

Chris Gayle: ವೆಸ್ಟ್ ಇಂಡೀಸ್ನ ದೈತ್ಯ ಕ್ರಿಕೆಟಿಗ, ಯೂನಿವರ್ಸಲ್ ಬಾಸ್ ಎಂದೇ ಖ್ಯಾತಿ ಪಡೆದಿರುವ ಕ್ರಿಸ್ ಗೇಲ್, ಆರ್ಸಿಬಿ ಫ್ರಾಂಚೈಸಿ ಅಭಿಮಾನಿಗಳ ನೆಚ್ಚಿನ ಬ್ಯಾಟರ್ ಹಾಗೂ ವ್ಯಕ್ತಿ. ಇದಕ್ಕೆ ಕಾರಣ, ಆರ್ಸಿಬಿ ಪರ ಅವರು ಆಡಿದ ಅದ್ಭುತ ಇನ್ನಿಂಗ್ಸ್ ಮತ್ತು ವಿರಾಟ್ ಕೊಹ್ಲಿ ಜತೆಗಿನ ಉತ್ತಮ ಒಡನಾಟ. ಎಲ್ಲರೊಂದಿಗೆ ಸದಾ ಖುಷಿಯಿಂದಲೇ ಮಾತನಾಡುವ ಗೇಲ್, ಐಪಿಎಲ್ ಸಮಯದಲ್ಲಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ತಮ್ಮನ್ನು ನಡೆಸಿಕೊಂಡ ಬಗ್ಗೆ ಅಚ್ಚರಿ ಹೇಳಿಕೆಗಳನ್ನು ಹೊರಹಾಕಿದ್ದಾರೆ.
ಹಳೆಯ ಸಮಯವನ್ನು ಮೆಲುಕು ಹಾಕಿದ ಕ್ರಿಸ್, ಪಂಜಾಬ್ ಕಿಂಗ್ಸ್ ವಿರುದ್ಧ ಅಚ್ಚರಿ ಹೇಳಿಕೆಗಳನ್ನು ಹೊರಬಿಟ್ಟಿದ್ದಾರೆ. ಪ್ರೀತಿ ಜಿಂಟಾ ಒಡೆತನದ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ, ಅಂದು ತಮ್ಮನ್ನು ಕೆಟ್ಟದಾಗಿ ನಡೆಸಿಕೊಂಡಿತು ಮತ್ತು ಅವಮಾನಿಸಿತು ಎಂದು ಹೇಳಿದ್ದಾರೆ. ಆ ಸಮಯದಲ್ಲಿ ನನಗಾದ ಬೇಸರವನ್ನು ಸಹಿಸಲಾಗದೆ ಅಂದಿನ ನಮ್ಮ ಕೋಚ್ ಅನಿಲ್ ಕುಂಬ್ಳೆ ಮುಂದೆ ನೋವು ತೋಡಿಕೊಂಡೆ. ಆಗಿನ ಪಂಜಾಬ್ ಕ್ಯಾಪ್ಟನ್ ಕೆ.ಎಲ್. ರಾಹುಲ್ ನನಗೆ ಕರೆ ಮಾಡಿ ಮಾತಾಡಿದ್ದರು ಎಂದಿದ್ದಾರೆ.
ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ ಗೇಲ್, "ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಪಂಜಾಬ್ ಜತೆಗಿನ ನನ್ನ ಐಪಿಎಲ್ ಪ್ರಯಾಣವು ಬಹುಬೇಗನೆ ಮುಗಿಯಿತು. ಫ್ರಾಂಚೈಸಿ ನನಗೆ ಅಗೌರವ ತೋರಿತು. ಲೀಗ್ಗಾಗಿ ಮತ್ತು ತಂಡಕ್ಕಾಗಿ ಹೆಚ್ಚುವರಿ ಶ್ರಮಿಸಿದ ಒಬ್ಬ ಹಿರಿಯ ಆಟಗಾರನನ್ನು ಸರಿಯಾಗಿ ನಡೆಸಿಕೊಳ್ಳಲು ಇವರಿಂದ ಸಾಧ್ಯವಿಲ್ಲ ಎಂದು ನನಗೆ ಅನಿಸಿತು. ಫ್ರಾಂಚೈಸಿಯ ವರ್ತನೆಯಿಂದಾಗಿ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದೆ. ನನ್ನ ಜೀವನದಲ್ಲಿ ಅದೇ ಮೊದಲ ಬಾರಿಗೆ ನಾನು ಖಿನ್ನತೆಯ ಸ್ಥಿತಿಯಲ್ಲಿದ್ದೆ" ಎಂದು ಹೇಳಿದ್ದಾರೆ.
