

| ಮಂಜು ಕೊಟಗುಣಸಿ ಬೆಂಗಳೂರು
ಗಡಿಯಲ್ಲಿ ಉಗ್ರರ ವಿರುದ್ಧ ಹೋರಾಡಿದ ಆತ, ಸೇನೆಯಿಂದ ನಿವೃತ್ತನಾಗುತ್ತಾನೆ. ಹಾಗಂತ ತನ್ನ ಕೆಲಸ ಮುಗಿಯಿತೆಂದು ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಗಡಿಯ ಹೊರಗಿನ ಉಗ್ರರನ್ನು ಸದೆಬಡಿದಂತೆ ದೇಶದೊಳಗಿನ ದುಷ್ಟರ ಸಂಹಾರಕ್ಕೂ ಪ್ರಯತ್ನಿಸುತ್ತಾನೆ. ಚಾಣಾಕ್ಷತನದಿಂದ ಕುಳಿತಲ್ಲಿಯೇ ಒಂದೊಂದೇ ಪ್ರಕರಣ ಬೇಧಿಸುತ್ತಾನೆ. ಈ ಆಂತರಿಕ ಹೋರಾಟವನ್ನು ಆತ ಹೇಗೆ ನಿಭಾಯಿಸುತ್ತಾನೆ, ಅದರಲ್ಲಿ ಆತ ಜಯಿಸುತ್ತಾನೆಯೇ? ಆ ರೋಚಕ ಕಹಾನಿಯೇ ‘ರಾಜತಂತ್ರ’!
ನಿವೃತ್ತ ಆರ್ವಿು ಅಧಿಕಾರಿ ಕ್ಯಾಪ್ಟನ್ ರಾಜಾರಾಮ್ ಪಾತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಹೆಚ್ಚು ಕಷ್ಟಪಡದೆ ಸಲೀಸಾಗಿ ಪಾತ್ರವನ್ನು ಪೋಷಣೆ ಮಾಡಿದ್ದಾರೆ. ವಿಶೇಷ ಏನೆಂದರೆ, ಅವರನ್ನೇ ಗಮನದಲ್ಲಿಟ್ಟುಕೊಂಡು ಈ ಕಥೆ ಹೆಣೆಯಲಾಗಿರುವುದರಿಂದ ಅವರ ಇಮೇಜ್ಗೆ ಮತ್ತು ಸದ್ಯದ ದೈಹಿಕ ಸ್ಥಿತಿಗೆ ಎಲ್ಲಿಯೂ ಚ್ಯುತಿ ಬರದಂತೆ ನಿರ್ದೇಶಕ ಪಿವಿಆರ್ ಸ್ವಾಮಿ ಗೊಗರದೊಡ್ಡಿ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಆಂತರಿಕ ಯುದ್ಧದಲ್ಲಿ ಚಾಣಾಕ್ಷ ಚದುರಂಗದ ಆಟಗಾರನಂತೆ ರಾಜತಂತ್ರದಲ್ಲಿ ರಾಘಣ್ಣ ಗೋಚರಿಸುತ್ತಾರೆ.