂಡಲ್ವುಡ್ನಲ್ಲಿ ಸಿನಿಮಾ ಹಬ್ಬ ಜೋರಾಗಿರಲಿದೆ.
ಇಡೀ ಅಕ್ಟೋಬರ್ ತಿಂಗಳನ್ನು ‘ಪ್ರೇಮದ ಊರಲಿ’ ಆವರಿಸಿದೆ. ಕನ್ನಡ ಚಿತ್ರವೊಂದು ಭರ್ಜರಿ ಗಳಿಕೆ, ಯಶಸ್ಸಿನ ಅಲೆಯಲ್ಲಿರುವಾಗ ಬೇರೆ ಚಿತ್ರತಂಡಗಳು ಅನುವು ಮಾಡಿಕೊಟ್ಟವು. ಇದೀಗ ತಿಂಗಳ ಕೊನೆಯ ವಾರದಲ್ಲಿ ಕನ್ನಡದ ಆರು ಸಿನಿಮಾಗಳು ರಿಲೀಸ್ ಆಗುತ್ತಿವೆ. ಹರ್ಷಿಕಾ ಪೂಣಚ್ಚ ಅಭಿನಯದ ‘ತಾಯ್ತ’, ಯುವಪ್ರತಿಭೆ ಹರ್ಷಿತ್ ರಂಗಸ್ವಾಮಿ ನಿರ್ದೇಶನದ ‘ಮಿ.ಲಕ್ಕಿ’, ಹರೀಶ್ ಹಿರಿಯೂರು ಮತ್ತು ಛಾಯಾಶ್ರೀ ಉಮೇಶ್ ಅಭಿನಯದ ‘ಚಂದ್ರಹಾಸ’, ಪುನೀತ್ ರಾಜಕುಮಾರ್ ಅಭಿಮಾನ ನೆನಪಿಸುವ ‘ಅಪ್ಪು ಗ್ಯಾರೇಜ್’, ಆ್ಯಕ್ಷನ್-ಡ್ರಾಮಾ ‘ಖೇಲಾ’ ಜತೆಗೆ ‘ಗಾಮಿನಿ’ ಚಿತ್ರಗಳು ಇಂದು ತೆರೆ ಕಾಣಲಿವೆ.
ನವೆಂಬರ್ ಮೊದಲ ಶುಕ್ರವಾರ ಕನ್ನಡ ಸಿನಿಮಾಗಳು ತೆರೆಗೆ ಬರುವ ಸಾಧ್ಯತೆ ಕಡಿಮೆಯಿದೆ. ಅದಕ್ಕೆ ಕಾರಣ, ಯಶ್ ‘ರಾವಣ’ನಾಗಿ ಕಾಣಿಸಿಕೊಂಡಿರುವ ‘ರಾಮಾಯಣ: ಭಾಗ 1’ ನ. 5ರಂದು ಬಿಡುಗಡೆಯಾಗುತ್ತಿದೆ. ‘ಟಾಕ್ಸಿಕ್’ಗೆ ಸಿಕ್ಕ ಮಿಶ್ರ-ಪ್ರತಿಕ್ರಿಯೆಯಿಂದಾಗಿ ಯಶ್ ‘ರಾಮಾಯಣ’ ಮೂಲಕ ದೊಡ್ಡಮಟ್ಟದಲ್ಲಿ ಪುಟಿದೇಳುವ ನಿರೀಕ್ಷೆಯಲ್ಲಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ಯಶ್ ಜತೆಗೆ ರಣಬೀರ್ ಕಪೂರ್, ಸಾಯಿ ಪಲ್ಲವಿ, ಸನ್ನಿ ಡಿಯೋಲ್, ಲಾರಾ ದತ್ತಾ, ರಕುಲ್ ಪ್ರೀತ್ ಸಿಂಗ್ ಕಲಾಬಗಳದಲ್ಲಿದ್ದಾರೆ. ಈಗಾಗಲೇ ಅಮೆರಿಕದ ಲಾಸ್ ಏಜೆಂಲೀಸ್ನಲ್ಲಿ ಆಯೋಜಿಸಿದ್ದ ಪ್ರೀಮಿಯರ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗೆಯೇ, ಮುಂಗಡ ಬುಕಿಂಗ್ ಆರಂಭವಾಗಿದ್ದು, ರಾಜ್ಯದಲ್ಲಿ ಉತ್ತಮ ಓಪನಿಂಗ್ ಸಿಕ್ಕಿದೆ.
ನವೆಂಬರ್ ಕನ್ನಡ ಮಾಸದಲ್ಲಿ ಸ್ಯಾಂಡಲ್ವುಡ್ ಚಿತ್ರ ಜಾತ್ರೆಯೇ ನಡೆಯಲಿದೆ. ಹಲವು ಸಿನಿಮಾಗಳು ಈಗಾಗಲೇ ರಿಲೀಸ್ ದಿನಾಂಕ ಘೋಷಿಸಿಕೊಂಡಿದ್ದು, ಸದ್ಯದ ಪ್ರಕಾರ ನ. 13ಕ್ಕೆ ‘ನೀ ನಂಗೆ ಅಲ್ಲವಾ’, ‘ರಾಶಿ’ ಮತ್ತು ನವೆಂಬರ್ 20ಕ್ಕೆ ಬೃಂದಾವಿಹಾರಿ’, ‘ಶಂಕರಾಭರಣಂ’, ‘ಲಂಬೋದರ 2.0’, ‘ಮಾರಿಗೆ ದಾರಿ’, ‘ಜಾಕಿ 42’, ‘ಅಮರಾವತಿ’, ‘ರೌಶಾಬಿ’ ತೆರೆಗೆ ಬರಲಿವೆ. ಇನ್ನು ನ. 27ಕ್ಕೆ ‘ರಾಜನಿವಾಸ’, ‘ಲಕ್ಷ್ಮೀಪುತ್ರ;, ‘ನಮ್ ಗಣಿ ಬಿಕಾಂ. ಪಾಸ್ 2’ ಸಿನಿಮಾಗಳು ರಿಲೀಸ್ ಆಗಲಿವೆ. ಇನ್ನು ‘ಭಾವಾಂತರ’ ಮತ್ತು ಉತ್ತರ ಕರ್ನಾಟಕ ಸೊಗಡಿನ ‘ನಾವು ತುಂಬಾ ಒಳ್ಳೆಯವರು’ ಕೂಡ ನವೆಂಬರ್ನಲ್ಲೇ ತೆರೆಗೆ ಬರಲು ಸಿದ್ಧತೆ ನಡೆಸುತ್ತಿವೆ. ಹೀಗಾಗಿ ಸಿನಿಮಾಗಳ ಸಂಖ್ಯೆ ಇನ್ನಷ್ಟು ಹಿಗ್ಗುವ ಸಾಧ್ಯತೆಯಿದೆ.