"ಯಾರಾದರೂ ಖಿನ್ನತೆಯ ಬಗ್ಗೆ ಮಾತನಾಡಿದರೆ, ಅದು ಎಷ್ಟು ನೋವಿನಿಂದ ಕೂಡಿರುತ್ತದೆ ಎಂಬುದು ನನಗೆ ಅರ್ಥವಾಗುತ್ತೆ. ಪಂಜಾಬ್ ಕಿಂಗ್ಸ್ ನನ್ನನ್ನು ನಡೆಸಿಕೊಂಡ ರೀತಿ ನಿಜಕ್ಕೂ ಭಾರೀ ನೋವು ಉಂಟುಮಾಡಿತು. ಈ ಬಗ್ಗೆ ನಾನು ಕೋಚ್ ಅನಿಲ್ ಕುಂಬ್ಳೆಗೆ ವಿವರಿಸಿ, ನನ್ನ ಅಸಮಾಧಾನ ವ್ಯಕ್ತಪಡಿಸಿದೆ. ಆಗ ತಂಡದ ಕ್ಯಾಪ್ಟನ್ ಕೆ.ಎಲ್. ರಾಹುಲ್ ಕರೆ ಮಾಡಿ, 'ಕ್ರಿಸ್, ನೀವು ಮುಂದಿನ ಪಂದ್ಯದಲ್ಲಿ ಆಡುತ್ತಿದ್ದೀರಾ' ಎಂದರು. ಅದಕ್ಕೆ 'ನಾನು, ಆಲ್ ದಿ ಬೆಸ್ಟ್ ನಿಮಗೆ' ಎಂದು ಹೇಳಿ, ನನ್ನ ಬ್ಯಾಗ್ ಪ್ಯಾಕ್ ಮಾಡಿಕೊಂಡು ಹೊರಬಂದೆ" ಎಂದು ಗೇಲ್ ಹೇಳಿದ್ದಾರೆ.
2009ರಲ್ಲಿ ಐಪಿಎಲ್ಗೆ ಪಾದಾರ್ಪಣೆ ಮಾಡಿದ ಕ್ರೀಸ್ ಗೇಲ್, 2021ರಲ್ಲಿ ಲೀಗ್ಗೆ ಗುಡ್ಬೈ ಹೇಳಿದರು. ತಮ್ಮ ವೃತ್ತಿಜೀವನದಲ್ಲಿ 142 ಐಪಿಎಲ್ ಪಂದ್ಯಗಳನ್ನಾಡಿರುವ ಅವರು, 39.7ರ ಸರಾಸರಿಯಲ್ಲಿ 4965 ರನ್ ಗಳಿಸಿದ್ದಾರೆ. ಇದರಲ್ಲಿ 6 ಶತಕಗಳು ಮತ್ತು 31 ಅರ್ಧಶತಕಗಳು ಸೇರಿವೆ. ಐಪಿಎಲ್ನಲ್ಲಿ ಅವರ ಅತ್ಯಧಿಕ ಸ್ಕೋರ್ ಅಜೇಯ 175 ರನ್. ಇಲ್ಲಿಯವರೆಗೂ ಈ ದಾಖಲೆಯನ್ನು ಯಾರೊಬ್ಬರೂ ಮುರಿಯಲು ಸಾಧ್ಯವಾಗಿಲ್ಲ ಎಂಬುದು ವಿಶೇಷ,(ಏಜೆನ್ಸೀಸ್).