ವಿಟ್ಲ: ಚುಟುಕು ಸಾಹಿತ್ಯ ಪರಿಷತ್ತು ದ. ಕ. ಜಿಲ್ಲೆ, ಬಂಟ್ವಾಳ ತಾಲೂಕು ಹಾಗೂ ವಿಟ್ಠಲ ಎಜ್ಯುಕೇಶನಲ್ ಸೊಸೈಟಿ ಆಶ್ರಯದಲ್ಲಿ ಬಂಟ್ವಾಳ ತಾಲೂಕು ೬ನೇ ಚುಟುಕು ಸಾಹಿತ್ಯ ಸಮ್ಮೇಳನ ಡಿ.೨೯ರಂದು ಬೆಳಗ್ಗೆ ೯ರಿಂದ ವಿಟ್ಠಲ ಪದವಿಪೂರ್ವ ಕಾಲೇಜು ಸುವರ್ಣ ರಂಗಮಂದಿರದಲ್ಲಿ ನಡೆಯಲಿದ್ದು, ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿ ಮುಳಿಯ ಶಂಕರ ಭಟ್ಟ ಭಾಗವಹಿಸಲಿದ್ದಾರೆ ಎಂದು ಸ್ವಾಗತ ಸಮಿತಿ ಕಾರ್ಯದರ್ಶಿ ರಾಜಾರಾಮ ವರ್ಮ ವಿಟ್ಲ ಹೇಳಿದರು.
ಬೆಳಗ್ಗೆ ೯ಕ್ಕೆ ಮೆರವಣಿಗೆಯನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಉದ್ಘಾಟಿಸಲಿದ್ದಾರೆ. ಕನ್ನಡ ಧ್ವಜಾರೋಹಣವನ್ನು ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕದ ವಿಶ್ವನಾಥ ಬಂಟ್ವಾಳ, ಚುಟುಕು ಸಾಹಿತ್ಯ ಧ್ವಜಾರೋಹಣವನ್ನು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಹರೀಶ ಸುಲಾಯ ಒಡ್ಡಂಬೆಟ್ಟು ನಡೆಸಲಿದ್ದಾರೆ. ವಿಟ್ಠಲ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಮುಗುಳಿ ತಿರುಮಲೇಶ್ವರ ಭಟ್ಟ ಪ್ರದರ್ಶನ ಮಳಿಗೆ ಉದ್ಘಾಟಿಸಲಿದ್ದಾರೆ. ಬೆಳಗ್ಗೆ ೯.೩೦ಕ್ಕೆ ವಿಟ್ಲ ಅರಮನೆಯ ಬಂಗಾರು ಅರಸರ ಉಪಸ್ಥಿತಿಯಲ್ಲಿ ಉದ್ಘಾಟನೆಯನ್ನು ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಪ್ರಧಾನ ಸಂಚಾಲಕ ಡಾ. ಎಂ. ಜಿ. ಆರ್. ಅರಸ್ ನಡೆಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾಧಕರಿಗೆ ಸನ್ಮಾನ, ಪುಸ್ತಕ ಲೋಕಾರ್ಪಣೆ ನಡೆಯಲಿದೆ. ೧೧.೧೦ರಿಂದ ಮಕ್ಕಳ ಚುಟುಕು ಗೋಷ್ಠಿ, ೧೨.೨೦ರಿಂದ ವಿಚಾರಗೋಷ್ಠಿ, ೨.೩೦ರಿಂದ ಹಿರಿಯ ಚುಟುಕು ಗೋಷ್ಠಿ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ೩.೪೦ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು, ಕೆ.ಎಸ್.ಆರ್.ಟಿ.ಸಿ. ಕಾನೂನು ಅಽಕಾರಿ ನರಸಿಂಗ ವರ್ಮ ವಿಟ್ಲ ಅರಮನೆ ಸಮಾರೋಪ ಭಾಷಣ ಮಾಡಲಿದ್ದಾರೆ. ಸಾಧಕರಿಗೆ ಸನ್ಮಾನ ನಡೆಯಲಿದೆ ಎಂದರು.
ಬಂಟ್ವಾಳ ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಆನಂದ ರೈ ಅಡ್ಕಸ್ಥಳ, ಪ್ರಧಾನ ಕಾರ್ಯದರ್ಶಿ ಜಯರಾಮ ಪಡ್ರೆ, ಉಪಾಧ್ಯಕ್ಷ ವಿಷ್ಣುಗುಪ್ತ ಪುಣಚ ಉಪಸ್ಥಿತರಿದ್ದರು.