More

    ಇಪ್ಪತ್ತು ವಸಂತಗಳನ್ನು ಸಾಗಿ ಬಂದ ಚಿಣ್ಣರಬಿಂಬ: ಮಕ್ಕಳ ಕಾಳಜಿ, ಭವ್ಯ ರಾಷ್ಟ್ರ ನಿರ್ಮಾಣದ ಗುರಿ

    ಯಾವನೇ ವ್ಯಕ್ತಿ ಬದುಕುವ ನೆಲದಲ್ಲಿ ಆಳವಾಗಿ ಬೇರು ಬಿಡುತ್ತಾ ಆ ಮಣ್ಣಿನ ಸತ್ವವನ್ನು ಹೀರಿಕೊಂಡಾಗ ಮಾತ್ರ ಆತನ ಆಂತರ್ಯದ ಪರಿಚಯ ಲೋಕ ಮುಖಕ್ಕೆ ಆಗಲು ಸಾಧ್ಯ, ಜೊತೆಗೆ ತನ್ನ ಜೀವನವನ್ನು ಸಾರ್ಥಕಗೊಳಿಸುವಲ್ಲಿ ಆತನು ಸಫಲನಾಗುತ್ತಾನೆ.

    ತಾಯಿ ಭುವನೇಶ್ವರಿಯ ಮಕ್ಕಳಾದ ನಾವೆಲ್ಲ ಒಂದಲ್ಲ ಒಂದು ರೀತಿಯ ಕಾರಣಗಳಿಂದ ತಾಯಿ ನಾಡನ್ನು ಬಿಟ್ಟು ಬದುಕುವ ದಾರಿಯನ್ನು ಶೋಧಿಸುತ್ತಾ ಸಾಧಕರ ಕರ್ಮಭೂಮಿ, ಬಹು ಭಾಷಿಗರ ಸಂಗಮವೆಂದು ಕರೆಸಿಕೊಂಡಿರುವ ಮುಂಬಯಿ ಮಹಾನಗರಿಗೆ ಬಂದು ಇದನ್ನೇ ತಮ್ಮ ಕರ್ಮಭೂಮಿಯನ್ನಾಗಿ ಸ್ವೀಕರಿಸಿ ಕ್ರಮೇಣ ಯಶಸ್ಸಿನ ಒಂದೊಂದೇ ಹಂತವನ್ನು ದಾಟುತ್ತಾ ಬದುಕಿಗೊಂದು ಅರ್ಥವನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾದೆವು. ಜೊತೆಗೆ ನಾವು ಬುದ್ಧಿಜೀವಿಗಳು, ಪರೋಪಕಾರಿಗಳು, ಸ್ನೇಹಜೀವಿಗಳೆಂಬ ಹೆಗ್ಗಳಿಕೆಯ ಮಾತನ್ನು ಮಹಾನಗರದಲ್ಲಿ ಗಳಿಸಿಕೊಂಡೆವು. ಹೀಗೆ ಹಂತ ಹಂತವಾಗಿ ಬದುಕಿನಲ್ಲಿ ಬೆಳೆಯುತ್ತಾ ಮುಂದೆ ಸಾಗಿದ ನಮಗೆ ನಮ್ಮಲ್ಲಿರುವ ಭಾಷಾಪ್ರೇಮ, ಸಂಸ್ಕಾರ ಎಚ್ಚೆತ್ತುಕೊಂಡು ಭವಿಷ್ಯವನ್ನು ನಿರ್ಮಾಣ ಮಾಡುವ ಪಣತೊಟ್ಟು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದೆವು. ಅಂತವರಲ್ಲಿ ನಮ್ಮ ಕಣ್ಣ ಮುಂದೆ ಬರುವವರು ಮಾಜಿ ಪೊಲೀಸ್ ಅಧಿಕಾರಿ ಶ್ರೀಯುತ ಪ್ರಕಾಶ್ ಭಂಡಾರಿ, ಕಲಾವಿದರಾದ ತೋನ್ಸೆ ವಿಜಯ್ ಕುಮಾರ್ ಶೆಟ್ಟಿ ಹಾಗೂ ಅಭಿಜಾತ ಕಲಾವಿದ, ಕೈಗಾರಿಕೋದ್ಯಮಿ ಡಾ. ಸುರೇಂದ್ರ ಕುಮಾರ್ ಹೆಗ್ಡೆಯವರು. ನಾನಾ ಕಲಾ ಪ್ರತಿಭೆಯ ಭಂಡಾರವಾಗಿದ್ದ ಈ ತ್ರಿವಳಿಗಳು 45 ವರ್ಷಗಳ ಹಿಂದೆ ಕಲಾ ಜಗತ್ತು ಎಂಬ ಅರ್ಥಪೂರ್ಣ ಸಂಸ್ಥೆಯನ್ನು ಸ್ಥಾಪಿಸಿ ಯಶಸ್ವಿಯಾದವರು.

