More

    ಅತಿಯಾದ ಸ್ಮಾರ್ಟ್​ಫೋನ್ ಬಳಕೆಯಿಂದ ದೃಷ್ಟಿ ಕಳೆದುಕೊಂಡ ಮಹಿಳೆ; ಏನಿದು ಸ್ಮಾರ್ಟ್​ಫೋನ್​ ವಿಷನ್ ಸಿಂಡ್ರೋಮ್?

    ಬೆಂಗಳೂರು: ಅತಿಯಾದರೆ ಅಮೃತವೂ ವಿಷ ಎಂಬ ಗಾದೆಮಾತಿದೆ. ಅದು ಸ್ಮಾರ್ಟ್​ಫೋನ್​ ವಿಷಯದಲ್ಲೂ ನಿಜವಾಗಿದೆ. ಇಲ್ಲೊಬ್ಬಳು ಮಹಿಳೆ ಅತಿಯಾಗಿ ಸ್ಮಾರ್ಟ್​ಫೋನ್ ಬಳಕೆ ಮಾಡಿದ್ದರ ಪರಿಣಾಮವಾಗಿ ತನ್ನ ದೃಷ್ಟಿಯನ್ನು ಕಳೆದುಕೊಂಡಿದ್ದಾಳೆ. ಇದನ್ನು ಸ್ಮಾರ್ಟ್​ಫೋನ್ ವಿಷನ್ ಸಿಂಡ್ರೋಮ್ ಎಂದು ವೈದ್ಯರು ವ್ಯಾಖ್ಯಾನಿಸಿದ್ದಾರೆ.

    30 ವರ್ಷದ ಮಂಜು ಎಂಬ ಮಹಿಳೆ ಒಂದೂವರೆ ವರ್ಷದಿಂದ ದೃಷ್ಟಿದೋಷದಿಂದ ಬಳಲುತ್ತಿದ್ದು, ಆಕೆಯ ಈ ಸಮಸ್ಯೆಗೆ ಅತಿಯಾದ ಸ್ಮಾರ್ಟ್​ಫೋನ್ ಬಳಕೆಯೇ ಕಾರಣ ಎಂದು ಹೈದರಾಬಾದ್​ನ ವೈದ್ಯ ಡಾ.ಸುಧೀರ್​ಕುಮಾರ್ ಎಂಬವರು ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ.

    ಮಂಜು ಕೆಲವು ಕ್ಷಣಗಳ ಮಟ್ಟಿಗೆ ಏನೂ ಕಾಣದಂಥ ಪರಿಸ್ಥಿತಿ ಅನುಭವಿಸುತ್ತಿದ್ದಳು. ರಾತ್ರಿ ಆಕೆ ವಾಷ್​​ರೂಮ್​ಗೆ ಹೋಗಲು ಎದ್ದಾಗ ಸಾಮಾನ್ಯವಾಗಿ ಈ ಸಮಸ್ಯೆ ಉಂಟಾಗುತ್ತಿತ್ತು. ಹೀಗಾಗಿ ಆಕೆ ಕಣ್ಣಿನ ಡಾಕ್ಟರೊಬ್ಬರನ್ನು ನೋಡಿ ಪರೀಕ್ಷೆ ಮಾಡಿಸಿಕೊಂಡಾಗ ಎಲ್ಲ ನಾರ್ಮಲ್ ಎಂದು ಕಂಡುಬಂದಿತ್ತು. ಅದಾಗ್ಯೂ ಆಕೆಯ ಸಮಸ್ಯೆ ಪರಿಹಾರವಾಗಿರಲಿಲ್ಲ.

    ನಂತರ ಆಕೆಯನ್ನು ನಾನು ಪರೀಕ್ಷಿಸಿದೆ. ಆಕೆ ದಿನಾ ರಾತ್ರಿ ಲೈಟ್ ಆಫ್ ಮಾಡಿಕೊಂಡು ಸುಮಾರು 2 ಗಂಟೆಗಳ ಕಾಲ ಸ್ಮಾರ್ಟ್​ಫೋನ್ ನೋಡುತ್ತಿರುವುದು ತಿಳಿದುಬಂತು. ಆಗ ಆಕೆ ಸ್ಮಾರ್ಟ್​ಫೋನ್ ವಿಷನ್ ಸಿಂಡ್ರೋಮ್​ನಿಂದ ಬಳಲುತ್ತಿರುವುದು ಎಂಬುದು ನನಗೆ ಖಚಿತವಾಯಿತು ಎಂದು ವೈದ್ಯರು ಹೇಳಿಕೊಂಡಿದ್ದಾರೆ.

