ವಿಟ್ಲ: ಮಕ್ಕಳು ಸಾಹಿತ್ಯದತ್ತ ಚಿತ್ತ ಹರಿಸುವಂತೆ ಮಾಡುವುದು ಪಾಲಕರ ಕರ್ತವ್ಯ. ಸಾಹಿತ್ಯ ಪ್ರೀತಿ ಪ್ರತಿಯೊಬ್ಬರಲ್ಲಿ ಮೊಳಗಬೇಕಾದ ಅನಿವಾರ್ಯತೆಯಿದೆ. ಸಾಹಿತ್ಯ ನಮ್ಮದು ಎನ್ನುವ ಅಸ್ಮಿತೆ ನಮ್ಮೆಲ್ಲರಲ್ಲಿ ಮೂಡಬೇಕಾಗಿದೆ ಎಂದು ಸಮ್ಮೇಳನಾಧ್ಯಕ್ಷ ಹಿರಿಯ ಸಾಹಿತಿ ಮುಳಿಯ ಶಂಕರ ಭಟ್ಟ ಹೇಳಿದರು.
ವಿಟ್ಠಲ ಪದವಿಪೂರ್ವ ಕಾಲೇಜಿನಲ್ಲಿ ಚುಟುಕು ಸಾಹಿತ್ಯ ಪರಿಷತ್ತು ದ. ಕ. ಜಿಲ್ಲೆ, ಬಂಟ್ವಾಳ ತಾಲೂಕು ಹಾಗೂ ವಿಟ್ಠಲ ಎಜ್ಯುಕೇಶನಲ್ ಸೊಸೈಟಿ ಆಶ್ರಯದಲ್ಲಿ ಬಂಟ್ವಾಳ ತಾಲೂಕು ೬ನೇ ಚುಟುಕು ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾರೋಪ ಭಾಷಣ ಮಾಡಿದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬೆಂಗಳೂರು ಕೇಂದ್ರ ಕಚೇರಿಯ ಕಾನೂನು ಅಽಕಾರಿ ನರಸಿಂಹ ವರ್ಮ ವಿಟ್ಲ, ಚುಟುಕು ಸಾಹಿತ್ಯದ ಇತಿಹಾಸ ಚುಟುಕಲ್ಲ. ೬ನೇ ಶತಮಾನದ ಕಪ್ಪೆ ಅರೆಭಟ್ಟನ ಶಾಸನದಲ್ಲಿಯೂ ಚುಟುಕು ಸಾಹಿತ್ಯದ ಬಗ್ಗೆ ಉಲ್ಲೇಖವಿದೆ. ವಚನ ಸಾಹಿತ್ಯ, ದಾಸ ಸಾಹಿತ್ಯ, ತ್ರಿಪದಿ, ಚೌಪದಿ, ಜಾನಪದ ಸಾಹಿತ್ಯಗಳೆಲ್ಲವೂ ಚುಟುಕುಗಳಾಗಿವೆ. ಅನುಭವದ ಆಧಾರದ ಮೇಲೆ ಚುಟುಕುಗಳು ಮೂಡುತ್ತವೆ ಎಂದರು.
ಬಂಟ್ವಾಳ ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ರಾಜೇಂದ್ರ ರೈ, ಬಂಟ್ವಾಳ ಹಿದಯ ಫೌಂಡೇಷನ್ ಅಧ್ಯಕ್ಷ ಹಾಜಿ ಮಹಮ್ಮದ್ ಹನೀಫ್ ಗೋಳ್ತಮಜಲು ಭಾಗವಹಿಸಿದ್ದರು.
ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಪ್ರಧಾನ ಸಂಚಾಲಕ ಡಾ.ಎಂ.ಜಿ.ಅರಸ್, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹರೀಶ್ ಸುಲಾಯ ಒಡ್ಡಂಬೆಟ್ಟು, ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವರಾಮ ಕಾಸರಗೋಡು, ಬಂಟ್ವಾಳ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಆನಂದ ರೈ ಅಡ್ಕಸ್ಥಳ, ಸ್ವಾಗತ ಸಮಿತಿ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಮರುವಾಳ, ಉಪಾಧ್ಯಕ್ಷ ಸುದರ್ಶನ ಪಡಿಯಾರ್ ವಿಟ್ಲ ಉಪಸ್ಥಿತರಿದ್ದರು.
ಸಮ್ಮೇಳನ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜಾರಾಮ ವರ್ಮ ವಿಟ್ಲ ಸ್ವಾಗತಿಸಿದರು. ಬಂಟ್ವಾಳ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಕಾರ್ಯದರ್ಶಿ ಜಯರಾಮ ಪಡ್ರೆ ವಂದಿಸಿದರು. ವಿಂಧ್ಯಾ ಎಸ್.ರೈ ಕಾರ್ಯಕ್ರಮ ನಿರೂಪಿಸಿದರು.
ವೈದ್ಯಕೀಯ ಕ್ಷೇತ್ರದ ಡಾ.ವಿಶ್ವನಾಥ ನಾಯಕ್, ಡಾ.ಜಯರಾಮ ವಿಶ್ವನಾಥ, ಸಾಹಿತ್ಯ ಕ್ಷೇತ್ರದ ಸವಿತಾ ಎಸ್.ಭಟ್ ಅಡ್ವಾಯಿ, ಶಿಕ್ಷಣ ಕ್ಷೇತ್ರದ ನಾರಾಯಣ ಪೂಜಾರಿ ಎಸ್.ಕೆ, ಯಕ್ಷಗಾನ ರಂಗದ ಸದಾಶಿವ ಶೆಟ್ಟಿ ಸಿದ್ಧಕಟ್ಟೆ, ಕೃಷಿ ಕ್ಷೇತ್ರದ ಚಿದಾನಂದ ಪೆಲತ್ತಿಂಜ, ವಾಸ್ತು ತಜ್ಞ ಕೃಷ್ಣಪ್ಪ ಆಚಾರ್ಯ, ದೈವ ನರ್ತಕ ರಮೇಶ್ ವಗ್ಗ, ಸಾಮಾಜಿಕ ಸೇವಾಕರ್ತ ರಶೀದ್ ವಿಟ್ಲ, ಉದ್ಯಮಿ ಚಾರ್ಲ್ಸ್ ಸಿಕ್ವೇರಾ, ನಿವೃತ್ತ ಯೋಧ ದಯಾನಂದ ಗೌಡ ಅವರನ್ನು ಸನ್ಮಾನಿಸಲಾಯಿತು.
ವಿವಿಧ ಕಾರ್ಯಕ್ರಮ:
ವಿಟ್ಠಲ ಪ್ರೌಢ ಶಾಲೆ ಹಾಗೂ ವಿಟ್ಠಲ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಯಕ್ಷಗಾನ ತಾಳಮದ್ದಳೆ ಶರಸೇತು ಬಂಧ ನಡೆಯಿತು. ಮಕ್ಕಳ ಚುಟುಕು ಗೋಷ್ಠಿ, ವಿಚಾರ ಸಂಕಿರಣ, ಹಿರಿಯರ ಚುಟುಕು ಗೋಷ್ಠಿ ನಡೆಯಿತು.