    2002ರಲ್ಲಿ ಕಲಾಜಗತ್ತು ತನ್ನ ರಜತ ಸಂಭ್ರಮವನ್ನು ಆಚರಿಸುವ ಸಂದರ್ಭದಲ್ಲಿ ಈಗಾಗಲೇ ವಿವಿಧ ನಾಟಕಗಳ ಮೂಲಕ ಪ್ರಸಿದ್ಧಿಯ ತುತ್ತತುರಿಯಲ್ಲಿದ್ದು ಮುಂದೆ ನಮ್ಮ ಪಯಣ ಎಲ್ಲಿಗೆ ಎಂಬ ಪ್ರಶ್ನೆಗೆ ಇಂದು ಮುಂದಿನ ಪೀಳಿಗೆಯ ಬಗ್ಗೆ ಯೋಚಿಸಬೇಕಾದ ಅನಿವಾರ್ಯತೆ ನಮಗಿದೆ, ಆಧುನಿಕತೆ ಸಿಕ್ಕಿ ನಲುಗುತ್ತಿರುವ ಎಳೆಯರನ್ನು ಮುಂದಿನ ಕಲಾವಿದರನ್ನಾಗಿ, ಉತ್ತಮ ನಾಗರಿಕರನ್ನಾಗಿ ರೂಪಿಸಬೇಕು, ಭವ್ಯ ದೇಶದ ದಿವ್ಯ ಪ್ರಜೆಗಳನ್ನಾಗಿಸಬೇಕು ಎಂಬ ನಿರ್ಣಯವನ್ನು ತಳೆದು ಆ ಮೂಲಕ ಚಿಣ್ಣರಬಿಂಬವೆಂಬ ಅಂಗಸಂಸ್ಥೆ ಜನ್ಮ ತಳೆಯಿತು.

    ಭಾರತೀಯ ಸಂಸ್ಕೃತಿಯು ಅತ್ಯಂತ ಪುರಾತನವಾದುದು, ಅಂತೆಯೇ ಸನಾತನವಾದುದು. ಭಾರತೀಯತೆಯನ್ನು ಮೈಗೂಡಿಸಿಕೊಂಡಾಗ ಮಾತ್ರ ಈ ರಾಷ್ಟ್ರದ ಪ್ರಜೆ ಸಂಸ್ಕಾರವಂತ ನಾಗರಿಕನಾಗಿ ರೂಪುಗೊಳ್ಳುವುದು ಸಾಧ್ಯ. ಯಾವನೇ ವ್ಯಕ್ತಿಯನ್ನು ರೂಪಿಸುವುದು ಆತನ ಬಾಲ್ಯದ ಶಿಕ್ಷಣ-ಸಂಸ್ಕಾರಗಳು, ಈ ದಿಶೆಯಲ್ಲಿ ಹುಟ್ಟಿಕೊಂಡ ಚಿಣ್ಣರಬಿಂಬಕ್ಕೆ ಇದೀಗ 20ರ ಹರೆಯ. ನಗರ ಉಪನಗರಗಳಲ್ಲಿ ಕ್ರಾಂತಿಯನ್ನೇ ಮಾಡಿರುವ ಈ ಸಂಸ್ಥೆ ತುಳು-ಕನ್ನಡಿಗರ ಮನೆ ಮನೆಗಳಲ್ಲಿ ಸ್ಥಿರವಾಗಿ ನೆಲೆ ನಿಂತಿದೆ.

