

Wang Yi: ಚೀನಾ ಮತ್ತು ಭಾರತ ನಡುವಿನ ದೀರ್ಘಕಾಲದ ಗಡಿ ಸಮಸ್ಯೆಯ ಕುರಿತು ವಿಶೇಷ ಪ್ರತಿನಿಧಿಗಳ 24 ನೇ ಸುತ್ತಿನ ಮಾತುಕತೆಯಲ್ಲಿ ಭಾಗವಹಿಸಲು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಆಗಸ್ಟ್ 18 ರಂದು ಭಾರತಕ್ಕೆ ಆಗಮಿಸಲಿದ್ದಾರೆ.
2020 ಪೂರ್ವ ಲಡಾಖ್ನಲ್ಲಿ ಭಾರತ ಮತ್ತು ಚೀನಾ ಗಡಿ ಬಿಕ್ಕಟ್ಟಿನ ನಂತರ ಸಂಬಂಧಗಳನ್ನು ಸ್ಥಿರಗೊಳಿಸಲು ಈ ಭೇಟಿ ಮಹತ್ವದ್ದಾಗಿದೆ.ಅಲ್ಲದೆ, ಈ ತಿಂಗಳ ಕೊನೆಯಲ್ಲಿ ಟಿಯಾಂಜಿನ್ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಚೀನಾಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಈ ಭೇಟಿ ಪ್ರಮುಖ ಪಾತ್ರ ವಹಿಸಲಿದೆ.
ಭಾರತದ ವಿದೇಶಾಂಗ ಸಚಿವಾಲಯದ (MEA) ಪ್ರಕಾರ, ಚೀನಾ ಕಮ್ಯುನಿಸ್ಟ್ ಪಕ್ಷದ (CPC) ಕೇಂದ್ರ ಸಮಿತಿಯ ರಾಜಕೀಯ ಬ್ಯೂರೋದ ಸದಸ್ಯರೂ ಮತ್ತು ಗಡಿ ಪ್ರಶ್ನೆಯಲ್ಲಿ ಚೀನಾದ ವಿಶೇಷ ಪ್ರತಿನಿಧಿಯೂ ಆಗಿರುವ ವಾಂಗ್ ಯಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಈ ಭೇಟಿಯ ಸಮಯದಲ್ಲಿ ವಾಂಗ್ ಯಿ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಎನ್ಎಸ್ಎ ಅಜಿತ್ ದೋವಲ್ ಅವರ ಆಹ್ವಾನದ ಮೇರೆಗೆ, ಚೀನಾ ಕಮ್ಯುನಿಸ್ಟ್ ಪಕ್ಷದ ಪಾಲಿಟ್ಬ್ಯೂರೋ ಸದಸ್ಯ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಆಗಸ್ಟ್ 18-19, ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್ ಅವರು ವಾಂಗ್ ಯಿ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ ಎಂದು MEA ತಿಳಿಸಿದೆ.
ಈ ಭೇಟಿಯ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಚೀನಾದ ರಾಯಭಾರಿ ಕ್ಸು ಫೀಹಾಂಗ್, ಆಗಸ್ಟ್ 18 ರಿಂದ 20 ರವರೆಗೆ, CPC ಕೇಂದ್ರ ಸಮಿತಿಯ ರಾಜಕೀಯ ಬ್ಯೂರೋ ಸದಸ್ಯ, ವಿದೇಶಾಂಗ ಸಚಿವ ವಾಂಗ್ ಯಿ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಭಾರತದ ಆಹ್ವಾನದ ಮೇರೆಗೆ ಚೀನಾ ಮತ್ತು ಭಾರತದ ವಿಶೇಷ ಪ್ರತಿನಿಧಿಗಳ ನಡುವೆ ಗಡಿ ಪ್ರಶ್ನೆಯ ಕುರಿತು 24 ನೇ ಸುತ್ತಿನ ಮಾತುಕತೆ ನಡೆಸಲಿದ್ದಾರೆ ಎಂದು ಬರೆದುಕೊಂಡಿದ್ದಾರೆ.
2020 ರಲ್ಲಿ ಗಡಿ ಬಿಕ್ಕಟ್ಟು ಉಂಟಾದ ನಂತರ ನಡೆಯುತ್ತಿರುವ ಮಿಲಿಟರಿ ಮತ್ತು ರಾಜತಾಂತ್ರಿಕ ಸಂವಾದದ ಹಿನ್ನೆಲೆಯಲ್ಲಿ ಈ ಸುತ್ತಿನ ಮಾತುಕತೆಗಳು ಮಹತ್ವದ್ದಾಗಿವೆ ಎಂದು ಪರಿಗಣಿಸಲಾಗಿದೆ.
ಇತ್ತೀಚಿನ ತಿಂಗಳುಗಳಲ್ಲಿ, ಎರಡೂ ದೇಶಗಳು ಉದ್ವಿಗ್ನತೆಯನ್ನು ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಂಡಿವೆ. ಕಳೆದ ವರ್ಷ, ಲಡಾಖ್ನಲ್ಲಿ ಘರ್ಷಣೆಯನ್ನು ಕಡಿಮೆ ಮಾಡಲು ಭಾರತ ಮತ್ತು ಚೀನಾ ಒಪ್ಪಂದಕ್ಕೆ ಬಂದವು. ಈ ವರ್ಷದ ಆರಂಭದಲ್ಲಿ, ಚೀನಾ ಕೈಲಾಸ-ಮಾನಸ ಸರೋವರ ಯಾತ್ರೆಯನ್ನು ಪುನರಾರಂಭಿಸಿತು. ಭಾರತವು ಚೀನಾದ ಪ್ರವಾಸಿಗರಿಗೆ ವೀಸಾ ನೀಡುವುದನ್ನು ಪುನರಾರಂಭಿಸಿತು.(ಏಜೆನ್ಸೀಸ್)