ಟಾಲಿವುಡ್​​ನಲ್ಲಿ ಹೊಸ ದಾಖಲೆ ... ನಾಳೆ ಎಷ್ಟು ಸಿನಿಮಾ ಬಿಡುಗಡೆ ಗೊತ್ತಾ?

Telugu Films - Final
Published on

ಹೈದರಾಬಾದ್​: ಲಾಕ್​ಡೌನ್​ ನಂತರ ಚಿತ್ರ ಬಿಡುಗಡೆ ಮಾಡುವುದಕ್ಕೆ ಹಿಂದುಮುಂದು ನೋಡುತ್ತಿದ್ದ ನಿರ್ಮಾಪಕರೆಲ್ಲರೂ, ಈಗ ಕ್ರಮೇಣ ಪರಿಸ್ಥಿತಿ ಸಹಜ ಸ್ಥಿತಿಗೆ ಬರುತ್ತಿದ್ದಂತೆ ಬಿಡುಗಡೆಗೆ ನಾ ಮುಂದು ತಾ ಮುಂದು ಎನ್ನುತ್ತಿದ್ದಾರೆ. ಕಳೆದ ವಾರ ಕನ್ನಡದಲ್ಲಿ ಐದು ಸಿನಿಮಾಗಳು ಬಿಡುಗಡೆಯಾಗಿದ್ದವು. ಇವೆಲ್ಲ ಹೊಸಬರ ಚಿತ್ರಗಳಾಗಿದ್ದು, ಯಾವ ಚಿತ್ರ ಸಹ ಅಷ್ಟಾಗಿ ಗಮನಸೆಳೆಯಲಿಲ್ಲ. ಈಗ ಟಾಲಿವುಡ್​ನಲ್ಲೂ ಬಿಡುಗಡೆ ಚಿತ್ರಗಳ ಸಂಖ್ಯೆ ಹೆಚ್ಚಾಗಿದ್ದು, ಮಾರ್ಚ್​ ಐದರಂದು ಹೊಸ ದಾಖಲೆಯೇ ನಿರ್ಮಾಣವಾಗಲಿದೆ.

ಮಾರ್ಚ್​​ ಐದರ ಶುಕ್ರವಾರದಂದು ಒಂದಲ್ಲ, ಎರಡಲ್ಲ, 14 ತೆಲುಗು ಸಿನಿಮಾಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದ್ದು, ಇದು ಹೊಸ ದಾಖಲೆ ಎಂದು ಹೇಳಲಾಗುತ್ತಿದೆ. ಏಕೆಂದರೆ, ಇಷ್ಟು ವರ್ಷಗಳಲ್ಲಿ ಯಾವ ವಾರವೂ ಇಷ್ಟೊಂದು ಸಂಖ್ಯೆಯ ಚಿತ್ರಗಳು ಟಾಲಿವುಡ್​ನಲ್ಲಿ ಬಿಡುಗಡೆಯಾಗಿರಲಿಲ್ಲಂತೆ. ಈಗ ಮೊದಲ ಬಾರಿಗೆ ಇಷ್ಟೊಂದು ಸಂಖ್ಯೆಯ ಚಿತ್ರಗಳು ಬಿಡುಗಡೆಯಾಗುತ್ತಿರುವುದರಿಂದ, ಇದು ಇಂಡಸ್ಟ್ರಿ ರೆಕಾರ್ಡ್​ ಎಂದು ಹೇಳಲಾಗುತ್ತಿದೆ.

ಸಂದೀಪ್​ ಕಿಶನ್​ ಅಭಿನಯದ 'ಏ1 ಎಕ್ಸ್​ಪ್ರೆಸ್​', ವಿಜಯ್​ಕುಮಾರ್​ ಕೊಂಡಾ ನಿರ್ದೇಶನದ 'ಪವರ್​ಪ್ಲೇ', ರಾಜೇಂದ್ರಪ್ರಸಾದ್​ ಅಭಿನಯದ 'ಕ್ಲೈಮ್ಯಾಕ್ಸ್​', 'ಶಾದಿ ಮುಬಾರಕ್​', 'ಏ ಸ್ಮಾಲ್​ ಟೈಮ್​ ಥ್ರಿಲ್ಲರ್​', 'ತಾರಕರತ್ನ', 'ದೇವಿನೇನಿ', 'ತೋಟ ಬಾವಿ' ಮತ್ತು 'ಪರಮಾನಂದಯ್ಯ ಶಿಷ್ಯುಲ ಕಥಾ' ಎಂಬ ಥ್ರಿಡಿ ಚಿತ್ರ ಬಿಡುಗಡೆಯಾಗುತ್ತಿವೆ.

ಇವೆಲ್ಲಾ ನೇರವಾದ ತೆಲುಗು ಚಿತ್ರಗಳಾದರೆ, ಬೇರೆ ಭಾಷೆಗಳಿಂದ ತೆಲುಗಿಗೆ ಡಬ್​ ಆಗಿ ಬಿಡುಗಡೆಯಾಗುತ್ತಿರುವ ಚಿತ್ರಗಳ ಸಂಖ್ಯೆ ಐದಿವೆ. ಯಶ್​ ಅಭಿನಯದ 'ಗಜಕೇಸರಿ', 'ವಿಕ್ರಮಾರ್ಕುಡು', 'ಕೇಓಸ್​ ವಾಕಿಂಗ್​', 'ಜುಡಾಸ್​ ಆಂಡ್​ ದಿ ಬ್ಲಾಕ್​ ಮಸೀಹಾ' ಮತ್ತು 'ರಾಯ ಅಂಡ್​ ದಿ ಡ್ರಾಗನ್​' ಚಿತ್ರಗಳು ಬೇರೆ ಭಾಷೆಗಳಿಂದ ತೆಲುಗಿಗೆ ಡಬ್​ ಆಗಿ ಬಿಡುಗಡೆಯಾಗುತ್ತಿವೆ.

ಒಟ್ಟಾರೆ, 14 ಚಿತ್ರಗಳು ಮಾರ್ಚ್​​ ಐದರಂದು ಆಂಧ್ರ ಮತ್ತು ತೆಲಂಗಾಣದಲ್ಲಿ ಬಿಡುಗಡೆಯಾಗುತ್ತಿದ್ದು, ಈ ಪೈಕಿ ಯಾವ ಚಿತ್ರಕ್ಕೆ ಪ್ರೇಕ್ಷಕ ಒಪ್ಪಿಕೊಳ್ಳುತ್ತಾನೋ, ಯಾವ ಚಿತ್ರವನ್ನು ನಿರಾಕರಿಸುತ್ತಾನೆ ಎಂಬುದನ್ನು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net