    20 ವರ್ಷಗಳ ಹಿಂದೆ ಪರಮಪೂಜ್ಯ ಪದ್ಮವಿಭೂಷಣ ಹರಿಪಾದ ಐಕ್ಯರಾಗಿರುವ ಪೇಜಾವರಶ್ರೀಯವರ ಆಶೀರ್ವಾದದೊಂದಿಗೆ ಅವರ ದಿವ್ಯ ಹಸ್ತದಿಂದ ಕೇವಲ 50 ಚಿಣ್ಣರೊಂದಿಗೆ ಸಾಂತಾಕ್ರೂಜ್ ಇಲ್ಲಿಯ ಪೇಜಾವರ ಮಠದಲ್ಲಿ ಉದ್ಘಾಟನೆಗೊಂಡ ಚಿಣ್ಣರಬಿಂಬ ಸುಮಾರು 7,000ಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿ 10,000ಕ್ಕಿಂತ ಮಿಕ್ಕಿ ಪಾಲಕ ಪೋಷಕರನ್ನು ಹೊಂದಿರುವ ಬೃಹತ್ ಸಂಸ್ಥೆಯಾಗಿ ರೂಪುಗೊಂಡಿದೆ. ಇಪ್ಪತ್ತು ವರ್ಷಗಳಲ್ಲಿ ಸಾವಿರಾರು ತುಳು ಕನ್ನಡಿಗ ಮಕ್ಕಳು ಕನ್ನಡ ಭಾಷೆ, ಸಂಸ್ಕೃತಿಯನ್ನು ಕಲಿತು ತಮ್ಮ ತಮ್ಮ ಜೀವನಕ್ಕೊಂದು ಹೊಸ ರೂಪವನ್ನು ಕಲ್ಪಿಸಿಕೊಂಡಿದ್ದಾರೆ. ಅದಕ್ಕೆ ಒಂದು ಉದಾಹರಣೆಯನ್ನು ಕೊಡುದಾದರೆ ಕರ್ನಾಟಕದಲ್ಲಿ ಸಿಇಟಿ ಪರೀಕ್ಷೆಯನ್ನು ಬರೆದು (ಕನ್ನಡ ಒಂದು ವಿಷಯ ಸೇರಿಸಿ) ಉತ್ತಮ ದರ್ಜೆಯಲ್ಲಿ ತೇರ್ಗಡೆ ಹೊಂದಿರುವುದು, ಇಂತಹ ಅಪೂರ್ವ ಸಂಸ್ಥೆಯ ಸ್ಥಾಪಕ ಕಾರ್ಯಾಧ್ಯಕ್ಷೆಯಾಗಿ ಪೂಜಾ ಪ್ರಕಾಶ್ ಭಂಡಾರಿ ಕಾರ್ಯನಿರ್ವಹಿಸಿದರೆ, ನೈನಾ ಪ್ರಕಾಶ್ ಭಂಡಾರಿ ಕಾರ್ಯಾಧ್ಯಕ್ಷೆಯಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಕಾಶ್ ಭಂಡಾರಿ ಅವರ ದಕ್ಷ ಮಾರ್ಗದರ್ಶನದಲ್ಲಿ ಮುಂಬೈ ತುಳು ಕನ್ನಡಿಗರ ಸಹಕಾರದಿಂದ ನೋಡು ನೋಡುತ್ತಿದ್ದಂತೆ ನಿರೀಕ್ಷೆಗೂ ಮೀರಿ ನಿಂತ ಸಂಸ್ಥೆಯಲ್ಲಿ 29 ಶಿಬಿರಗಳು ಹುಟ್ಟಿಕೊಂಡಿವೆ. ಪ್ರಸ್ತುತ ಅವುಗಳನ್ನು 6 ಪ್ರಾದೇಶಿಕ, 3 ವಲಯಗಳನ್ನಾಗಿಯೂ ವಿಭಜಿಸಿ ಎಲ್ಲಾ ಕಾರ್ಯಚಟುವಟಿಕೆಗಳು ಸುಸೂತ್ರವಾಗಿ ನಡೆಯುತ್ತಿದೆ.