    ಆಕೆ ಚಿಕಿತ್ಸೆಯನ್ನು ನಿರೀಕ್ಷಿಸಿದರೂ ನಾನು ಆಕೆಗೆ ಯಾವುದೇ ಔಷಧ ಬರೆದು ಕೊಡಲಿಲ್ಲ, ಚಿಕಿತ್ಸೆಯನ್ನೂ ನೀಡಲಿಲ್ಲ. ಈ ಸಮಸ್ಯೆಗೆ ಕಾರಣ ಏನು ಎಂಬುದನ್ನು ನಾನು ಆಕೆಗೆ ಮನದಟ್ಟು ಮಾಡಿದ್ದಲ್ಲದೆ, ಸ್ಮಾರ್ಟ್​ಫೋನ್ ಬಳಕೆ ಕಡಿಮೆ ಮಾಡಲು ಸೂಚಿಸಿದೆ. ಕಡಿಮೆ ಅಲ್ಲ, ಫೋನ್​ ನೋಡುವುದನ್ನೇ ನಿಲ್ಲಿಸುತ್ತೇನೆ, ಅತಿ ಅಗತ್ಯ ಅಂತ ಅನಿಸದ ಹೊರತು ಸ್ಮಾರ್ಟ್​ಫೋನ್​ ನೋಡಲ್ಲ ಎಂದು ಆಕೆ ತಿಳಿಸಿದಳು. ಹೀಗೆ ಒಂದು ತಿಂಗಳ ಅಭ್ಯಾಸದ ಬಳಿಕ ಈಗ ಆಕೆ ಸರಿಹೋಗಿದ್ದಾಳೆ, ಒಂದೂವರೆ ವರ್ಷದಿಂದ ಬಳಲುತ್ತಿದ್ದ ದೃಷ್ಟಿದೋಷವೂ ನಿವಾರಣೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಅತಿಯಾದ ಸ್ಮಾರ್ಟ್​ಫೋನ್ ಬಳಕೆಯಿಂದ ಕೆಲವರು ದೃಷ್ಟಿದೋಷದ ಸಮಸ್ಯೆಗೆ ಒಳಗಾಗುತ್ತಿರುವುದು ಅಧ್ಯಯನಗಳಿಂದ ಕಂಡುಬಂದಿದೆ. ಇದನ್ನು ಸ್ಮಾರ್ಟ್​ಫೋನ್ ವಿಷನ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಅದರಲ್ಲೂ ರಾತ್ರಿ ಹೊತ್ತು ಲೈಟ್ ಆಫ್ ಮಾಡಿಕೊಂಡು ಸ್ಮಾರ್ಟ್​ಫೋನ್ ನೋಡುವುದು ಅನಾರೋಗ್ಯಕಾರಿ. ತುಂಬಾ ಹೊತ್ತು ಡಿಜಿಟಲ್ ಡಿವೈಸ್ ನೋಡುವಂಥವರು ಪ್ರತಿ 20 ನಿಮಿಷಕ್ಕೊಮ್ಮೆ 20 ಸೆಕೆಂಡುಗಳ ವಿರಾಮ ಪಡೆದು, 20 ಅಡಿ ದೂರದ ವಸ್ತುವನ್ನು ನೋಡುವುದು ಉತ್ತಮ ಪರಿಹಾರ ಎಂದು ವೈದ್ಯರು ತಿಳಿಸಿದ್ದಾರೆ.

    ಭೀಕರ ಅಪಘಾತ: ಕೆಟ್ಟು ನಿಂತಿದ್ದ ಕ್ಯಾಂಟರ್​ಗೆ ಬುಲೆಟ್ ಡಿಕ್ಕಿ, ಯುವಕ-ಯುವತಿ ಸ್ಥಳದಲ್ಲೇ ಸಾವು

    ತನ್ನ ನೆಚ್ಚಿನ ನಾಯಕ ಸಿಎಂ ಆಗಲೆಂದು 25 ವರ್ಷದಿಂದ ಗಡ್ಡ ಬಿಟ್ಟ ಅಭಿಮಾನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts