ಒಂದಲ್ಲ ಎರಡಲ್ಲಾ 16 ಚಿತ್ರಗಳು; ಶಿವಣ್ಣ 64ನೇ ಹುಟ್ಟುಹಬ್ಬಕ್ಕೆ ಘೋಷಣೆಯಾದ ಸಾಲು ಸಿನಿಮಾಗಳು

ascsdv
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಸ್ಟಾರ್​ಗಳ ಹುಟ್ಟುಹಬ್ಬಕ್ಕೆ ಒಂದೋ, ಎರಡೋ ಅಥವಾ ನಾಲ್ಕೈದು ಸಿನಿಮಾಗಳು ಘೋಷಣೆಯಾಗುವುದು ಅಥವಾ ಪೋಸ್ಟರ್​ ಬಿಡುಗಡೆ ಮಾಡುವುದು ಸಾಮಾನ್ಯ. ಆದರೆ, ಇತ್ತೀಚಿನ ವರ್ಷಗಳಲ್ಲಿ ನಟ ಶಿವರಾಜಕುಮಾರ್​ ಹುಟ್ಟುಹಬ್ಬದ ಸಮಯದಲ್ಲಿ ಪ್ರತಿ ಬಾರಿಯೂ 10ಕ್ಕೂ ಹೆಚ್ಚು ಚಿತ್ರಗಳ ಅಪ್​ಡೇಟ್​ ಬರುತ್ತಿವೆ. ಕಳೆದ ವರ್ಷ 13 ಸಿನಿಮಾಗಳು ವಿವಿಧ ಹಂತದಲ್ಲಿರುವ ಬಗ್ಗೆ ಘೋಷಣೆಯಾಗಿತ್ತು. ಇದೀಗ ಈ ಬಾರಿ ಆ ದಾಖಲೆಯೂ ಮುರಿದು ಬರೋಬ್ಬರಿ 16 ಚಿತ್ರಗಳ ಅಪ್​ಡೇಟ್​ ಬಂದಿವೆ. ಶನಿವಾರ 64ನೇ ವಸಂತಕ್ಕೆ ಕಾಲಿಟ್ಟ ಶಿವಣ್ಣಗೆ "45' ಚಿತ್ರತಂಡ ಭರ್ಜರಿ ಫಸ್ಟ್​ ಲುಕ್​ ಉಡುಗೊರೆ ನೀಡಿದ್ದು, ತೆಲುಗಿನ "ಪೆದ್ದಿ' ಸೇರಿ ಹಲವು ತಂಡಗಳು ನಟನಿಗೆ ಉಡುಗೊರೆ ನೀಡಿವೆ.

45 ಲುಕ್​ ವೈರಲ್​

ಸಂಗೀತ ನಿರ್ದೇಶಕ ಅರ್ಜುನ್​ ಜನ್ಯ ಚೊಚ್ಚಲ ಬಾರಿಗೆ ಆ್ಯಕ್ಷನ್​-ಕಟ್​ ಹೇಳುತ್ತಿರುವ ಸೂರಜ್​ ಪ್ರೊಡಕ್ಷನ್ಸ್​ ಬ್ಯಾನರ್​ನಲ್ಲಿ ರಮೇಶ್​ ರೆಡ್ಡಿ ನಿರ್ಮಿಸುತ್ತಿರುವ ಶಿವಣ್ಣ, ಉಪೇಂದ್ರ, ರಾಜ್​ ಬಿ. ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಸಿನಿಮಾ "45'. ಪ್ಯಾನ್​ ಇಂಡಿಯಾ ಮೂಡಿಬರುತ್ತಿರುವ ಈ ಚಿತ್ರದ ಟೀಸರ್​ ನಿರೀಕ್ಷೆ ಹೆಚ್ಚಿಸಿದ್ದು, ಇದೀಗ ಶಿವಣ್ಣ ಹುಟ್ಟುಹಬ್ಬಕ್ಕೆ ಬಿಡುಗಡೆಯಾಗಿರುವ ಹೊಚ್ಚ ಹೊಸ ಪೋಸ್ಟರ್​ ಮತ್ತಷ್ಟು ಕುತೂಹಲ ಕೆರಳಿಸಿದೆ. ಬಿಲ್ಲು-ಬಾಣ ಹಿಡಿದು ವಾರಿಯರ್​ ಲುಕ್​ನಲ್ಲಿ ಶಿವಣ್ಣ ಮಿಂಚಿದ್ದಾರೆ. "45' ಇದೇ ಆ. 15ರಂದು ಬಹುಭಾಷೆಗಳಲ್ಲಿ ತೆರೆಗೆ ಬರಲಿದೆ.

