

ಬೆಂಗಳೂರು: ‘ನಾನು ವರ್ಸಸ್ ಒಬ್ಬ ಸೈಬರ್ ಕ್ರಿಮಿನಲ್. ಬನ್ನಿ ಚಿತ್ರ ನೋಡಿ. ನವೆಂಬರ್ 19ರಿಂದ ಚಿತ್ರಮಂದಿರಗಳಲ್ಲಿ ...’ ಹಾಗಂತ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ ರಮೇಶ್ ಅರವಿಂದ್. ಈ ಮೂಲಕ, ತಮ್ಮ ನಿರ್ದೇಶನದ ಮತ್ತು ಅಭಿನಯದ ‘100’ ಚಿತ್ರವು ನವೆಂಬರ್ 19ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಖಚಿತಪಡಿಸಿದ್ದಾರೆ.
ರಾಜ್ ಬಿ ಶೆಟ್ಟಿ ಮತ್ತು ರಿಷಭ್ ಶೆಟ್ಟಿ ಅಭಿನಯದ ‘ಗರುಡ ಗಮನ ಋಷಭ ವಾಹನ’ ಚಿತ್ರವು ನ.19ಕ್ಕೆ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಇತ್ತೀಚೆಗಷ್ಟೇ ಅಧಿಕೃತವಾಗಿ ಘೋಷಿಸಿತ್ತು. ರವಿಚಂದ್ರನ್ ಅವರ ಮಗ ಮನುರಂಜನ್ ರವಿಚಂದ್ರನ್ ಅಭಿನಯದ ‘ಮುಗಿಲ್ಪೇಟೆ’ ಚಿತ್ರವು ಅಂದೇ ಬಿಡುಗಡೆಯಾಗುತ್ತಿದೆ. ಚಿತ್ರತಂಡವು ಸೋಮವಾರ ಸಂಜೆ ಈ ವಿಷಯವನ್ನು ಅಧಿಕೃತವಾಗಿ ಘೋಷಿಸಿದೆ. ಈಗ ಅವೆರಡೂ ಚಿತ್ರಗಳ ಜತೆಗೆ ‘100’ ಸಹ ಸೇರಿಕೊಳ್ಳಲಿದೆ.
ಸದ್ಯಕ್ಕೆ ನ.19ರಂದು ಈ ಮೂರು ಚಿತ್ರಗಳು ಬಿಡುಗಡೆಯಾಗಲಿದ್ದು, ಮುಂದಿನ ದಿನಗಳಲ್ಲಿ ಎಷ್ಟು ಚಿತ್ರಗಳು ಪ್ಲಸ್ ಆಗುತ್ತದೋ, ಎಷ್ಟು ಮೈನಸ್ ಆಗುತ್ತದೋ ಈಗಲೇ ಹೇಳುವುದು ಕಷ್ಟ. ‘100’ ಚಿತ್ರದಲ್ಲಿ ರಮೇಶ್ ಜತೆಗೆ ರಚಿತಾ ರಾಮ್ ಪೂರ್ಣಾ ಮುಂತಾದವರು ಅಭಿನಯಿಸಿದ್ದು, ರಮೇಶ್ ರೆಡ್ಡಿ ನಿರ್ವಿುಸಿದ್ದಾರೆ.