    ಶಿಲೆಯೊಂದು ಶಿಲ್ಪವಾಗುವುದು ಶಿಲ್ಪಿಯ ಕೈಚಳಕದಿಂದ ಹಾಗೆ ಮುಗ್ಧ ಮಕ್ಕಳಿಗೆ ಯೋಗ್ಯ ಮಾರ್ಗದರ್ಶನ, ಯೋಗ್ಯ ಶಿಕ್ಷಣ, ಯೋಗ್ಯ ತರಬೇತಿ ದೊರೆತರೆ ನಮ್ಮ ಎಳೆಯರು ಯಾವ ಎತ್ತರಕ್ಕೆ ಏರಬಲ್ಲರು, ಅವರ ಪ್ರತಿಭೆ ಹೇಗೆ ಅರಳಬಹುದು, ಯಾವ ಸಾಧನೆಯ ಗುರಿ ಮುಟ್ಟಬಲ್ಲರು ಎಂಬುದನ್ನು ಚಿಣ್ಣರಬಿಂಬದ ಚಿಣ್ಣರನ್ನು ಕಂಡಾಗ ಅರಿಯಬಹುದು. 29 ಶಿಬಿರಗಳನ್ನು ಹೊಂದಿರುವ ಚಿಣ್ಣರಬಿಂಬ ಬೇರೆಬೇರೆ ರಂಗಗಳಲ್ಲಿ ಪ್ರಾವೀಣ್ಯತೆಯನ್ನು ಹೊಂದಿರುವ ಸಂಪನ್ಮೂಲ ವ್ಯಕ್ತಿಗಳನ್ನು ಪ್ರತಿ ಶಿಬಿರಕ್ಕೆ ಆಮಂತ್ರಿಸಿ ಅವರಿಂದ ಚಿಣ್ಣರಿಗೆ ಸೂಕ್ತ ರೀತಿಯ ತರಬೇತಿಯನ್ನು ಕೊಡಿಸಿ ಮಕ್ಕಳ ಜೀವನಕ್ಕೊಂದು ಭದ್ರ ಬುನಾದಿಯ ರೂಪಕೊಡುವ ಮಹತ್ಕಾರ್ಯ ನಡೆಯುತ್ತಿದೆ.

    ಇಪ್ಪತ್ತು ವಸಂತಗಳನ್ನು ಸಾಗಿ ಬಂದ ಚಿಣ್ಣರಬಿಂಬ: ಮಕ್ಕಳ ಕಾಳಜಿ, ಭವ್ಯ ರಾಷ್ಟ್ರ ನಿರ್ಮಾಣದ ಗುರಿ

    ಆಂಗ್ಲ ಮಾಧ್ಯಮದಲ್ಲಿ ವಿದ್ಯಾರ್ಜನೆ ಗೈಯುತ್ತಿರುವ ತುಳುಕನ್ನಡಿಗರ ಮಕ್ಕಳು ಚಿಣ್ಣರಬಿಂಬಕ್ಕೆ ಪ್ರವೇಶ ಪಡೆದ ನಂತರ ಇಲ್ಲಿ ದೊರೆಯುವ ತರಬೇತಿಯಿಂದಾಗಿ ನಿರರ್ಗಳವಾಗಿ ಕನ್ನಡದಲ್ಲಿ ಮಾತನಾಡಬಲ್ಲರು. ಕನ್ನಡವವನ್ನು ಸ್ಪಷ್ಟವಾಗಿ ಓದಬಲ್ಲರು, ಬರೆಯಬಲ್ಲರು, ಶಿಬಿರದಲ್ಲಿ ಯಕ್ಷಗಾನದ ನಾಟ್ಯಭ್ಯಾಸವನ್ನು ಪಡೆದು ತುಳು ಕನ್ನಡದಲ್ಲಿ ಯಕ್ಷಗಾನ ಪ್ರದರ್ಶಿಸಬಲ್ಲರು. ಇತ್ತೀಚಿನ ಯುವಪೀಳಿಗೆಯ ಕೆಲವು ವಿದ್ಯಾರ್ಥಿಗಳ ದಿಗಿಣಗಳನ್ನು ಪುಂಡು ವೇಷಗಳನ್ನು ಕಂಡಾಗ ವೃತ್ತಿಪರ ಕಲಾವಿದರೂ ಒಮ್ಮೆ ನಿಬ್ಬೆರಗಾಗಿ ನಿಂತು ನೋಡಲೇ ಬೇಕು. ತುಳುನಾಡಿನ ಆರಾಧನಾ ವಿಧಿ ವಿಧಾನಗಳನ್ನು ಯಾವುದೇ ರೀತಿಯ ಭಯವಿಲ್ಲದೆ ವೇದಿಕೆಗೆ ಹತ್ತಿ ಏಕಪಾತ್ರಾಭಿನಯವನ್ನು ಮಾಡಿ ತೋರಿಸಬಲ್ಲರು. ಕನ್ನಡ ತುಳುವಿನಲ್ಲಿ ಸಮೂಹಗೀತೆಯನ್ನು ಹಾಡಬಲ್ಲರು, ಇತೀಚೆಗೆ ಮಕ್ಕಳ ಪಾಲಕರೂ ಉತ್ತಮ ತರಬೇತಿಯನ್ನು ಪಡೆದು ತಾವೂ ಹಿಂದೆ ನಿಂತಿಲ್ಲ ಎಂಬುದನ್ನು ತೋರಿಸಿಕೊಟ್ಟ ಹಲವು ಉದಾಹರಣೆಗಳಿವೆ. ಮಕ್ಕಳೊಂದಿಗೆ ಅವರ ಪಾಲಕರೂ ಸ್ಪರ್ಧೆಯಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ಪಡೆದಿರುವುದೇ ಸಾಕ್ಷಿ. ಅಸ್ಖಲಿತ ಭಾಷಾಶುದ್ದಿಯೊಂದಿಗೆ ಮಾತನಾಡುವ ಚಿಣ್ಣರಬಿಂಬದ ಮಕ್ಕಳು ಮಹಾರಾಷ್ಟ್ರ ಮಾತ್ರವಲ್ಲದೇ ಕರ್ನಾಟಕದ ಯಾವ ಮೂಲೆಯಲ್ಲಿಯೂ ಅಲ್ಲಿಯ ಕನ್ನಡ ವಿದ್ಯಾರ್ಥಿಗಳೊಂದಿಗೆ ಪ್ರತಿಭಾ ಸ್ಪರ್ಧೆಗಿಳಿದು ಬಹುಮಾನವನ್ನು ಗೆಲ್ಲಬಲ್ಲರು. ಮಕ್ಕಳು ಕರ್ನಾಟಕ ದಾಸಶ್ರೇಷ್ಠರ ಭಜನೆಗಳನ್ನು ಲಯಬದ್ಧವಾಗಿ ಹಾಡಬಲ್ಲರು.

    ಮಕ್ಕಳ ಭಜನಾ ಶೈಲಿಯನ್ನು ಕಂಡ ಪೂಜ್ಯ ವೀರೇಂದ್ರ ಹೆಗ್ಗಡೆಯವರು ತಲೆದೂಗಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ಜೊತೆಗೆ ಮುಂಬೈಯಲ್ಲಿ ಚಿಣ್ಣರ ಉತ್ಸವದಲ್ಲಿ ಪಾಲ್ಗೊಂಡ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳ ಹಾಗು ಮಂತ್ರಿಗಳು ತದನಂತರ ವರ್ಷಂಪ್ರತಿ ಆಗಮಿಸುತ್ತಿದ್ದ ಅತಿಥಿಗಳೆಲ್ಲರೂ ಮೆಚ್ಚುಗೆಯ ಮಾತುಗಳನ್ನು ನುಡಿದ ಅದೆಷ್ಟೋ ಸನ್ನಿವೇಶಗಳು ನಮಗೆ ಲಭ್ಯ. ಸನಾತನ ಧರ್ಮ ಹಾಗೂ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾದ ಗುರುಹಿರಿಯರ ಪಾದಮುಟ್ಟಿ ನಮಸ್ಕರಿಸತಕ್ಕಂತಹ, ಅವರಿಂದ ಆಶೀರ್ವಾದ ಪಡೆವ ಭವ್ಯ ಪರಂಪರೆಯನ್ನು ಮತ್ತೆ ಕಾರ್ಯರೂಪಕ್ಕೆ ತಂದ ಶ್ರೇಯ ಚಿಣ್ಣಬಿಂಬಕ್ಕೆ ಸಲ್ಲಬೇಕು.