"ಎ ಫಾರ್​ ಆನಂದ್​', "ಎಸ್​ ಫಾರ್​ ಶಿವಣ್ಣ'

"ಘೋಸ್ಟ್​' ಶ್ರೀನಿ ನಿರ್ದೇಶಿಸುತ್ತಿರುವ, ಶಿವಣ್ಣ ನಾಯಕನಾಗಿರುವ "ಎ ಫಾರ್​ ಆನಂದ್​' ಚಿತ್ರತಂಡ ನಟನ ಮೊದಲ "ಆನಂದ್​' ಚಿತ್ರದಿಂದ "ಎ ಫಾರ್​​ ಆನಂದ್​'ವರೆಗಿನ ಲುಕ್​ಗಳ ವಿಶೇಷ ವಿಡಿಯೋ ಬಿಡುಗಡೆ ಮಾಡಿದೆ. ತೆಲುಗಿನಲ್ಲಿ ರಾಮಚರಣ್​ ನಾಯಕನಾಗಿರುವ, ಬುಚ್ಚಿಬಾಬು ಸನಾ ನಿರ್ದೇಶಿಸುತ್ತಿರುವ "ಪೆದ್ದಿ' ಚಿತ್ರತಂಡ ಸಹ ಶಿವಣ್ಣ ಫಸ್ಟ್​ ಲುಕ್​ ರಿಲೀಸ್​ ಮಾಡಿದೆ. ಇನ್ನು ಹೇಮಂತ್​ ರಾವ್​ ಆ್ಯಕ್ಷನ್​-ಕಟ್​ ಹೇಳುತ್ತಿರುವ, ಡಾಲಿ ಧನಂಜಯ ನಟಿಸುತ್ತಿರುವ "666 ಆಪರೇಷನ್​ ಡ್ರೀಮ್​ ಥಿಯೇಟರ್​' ತಂಡ ಶಿವಣ್ಣ ಹುಟ್ಟುಹಬ್ಬಕ್ಕೂ ಮೂರು ದಿನ ಮುನ್ನವೇ ಶಿವಣ್ಣ ಲುಕ್​ ಲಾಂಚ್​ ಮಾಡಿತ್ತು. ಜತೆಗೆ ಡಾಲಿ ಧನಂಜಯ, ಶಿವಣ್ಣ ನಟಿಸುತ್ತಿರುವ "ಎಕ್ಕ' ರೋಹಿತ್​ ಪದಕಿ ನಿರ್ದೇಶಿಸುತ್ತಿರುವ "ಉತ್ತರಕಾಂಡ' ಚಿತ್ರದ ಶಿವಣ್ಣ ಅಭಿನಯಿಸುತ್ತಿರುವ ಮಾಲೀಕ ಹೊಸ ಪೋಸ್ಟರ್​ ಕೂಡ ಬಿಡುಗಡೆ ಮಾಡಲಾಗಿದೆ.

