

ಬೆಂಗಳೂರು: ಸಮಾಜದಲ್ಲಿ ಸೈಬರ್ ಕ್ರೖೆಮ್ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಅಂಥ ಪ್ರಕರಣಗಳು ಈಗ ಚಲನಚಿತ್ರದ ಕಥಾವಸ್ತುಗಳೂ ಆಗಿವೆ, ಆಗುತ್ತಿವೆ. ಅಂಥದ್ದೇ ವಿಷಯ ಇಟ್ಟುಕೊಂಡು ಇದೀಗ ‘100’ ಎಂಬ ವಿಶಿಷ್ಟ ಶೀರ್ಷಿಕೆಯಲ್ಲಿ ಚಿತ್ರವೊಂದು ಮೂಡಿಬಂದಿದೆ. ವಿಶೇಷ ಎಂದರೆ ಸೋಷಿಯಲ್ ಮೀಡಿಯಾ ಮೂಲಕ ನಡೆಯುವ ವಂಚನೆಗಳ ಕುರಿತ ಈ ಸಿನಿಮಾ ಮಾಡಿರುವ ಚಿತ್ರತಂಡ, ಸಾಮಾಜಿಕ ಜಾಲತಾಣದಲ್ಲೂ ಆ ಕುರಿತು ಜಾಗೃತಿ ಮೂಡಿಸಲು ಮುಂದಾಗಿದೆ. ಅದಕ್ಕೆಂದೇ ಹ್ಯಾಷ್ಟ್ಯಾಗ್ ಮೂಲಕ ತಮ್ಮ ಅನುಭವ ಹಂಚಿಕೊಳ್ಳುವಂತೆ ಸಾರ್ವಜನಿಕರು-ಸಿನಿಪ್ರಿಯರನ್ನು ಕೋರಿದೆ.
ರಮೇಶ್ ಅರವಿಂದ್ ನಿರ್ದೇಶನದ ಜತೆಗೆ ಅವರೇ ನಾಯಕರಾಗಿ ಅಭಿನಯಿಸಿರುವ ‘100’ ಚಿತ್ರತಂಡ #100KannadaFilm ಮೂಲಕ ಅಭಿಯಾನ ಹಮ್ಮಿಕೊಂಡಿದೆ. ಜಗತ್ತಿನಲ್ಲಿ ಹಲವಾರು ಮಂದಿ ಸೋಷಿಯಲ್ ಮೀಡಿಯಾ ದುರ್ಬಳಕೆಯಿಂದಾಗಿ ವಂಚನೆಗೆ ಒಳಗಾಗಿದ್ದಾರೆ. ಅಂಥವರು ತಮ್ಮ ಅನುಭವಗಳನ್ನು ಹ್ಯಾಷ್ಟ್ಯಾಗ್(#100KannadaFilm) ಮೂಲಕ ಟ್ವೀಟ್ ಮಾಡಿಕೊಳ್ಳುವಂತೆ ಚಿತ್ರತಂಡ ಮನವಿ ಮಾಡಿದೆ. ಇದರಿಂದ ಸೋಷಿಯಲ್ ಮೀಡಿಯಾ ಮೂಲಕ ಯಾವ್ಯಾವ ರೀತಿಯಲ್ಲಿ ವಂಚನೆಗಳು ನಡೆಯುತ್ತಿವೆ ಎಂಬುದು ಇತರರಿಗೂ ತಿಳಿದಂತಾಗುತ್ತದೆ. ಅಲ್ಲದೆ ಅಂಥ ಅಪರಾಧಗಳ ಬಗ್ಗೆ ಸೈಬರ್ ಕ್ರೖೆಮ್ ಎಕ್ಸ್ಪರ್ಟ್ ಮೂಲಕ ಪರಿಹಾರಗಳನ್ನು ಸೂಚಿಸುವ ಚಿಂತನೆಯನ್ನೂ ಚಿತ್ರತಂಡ ಹೊಂದಿದೆ.
‘ಸೂರಜ್ ಪ್ರೊಡಕ್ಷನ್’ ಬ್ಯಾನರ್ನಲ್ಲಿ ಎಂ. ರಮೇಶ್ ರೆಡ್ಡಿ ನಿರ್ಮಾಣ ಮಾಡಿರುವ ‘100’ನಲ್ಲಿ ರಮೇಶ್ ಅರವಿಂದ್ ಜತೆಗೆ ರಚಿತಾ ರಾಮ್ ಪೂರ್ಣ, ಶೋಭರಾಜ್ ಮುಂತಾದವರು ಅಭಿನಯಿಸಿದ್ದಾರೆ. ಈ ಚಿತ್ರದ ಮೂಲಕ ಹೊಸ ಪ್ರತಿಭೆ ವಿಶ್ವಕರ್ಣ ವಿಲನ್ ಆಗಿ ಸ್ಯಾಂಡಲ್ವುಡ್ಗೆ ಪರಿಚಯಿಸಲ್ಪಡುತ್ತಿದ್ದಾರೆ. ಫೆ. 7ಕ್ಕೆ ಸಿನಿಮಾ ಬಿಡುಗಡೆ ಮಾಡುವ ಗುರಿ ಇರಿಸಿಕೊಂಡಿದೆ ಚಿತ್ರತಂಡ.