    ವಿವಿಧ ಪಾಂಡಿತ್ಯ ಹೊಂದಿರುವ ವಿದ್ವಾಂಸರ, ಬುದ್ಧಿಜೀವಿಗಳ ಮಾರ್ಗದರ್ಶನದಲ್ಲಿ ಮಕ್ಕಳಲ್ಲಿ ಅಡಕವಾಗಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಮಕ್ಕಳನ್ನು ಆಯಾಯ ರಂಗದಲ್ಲಿ ತರಬೇತುಗೊಳಿಸಿ, ಬಹುಮುಖ ಪ್ರತಿಭೆಯುಳ್ಳ ಮಕ್ಕಳ ವಿಕಸನಕ್ಕೆ ದಾರಿ ಮಾಡಿ ಕೊಡುವ ಕಾರಣದಿಂದ ನಗರ-ಉಪನಗರಗಳ ತುಳು-ಕನ್ನಡಿಗರ ನೆಚ್ಚಿನ ಸಂಸ್ಥೆಯಾಗಿ ಒಂದು ಕ್ರಾಂತಿಕಾರಕ ಸಂಸ್ಥೆಯಾಗಿ ಜನಮಾನಸದಲ್ಲಿ ಭದ್ರವಾಗಿ ನೆಲೆನಿಂತಿದೆ.

    ಆಂಗ್ಲ ಮಾಧ್ಯಮದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಅಂದರೆ ಯಾವುದೇ ಶುಲ್ಕವಿಲ್ಲದೆ ಕಲಿಯುವುದಕ್ಕೆ ಅವಕಾಶ ಮಾಡಿಕೊಟ್ಟು ಹೊರನಾಡು ಒಳನಾಡು ಅಷ್ಟೇಕೆ ಜಗತ್ತಿನಾದ್ಯಂತ ಸಿದ್ಧಿ ಪ್ರಸಿದ್ಧಿಯನ್ನು ಪಡೆಯುವಷ್ಟರ ಮಟ್ಟಕ್ಕೆ ಏರಿಸಿ ಚಿಣ್ಣರಬಿಂಬವನ್ನೇ ತನ್ನ ಬದುಕಿನ ಆದರ್ಶವನ್ನಾಗಿಸಿಕೊಂಡ ಪ್ರಕಾಶ್ ಭಂಡಾರಿಯವರಿಗೆ ಎಲ್ಲಾ ಶ್ರೇಯ ಸಲ್ಲಿಸಬೇಕು. ಹಗಲಿರುಳು ಸಂಸ್ಥೆಯ ಏಳಿಗೆಯ ಬಗ್ಗೆ ಚಿಂತಿಸುವ ಅವರು ಚಿಣ್ಣರಬಿಂಬದ ಸರ್ವ ಸದಸ್ಯರಿಗೆ ಪ್ರತಿದಿನ ಕರೆಗಳನ್ನು ಮಾಡುತ್ತಾ ರವಿವಾರ ನಡೆಯುವ ಕನ್ನಡ ತರಗತಿಗಳ ಬಗ್ಗೆ ನೇರ ಮಾಹಿತಿಗಳನ್ನು ಪಡೆಯುತ್ತಾ ಸಂದರ್ಭಕ್ಕೆ ಅನುಸಾರವಾಗಿ ಸೂಕ್ತ ಮಾಹಿತಿಗಳನ್ನು ನೀಡುವುದರ ಜೊತೆಗೆ ತರಗತಿ ನಡೆಯಲು ಸ್ಥಳಾವಕಾಶ ಮಾಡಿಕೊಟ್ಟ ಪ್ರತಿ ಸಂಸ್ಥೆಗಳ ಪದಾಧಿಕಾರಿಗಳನ್ನು ಕೂಡ ಸಂಪರ್ಕಿಸಿ ವಿಚಾರ ವಿನಿಮಯ ಮಾಡುವ ಪರಿ ಅವರಿಗೆ ತನ್ನ ಸಂಸ್ಥೆಯ ಬಗ್ಗೆ ಅದೆಷ್ಟು ಕಾಳಜಿ ಇದೆ ಎನ್ನುವುದನ್ನು ಸೂಚಿಸುತ್ತದೆ. ತನ್ನ ಜೊತೆಗೆ ತನ್ನ ಈರ್ವರು ಪುತ್ರಿಯರನ್ನು ಚಿಣ್ಣರಬಿಂಬದ ಸೇವೆಗಾಗಿ ಅಣಿಗೊಳಿಸಿದವರು ಇವರು.

