ಜಗನ್ ಮನಸ್ಸು ಗೆದ್ದ ಚಿರಂಜೀವಿ! ಹೊಸ ಟಿಕೆಟ್ ಬೆಲೆ ಕಾಯ್ದೆ ರದ್ದು?

Published on
ತೆಲುಗು ಮೆಗಾಸ್ಟಾರ್ ಚಿರಂಜೀವಿ ಅವರು ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರನ್ನು ಅವರ ತಾಡೆಪಲ್ಲಿ ನಿವಾಸದಲ್ಲಿ ಜನವರಿ 13 ರಂದು ಭೇಟಿಯಾಗಿದ್ದರು. ಈ ಸಮಯದಲ್ಲಿ ಸಿನಿಮಾ ಟಿಕೆಟ್ ಬೆಲೆ ಕಡಿತದ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಗಳು ನಡೆದಿವೆ ಎಂಬ ಸುದ್ದಿಗಳು ಹರಿದಾಡಿದ್ದವು. ಈ ವಿಚಾರದ ಕುರಿತು ಕೆಲವು ತೆಲುಗು ಸಿನಿಮಾರಂಗದವರು ಮತ್ತು ವೈಎಸ್‌ಆರ್ ಸರ್ಕಾರದ ನಾಯಕರ ನಡುವೆ ನಿರಂತರ ಮಾತಿನ ಸಮರ ನಡೆಯುತ್ತಿತ್ತು. ಆದರೆ, ಜಗನ್ ಸರ್ಕಾರ ಜಾರಿಗೆ ತಂದ ಹೊಸ ಆಂಧ್ರಪ್ರದೇಶ ಸಿನಿಮಾ ತಿದ್ದುಪಡಿ ಕಾಯಿದೆ 2021ರ ನಿಯಮಗಳನ್ನು, ಇದೇ ಸರ್ಕಾರ ರದ್ದು ಮಾಡುತ್ತದೆ ಎಂಬ ಮಾತುಗಳು ಕೇಳಿಬಂದಿವೆ.
ಹೌದು, ಇದಕ್ಕೆ ಕಾರಣ ನಟ ಚಿರಂಜೀವಿ ಅವರು ಸಿಎಂ ಅನ್ನು ಭೇಟಿಯಾದ ನಂತರ ಅವರು ಆಡಿದ ಮಾತುಗಳು. 'ಜಗನ್ ಅವರನ್ನು ತೆಲುಗು ಸಿನಿಮಾರಂಗದ ಮುಖ್ಯಸ್ಥನಾಗಿ ಅಲ್ಲ, ಬದಲಿಗೆ ಚಿತ್ರರಂಗದ ಮಗನಾಗಿ ನಾನು ಭೇಟಿ ಮಾಡಿದ್ದೇನೆ. ಅವರಿಗೆ ನಮ್ಮ ಸಮಸ್ಯೆಗಳನ್ನು ತಿಳಿಸಿದ್ದೇನೆ. ಹಾಗಾಗಿ, ಸರ್ಕಾರ ಅದರ ಬೇರೆ ಹೊಸ ಆದೇಶವನ್ನು 2-3 ವಾರಗಳಲ್ಲಿ ತಿಳಿಸಲಿದೆ ಎಂದು ನಾನು ಭಾವಿಸುತ್ತೇನೆ. ಇದನ್ನು, ಮುಖ್ಯಮಂತ್ರಿಗಳೂ ನನಗೆ ಹೇಳಿದರು. ದೊಡ್ಡ ಮತ್ತು ಸಣ್ಣ ಬಜೆಟ್‌ನ ಸಿನಿಮಾಗಳ ಭೇದವಿಲ್ಲದೆ ಸರ್ಕಾರದ ನಿರ್ಧಾರವು ಎಲ್ಲರಿಗೂ ಅನುಕೂಲಕರವಾಗಿರುತ್ತದೆ ಎಂದು ನಾನು ನಿರೀಕ್ಷಿಸುತ್ತೇನೆ', ಅಂತ ಮೆಗಾಸ್ಟಾರ್ ಮಾದ್ಯಮ ಮಿತ್ರರಿಗೆ ತಿಳಿಸಿದ್ದಾರೆ. ಹಾಗಾದರೆ, ಜಗನ್ ಸರ್ಕಾರದ ಮುಂದಿನ ಆದೇಶ ಯಾವಾಗ ಬರಲಿದೆ ಎಂದು ಕಾದು ನೋಡಬೇಕಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net