ಪೈಪ್​ಲೈನ್​ನಲ್ಲಿ ಅರ್ಧ ಡಜನ್​ ಚಿತ್ರಗಳು

ಈ ಸಿನಿಮಾಗಳ ಜತೆ ಜತೆಗೆ ತಮಿಳು ನಿರ್ದೇಶಕ ಕಾರ್ತಿಕ್​ ಅದ್ವೆ$$ೃತ್​ ನಿರ್ದೇಶಿಸುತ್ತಿರುವ ಇನ್ನೂ ಹೆಸರಿಡದ "ಶಿವಣ್ಣ 131' ಚಿತ್ರದ ನಟನ ಲುಕ್​, ಶಿವಣ್ಣ, ಗಣೇಶ್​ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ, ನಂದಕಿಶೋರ್​ ನಿರ್ದೇಶಿಸಲಿರುವ "ಶಿವಗಣ', ಕೊಟ್ರೇಶ ಚಪ್ಪರದಹಳ್ಳಿ ನಿರ್ದೇಶಿಸಲಿರುವ "ರಥೋತ್ಸವ', ನವೀನ್​ ಶೆಟ್ಟಿ ಆ್ಯಕ್ಷನ್​-ಕಟ್​ ಹೇಳಲಿರುವ "ಧೀರ' ತಂಡಗಳು ಸಹ ಹೊಸ ಪೋಸ್ಟರ್​ ಮೂಲಕ ನಟನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿವೆ. ಹಾಗೇ ಪವನ್​ ಒಡೆಯರ್​, ತಮಿಳು ನಿರ್ದೇಶಕ ಬಾಲಾಜಿ ಮಾಧವನ್​, ನಾಗಶೇಖರ್​, ಜೈಲರ್​ 2 ತೆಲುಗು ನಿರ್ದೇಶಕ ಅನಿಲ್​ ಕನ್ನೆಗಂಟಿ, ಜತೆಗೂ ಶಿವಣ್ಣ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ. ಇನ್ನು ನಿರ್ಮಾಪಕ ಕೆ.ಪಿ. ಶ್ರೀಕಾಂತ್​ ಕೂಡ ಹೊಸ ಸಿನಿಮಾ ಘೋಷಿಸಿದ್ದು, "ಟಗರು' ಸೀಕ್ವೆಲ್​ ಮಾಡಲಿದ್ದು, ದುನಿಯಾ ವಿಜಯ್​ ನಿರ್ದೇಶಿಸಲಿದ್ದಾರೆ ಎನ್ನಲಾಗಿದೆ. ಇದೆಲ್ಲದರ ಜತೆಗೆ ಶಿವಣ್ಣ ಕ್ಯಾನ್ಸರ್​ ಗೆದ್ದು ಬಂದ ಕುರಿತ "ಸರ್ವೈವರ್​: ನಮ್ಮ ಸೂಪರ್​ಸ್ಟಾರ್​' ಸಾಕ್ಷ್ಯಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ.

ಅಭಿಮಾನಿಗಳಿಂದ ಸಂಭ್ರಮಾಚರಣೆ

ಶಿವಣ್ಣ ನಿವಾಸದಲ್ಲಿ ಶನಿವಾರ ಕಿಕ್ಕಿರಿದು ಸೇರಿದ್ದ ಅಭಿಮಾನಿಗಳು ಸಂಭ್ರಮದಿಂದ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬ ಆಚರಿಸಿದರು. ಈ ವರ್ಷ ಶಿವಣ್ಣ ಚಿತ್ರರಂಗಕ್ಕೆ ಬಂದು 40 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅವರ ರ್ಬತ್​ಡೇ ಸಡಗರ ಕೊಂಚ ಹೆಚ್ಚೇ ಇತ್ತು. ಹಾಗೇ ಅಮೆರಿಕದಲ್ಲಿ ಮತ್ತು ಬೆಂಗಳೂರಿನಲ್ಲಿ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಲಾಯಿತು. ಕೇಕ್​ ಕತ್ತರಿಸಿ, ಅಭಿಮಾನಿಗಳಿಗೆ ಸಿಹಿ ಹಂಚಿದ ಶಿವಣ್ಣ, "ಕ್ಯಾನ್ಸರ್​ ಬಂದ ಸಮಯದಲ್ಲಿ ಚಿಕಿತ್ಸೆಗೆ ಹೋಗಿದ್ದಾಗ ಪ್ರತಿಯೊಬ್ಬರೂ ನನ್ನ ಬಗ್ಗೆ ಕಾಳಜಿ ವಹಿಸಿದರು. ಎಲ್ಲ ವಿಷಯಗಗಳ ಬಗ್ಗೆಯೂ ಮುಕ್ತವಾಗಿ ಮಾತನಾಡುತ್ತೇನೆ. ಹೀಗಿರುವಾಗ ಈ ವಿಷಯವನ್ನು ಯಾಕೆ ಮುಚ್ಚಿಡಬೇಕು ಅಂತ ಅನಾರೋಗ್ಯದ ಬಗ್ಗೆ ಕೂಡ ಮಾತನಾಡಿದೆ. ಅಭಿಮಾನಿಗಳ ಆಶೀರ್ವಾದವೇ ನನ್ನ ಶಕ್ತಿ' ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net