

ಹೈದರಾಬಾದ್: ಸೆಲೆಬ್ರಿಟಿಗಳ ಶಾಪಿಂಗ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ. ಇದೀಗ ಖ್ಯಾತ ಬಹುಭಾಷಾ ನಟಿ ಸಮೀರಾ ರೆಡ್ಡಿ ಅವರು ತಮ್ಮ ಶಾಪಿಂಗ್ ಚಟವನ್ನು ಬಹಿರಂಗಪಡಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಒಂದು ಕಾಲದಲ್ಲಿ ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ಸಮೀರಾ ರೆಡ್ಡಿ, ಮದುವೆಯಾದ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ವರದನಾಯಕ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಜತೆ ನಟಿಸುವ ಮೂಲಕ ಕನ್ನಡಿಗರಿಗೂ ಸಮೀರಾ ಪರಿಚಿತರಾಗಿದ್ದಾರೆ.
ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ದಿನವೊಂದಕ್ಕೆ 23 ಲಕ್ಷ ರೂಪಾಯಿ ಶಾಪಿಂಗ್‌ಗೆ ಖರ್ಚು ಮಾಡಿದ್ದೇನೆ ಎಂದು ಸಮೀರಾ ರೆಡ್ಡಿ ಬಹಿರಂಗಪಡಿಸಿದ್ದಾರೆ. ದುಬೈ ಮಾಲ್‌ನಲ್ಲಿ ನಾನು ತುಂಬಾ ಹಣವನ್ನು ಖರ್ಚು ಮಾಡಿದ್ದೇನೆ. ಆದರೆ, ಈಗ ಅಂತಹ ಪರ್ಸನಲ್ ಶಾಪಿಂಗ್ನಿಂದ ದೂರ ಉಳಿದಿದ್ದೇನೆ ಎಂದು ಸಮೀರಾ ಹೇಳಿದರು. ಅಲ್ಲದೆ, ಖರ್ಚಿಗಿಂತ ಉಳಿತಾಯಕ್ಕೆ ಪ್ರಾಮುಖ್ಯತೆ ನೀಡಿ ಎಂದು ಸಲಹೆ ನೀಡಿದ್ದಾರೆ.
ಬೇಗ ನಿವೃತ್ತಿ ಹೊಂದಲು ಬಯಸುವವರಿಗೆ ನೀವು ಏನು ಸಲಹೆ ನೀಡುತ್ತೀರಿ ಎಂದು ಆ್ಯಂಕರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಮೀರಾ, SIP (ವ್ಯವಸ್ಥಿತ ಹೂಡಿಕೆ ಯೋಜನೆ) ಮಾಡಲು ಸೂಚಿಸಿದರು. ನಿಮ್ಮ ಜೀವನ ಉತ್ತಮವಾಗಿರಬೇಕಾದರೆ ಹಣ ಉಳಿತಾಯ ಮಾಡಿ, ಕನಿಷ್ಠ ಪಕ್ಷ ತಿಂಗಳಿಗೆ 500 ರೂಪಾಯಿ ಮೀಸಲಿಟ್ಟರೆ ಸಾಕು, ಮುಂದೊಂದು ದಿನ ನಿಮ್ಮ ಸಹಾಯಕ್ಕೆ ನೆರವಾಗುತ್ತೆ ಎಂದರು.
ಅಂದಹಾಗೆ ಸಮೀರಾ ಅವರ ವೈವಾಹಿಕ ಜೀವನದ ಬಗ್ಗೆ ತಿಳಿಯುವುದಾದರೆ, 2014 ರಲ್ಲಿ ಮಹಾರಾಷ್ಟ್ರ ಉದ್ಯಮಿ ಅಕ್ಷಯ್ ವರ್ಧೆಯನ್ನು ಸಮೀರಾ ಅವರು ಸಾಂಪ್ರದಾಯಿಕ ವಿವಾಹವಾದರು. ದಂಪತಿಗಳು 2015 ರಲ್ಲಿ ಮಗ ಹ್ಯಾನ್ಸ್ ವರ್ಡೆ ಮತ್ತು 2019ರಲ್ಲಿ ನೈರಾ ಅವರನ್ನು ಸ್ವಾಗತಿಸಿದ್ದಾರೆ.
ಸಿನಿಮಾ ವಿಚಾರಕ್ಕೆ ಬಂದಾಗ ಸಮೀರಾ ರೆಡ್ಡಿ ಕೊನೆಯದಾಗಿ 2013ರಲ್ಲಿ ತೆರೆಕಂಡ ಕನ್ನಡ ಚಿತ್ರ ವರದನಾಯಕದಲ್ಲಿ ಕಾಣಿಸಿಕೊಂಡರು. ನಂತರ ಬಣ್ಣದ ಲೋಕದಿಂದ ದೂರಾದರು. ಆದರೆ, ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರೀಯರಾಗಿರುತ್ತಾರೆ. (ಏಜೆನ್ಸೀಸ್)