ಭಾರತೀಯ ಚಿತ್ರರಂಗದ ಸಿನಿಮಾ ಇತಿಹಾಸ ತಿಳಿಸಲಿದೆ ಚಿತ್ರಪಥ!

Chitarpatha
Published on

ಬೆಂಗಳೂರು: ಭಾರತೀಯ ಚಿತ್ರರಂಗದ ಇತಿಹಾಸವನ್ನು ಕಣ್ಣಮುಂದೆ ತೆರೆದಿಡುವ ‘ಚಿತ್ರಪಥ ಡಾಟ್ ಕಾಮ್’ ಅನ್ನು ರಾಷ್ಟ್ರಪ್ರಶಸ್ತಿ ಪುರಸ್ಕೃತ, ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಇತ್ತೀಚೆಗೆ ಅನಾವರಣಗೊಳಿಸಿದರು. ಶಶಿಧರ್ ಚಿತ್ರದುರ್ಗ ಹೊರತಂದಿರುವ ಈ ಚಿತ್ರಪಥದಲ್ಲಿ ಒಟ್ಟು ಒಂಭತ್ತು ವಿಭಾಗಗಳಲ್ಲಿ ಮಾಹಿತಿಯನ್ನು ನೀಡಲಾಗುತ್ತದೆ. ನೆನಪು, ಮಾಹಿತಿ ವಿಶೇಷ, ವಿಡಿಯೋ, ಪೋಸ್ಟರ್ ಮಾಹಿತಿ, ಸಿನಿಮಾ ಅಂದು-ಇಂದು, ಚಿತ್ರಕತೆ, ಶೂಟಿಂಗ್ ಸೋಜಿಗ ಮತ್ತು ಅತಿಥಿ ಅಕ್ಷರ ಹೀಗೆ ಆಯಾ ವಿಷಯಕ್ಕೆ ಸಂಬಂಧಪಟ್ಟ ಮಾಹಿತಿ ಇದರಲ್ಲಿ ಲಭ್ಯವಾಗಲಿದೆ.

ಚಿತ್ರಪಥ ಲೋಕಾರ್ಪಣೆ ಮಾಡಿ ಮಾತನಾಡಿದ ಗಿರೀಶ್ ಕಾಸರವಳ್ಳಿ, ಇತಿಹಾಸವನ್ನು ಕೇವಲ ಕುತೂಹಲದಿಂದ ನೋಡುವುದಲ್ಲ. ಅದು ನಮಗೆ ಪಾಠವನ್ನು ಕಲಿಸುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮ ಕಾಲದಲ್ಲಿ ಇಷ್ಟೆಲ್ಲ ಅನುಕೂಲತೆಗಳು ಇರಲಿಲ್ಲ. ವರ್ಷಕ್ಕೊಮ್ಮೆ ಪತ್ರಿಕೆಯಲ್ಲಿ ಪ್ರಕಟವಾಗುವುದನ್ನೇ ಕಾಯುತ್ತಿದ್ದೆವು. ಈಗ ಎಲ್ಲವೂ ಡಿಜಿಟಲ್‌ಮಯ. ಆ ಸಾಹಸಕ್ಕೆ ಚಿತ್ರಪಥ ಕೈಹಾಕಿದೆ. ಚಿತ್ರರಂಗದಲ್ಲಿ ದುಡಿದ ಅದೆಷ್ಟೋ ಕಾಣದ ತಂತ್ರಜ್ಞರ ಮುಖಗಳನ್ನು ತೆರೆದಿಡುತ್ತಿದ್ದಾರೆ. ಈ ಪ್ರಯತ್ನ ನಿರಂತರವಾಗಿರಲಿ ಎಂದರು.

ನಟ ಸಂಚಾರಿ ವಿಜಯ್, ಗೀತ ಸಾಹಿತಿ ಕವಿರಾಜ್ ಸಹ ಆಗಮಿಸಿ ತಂಡಕ್ಕೆ ಶುಭಕೋರಿದರು. ಇದೇ ವೇಳೆ 1960 ರಿಂದ ಮೂರು ದಶಕಗಳ ಕಾಲ ಸಿನಿಮಾ ಸ್ಥಿರ ಚಿತ್ರ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿದ್ದ ಭವಾನಿ ಲಕ್ಷೀನಾರಾಯಣ ಮತ್ತು ಪ್ರಗತಿ ಅಶ್ವತನಾರಾಯಣ್ ಅವರನ್ನು ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net