    ಪ್ರಸ್ತುತ 29 ಕನ್ನಡ ತರಬೇತಿ ಶಿಬಿರಗಳು ಬೇರೆ ಬೇರೆ ಕಡೆಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಪೇಜಾವರ ಮಠ, ಥಾಣೆ ನವೋದಯ, ಉಮಾಮಹೇಶ್ವರಿ, ಎಸ್.ಎಮ್. ಶೆಟ್ಟಿ ಪೊವಾಯಿ, ಕಾಂದಿವಲಿ, ಮಲಾಡ್, ಮೀರಾರೋಡ್, ಭಯಂದರ್, ಪನ್ವೆಲ್, ನೆರುಲ್, ಘನ್ಸೋಲಿ, ಐರೋಲಿ, ಮಾಜಿವಾಡ ಆದಿಶಕ್ತಿ, ಗೋಡ್ಬಂದರ್, ಕಲ್ವಾ, ಡೊಂಬಿವಿಲಿ ಪೂರ್ವ ಡೊಂಬಿವಿಲಿ ಪಶ್ಚಿಮ, ಸೈನ್ ಕೋಲಿವಾಡ, ಭಾಂಡುಪ್ ಭಿವಂಡಿ, ಕಲ್ಯಾಣ್, ಮುಲುಂಡು, ವಿಕ್ರೋಲಿ, ಪಲವಾ ಇತ್ಯಾದಿ.

    ಕನ್ನಡ ಕಲಿಕಾ ತರಗತಿಯು ಪ್ರಸ್ತುತ ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಜಿ. ಎನ್. ಉಪಾಧ್ಯ ಹಾಗೂ ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಪೂರ್ಣಿಮಾ ಸುಧಾಕರ್ ಶೆಟ್ಟಿಯವರ ಮಾರ್ಗದರ್ಶನದೊಂದಿಗೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇವರೊಂದಿಗೆ ಸತೀಶ್ ಸಾಲಿಯಾನ್, ರವಿ ಹೆಗ್ಡೆ, ಶ್ರೀಮತಿ ಗೀತ ಹೇರಳ, ಭಾಸ್ಕರ್ ಶೆಟ್ಟಿ, ವಿಜಯ್ ಕೋಟ್ಯಾನ್ ರಮೇಶ್ ರೈ, ಶ್ರೀಮತಿ ವಿನಯ ಹರೀಶ್ ಶೆಟ್ಟಿ, ಶ್ರೀಮತಿ ಆಶಾಲತಾ ದಿನಕರ್ ಕೊಠಾರಿ, ಮಂಜುಳಾ ಶೆಟ್ಟಿ, ಸುಮಿತ್ರಾ ಗೋಪಾಲ್ ದೇವಾಡಿಗ, ವನಿತಾ ನೋಂಡಾ, ಕುಮುದಾ ಆಳ್ವ ಅಹರ್ನಿಶಿ ದುಡಿಯುತ್ತಿದ್ದಾರೆ. ಭಜನೆ ಶಿಕ್ಷಕರಾದ ಜ್ಯೋತಿ ಭಟ್, ಮಾಲಾ ಶೆಟ್ಟಿ, ಶ್ರದ್ಧಾ ಬಂಗೇರ, ಶೋಭಾ ಶೆಟ್ಟಿ, ಸುಚಿತ್ರಾ ಶೆಟ್ಟಿ, ಶಾಂತಾ ಆಚಾರ್ಯ ಇವರೆಲ್ಲರೂ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದರೆ, ಗೀತಾ ಭಟ್, ಅಜೆಕಾರು ಬಾಲಕೃಷ್ಣ ಶೆಟ್ಟಿ, ಕಟೀಲು ಸದಾನಂದ ಶೆಟ್ಟಿ ಹಾಗೂ ದಿ. ಪುರುಷೋತ್ತಮ ಪೂಂಜ ಇವರು ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡಿ ಸಹಕರಿಸಿದ್ದಾರೆ.

    ಆಧುನಿಕತೆಯ ಪ್ರಭಾವಕ್ಕೆ ಒಳಗಾಗಿ ಅಡ್ಡದಾರಿಯನ್ನು ಹಿಡಿಯುತ್ತಿರುವ ಯುವ ಜನಾಂಗಕ್ಕೆ ಭಾರತೀಯ ಸನಾತನ ಪದ್ದತಿ, ಸಂಸ್ಕಾರ- ಸಂಸ್ಕೃತಿಗಳ ಪಾಠ ಹೇಳುತ್ತಾ ಸೂಕ್ತ ಮಾರ್ಗದರ್ಶನ ನೀಡಿ ಭವ್ಯ ಭಾರತದ ಸತ್​ಪ್ರಜೆಗಳನ್ನಾಗಿ ಮಾಡುವ ಚಿಣ್ಣರಬಿಂಬಕ್ಕೆ ತುಳುಕನ್ನಡಿಗರ ಸಂಪೂರ್ಣ ಸಹಕಾರದ ಅಗತ್ಯವಿದೆ. ಪರಿಸರದ ತುಳು ಕನ್ನಡಿಗರ ಮಕ್ಕಳನ್ನು ಚಿಣ್ಣರಬಿಂಬ ಸಂಸ್ಥೆಗೆ ಸೇರುವಂತೆ ಪ್ರೇರಿಸಬೇಕು. ಮುಂಬೈಯ ಎಲ್ಲಾ ತುಳುಕನ್ನಡಿಗ ಸಂಸ್ಥೆಗಳು ಚಿಣ್ಣರಬಿಂಬದೊಂದಿಗೆ ಹೆಜ್ಜೆಗೆ ಹೆಜ್ಜೆ ಹಾಕುತ್ತಾ ಕನ್ನಡವನ್ನು ಉಳಿಸೋಣ, ಬೆಳೆಸೋಣ ನಮ್ಮ ಎಳೆಯವರನ್ನು ಸೂಕ್ತ ಮಾರ್ಗದರ್ಶನದೊಂದಿಗೆ ಸರಿದಾರಿಯಲ್ಲಿ ನಡೆಸುವ ದಿಸೆಯಲ್ಲಿ ಕಾರ್ಯಪ್ರವೃತ್ತರಾಗೋಣ. ಕೊನೆಯದಾಗಿ ಭವ್ಯ ರಾಷ್ಟ್ರ ನಿರ್ಮಾಣದ ಕನಸ್ಸುಕಂಡ ಚಿಣ್ಣರಬಿಂಬ ವಿಶ್ವಮಾನ್ಯವಾಗಲಿ ಎಂದು ಶುಭವನ್ನು ಹಾರೈಸುವೆ.

    ಲೇಖಕರು: ರವಿ ಎಸ್. ಹೆಗ್ಡೆ, ಹೆರ್ಮುಂಡೆ

    ಸಿಡಿಯಿತು ಸೂರ್ಯನ ಭಾಗ! ಅತ್ಯಪರೂಪದ ವಿದ್ಯಮಾನ, ವಿಜ್ಞಾನಿಗಳಿಂದ ಕಾರಣ ಶೋಧ

    ಅತಿಯಾದ ಸ್ಮಾರ್ಟ್​ಫೋನ್ ಬಳಕೆಯಿಂದ ದೃಷ್ಟಿ ಕಳೆದುಕೊಂಡ ಮಹಿಳೆ; ಏನಿದು ಸ್ಮಾರ್ಟ್​ಫೋನ್​ ವಿಷನ್ ಸಿಂಡ್ರೋಮ್?

    ದಿನಕ್ಕೆ ಎಷ್ಟು ಕಪ್​​​ ಕಾಫಿ ಕುಡಿಯಬಹುದು? ಕೆಫೀನ್​ ಸೇವಿಸುವುದರಿಂದ ಕೊಲೆಸ್ಟ್ರಾಲ್​​​ ಮಟ್ಟ ಹೆಚ್ಚುತ್ತದೆಯೇ? ಇಲ್ಲಿದೆ ಉತ್ತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts