stock market: ಚೀನಾದಿಂದ ಹಿಂದೆ ಸರಿದ ವಿದೇಶಿ ಹೂಡಿಕೆದಾರರು.. ಷೇರು ಮಾರುಕಟ್ಟೆ ಕುಸಿತ! ಭಾರತಕ್ಕೆ ಲಾಭವಾಗುತ್ತದೆಯೇ?

Stock Market
Published on

ಮುಂಬೈ: ಚೀನಾ ಆರ್ಥಿಕ ಉತ್ತೇಜನ ಪ್ಯಾಕೇಜ್ ಘೋಷಿಸಿದ ನಂತರ ಅಲ್ಲಿನ ಷೇರು ಮಾರುಕಟ್ಟೆ(stock market ) ಕಳೆದ ತಿಂಗಳಿಂದ ಶೇ.20ರಷ್ಟು ಏರಿಕೆ ಕಂಡಿತು. ವಿಶ್ವದ ಹೂಡಿಕೆದಾರರು ಮತ್ತು ಮ್ಯೂಚುವಲ್ ಫಂಡ್ ಹೌಸ್‌ಗಳು ಚೀನಾ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಲು ಉತ್ಸುಕರಾದರು. ಆದರೆ ಈಗ ಅದರ ಆಟ ಬಯಲಾಗಿದೆ. ಕೆಲವು ದಿನಗಳಿಂದ ಷೇರು ಮಾರುಕಟ್ಟೆ ನಿರಂತರವಾಗಿ ಕುಸಿಯುತ್ತಿದೆ.

ಚೀನಾದ ಹಣಕಾಸು ಪ್ಯಾಕೇಜ್ ಹೂಡಿಕೆದಾರರ ನಿರೀಕ್ಷೆಗಳನ್ನು ಪೂರೈಸಲಿಲ್ಲ. ವಿದೇಶಿ ಹೂಡಿಕೆದಾರರು ಡ್ರ್ಯಾಗನ್​ ದೇಶದ ಸಹವಾಸ ಸಾಕು ಎಂದು ಭಾವಿಸಿದಂತಿದೆ. ಕಳೆದ ಐದಾರು ದಿನಗಳಲ್ಲಿ ಪ್ರಮುಖ ಸೂಚ್ಯಂಕ - ಶಾಂಘೈ ಕಾಂಪೋಸಿಟ್ ಶೇಕಡಾ 7 ರಷ್ಟು ಕುಸಿದಿದೆ.

ಚೀನಾ ದೀರ್ಘಕಾಲದ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿದೆ. ರಿಯಲ್ ಎಸ್ಟೇಟ್ ನಿಂತ ನೀರಾಗಿದೆ. ಷೇರು ಮಾರುಕಟ್ಟೆಯ ಕಾರ್ಯಕ್ಷಮತೆ ಸಾಕಷ್ಟು ದುರ್ಬಲವಾಗಿದೆ. ಕಳೆದ ಒಂದು ವರ್ಷದಲ್ಲಿ ಶಾಂಘೈ ಕಾಂಪೋಸಿಟ್ ಕೇವಲ ಶೇ.4ರಷ್ಟು ರಿಟರ್ನ್ ನೀಡಿದೆ. ಇದೇ ಸಮಯದಲ್ಲಿ ಭಾರತದ ನಿಫ್ಟಿ 50 ಹೆಚ್ಚಾಗಿ 27 ಪ್ರತಿಶತದಷ್ಟು ಬಲವಾದ ಲಾಭವನ್ನು ನೀಡಿದೆ.ಈ ಕಾರಣದಿಂದಾಗಿ ಭಾರತೀಯ ಷೇರು ಮಾರುಕಟ್ಟೆಯ ಮೌಲ್ಯವು ಸಾಕಷ್ಟು ಹೆಚ್ಚಾಗಿದೆ.

ಚೀನಾದ ಕ್ಸಿ ಜಿನ್‌ಪಿಂಗ್ ಅವರು ರಿಯಲ್ ಎಸ್ಟೇಟ್ ಕ್ಷೇತ್ರವನ್ನು ಪುನರುಜ್ಜೀವನಗೊಳಿಸಲು ಆರ್ಥಿಕ ಉತ್ತೇಜಕ ಪ್ಯಾಕೇಜ್ ಘೋಷಿಸಿದರು. ಈ ಕಾರಣದಿಂದಾಗಿ ವಿದೇಶಿ ಹೂಡಿಕೆದಾರರು ಭಾರತೀಯ ಮಾರುಕಟ್ಟೆಯಲ್ಲಿ ಷೇರು ಮಾರಾಟ ಮಾಡಲು ಪ್ರಾರಂಭಿಸಿದರು ಮತ್ತು ಚೀನಾದತ್ತ ಸಾಗಿದರು.

ಹೀಗಾಗಿಯೇ ಚೀನಾದ ಷೇರು ಮಾರುಕಟ್ಟೆಯಲ್ಲಿ ಬಲವಾದ ಏರಿಕೆ ಕಂಡುಬಂದಿತ್ತು. ಆದರೆ ಅದು ಹೆಚ್ಚು ಕಾಲ ನಂಬಿಕೆ ಉಳಿಸಿಕೊಳ್ಳಲಿಲ್ಲ.

ವಿದೇಶಿ ಹೂಡಿಕೆದಾರರು ಚೀನಾದ ಹಣಕಾಸು ಸಚಿವರು 283 ಶತಕೋಟಿ ಡಾಲರ್​ ಹೊಸ ಆರ್ಥಿಕ ಪ್ರೋತ್ಸಾಹ ಘೋಷಿಸಬಹುದು ಎಂದು ಭಾವಿಸಿದ್ದರು. ಆದರೆ ಯಾವುದೇ ಮೊತ್ತವನ್ನು ನಮೂದಿಸದ ಕಾರಣ ಹೂಡಿಕೆದಾರರು ನಿರಾಸೆಗೊಂಡರು. ಇದು ಆರ್ಥಿಕತೆಯು ಶೀಘ್ರದಲ್ಲೇ ಪುನಶ್ಚೇತನಗೊಳ್ಳುತ್ತದೆ ಎಂಬ ಚೀನಾದ ಭರವಸೆ ಸಹ ಘಾಸಿಗೊಂಡಿದೆ.

ಇದೇ ಸಮಯದಲ್ಲಿ ಭಾರತೀಯ ಷೇರು ಮಾರುಕಟ್ಟೆಯ ಎಂಎಸ್​ಸಿಐ ಸೂಚ್ಯಂಕ ಕ್ರಮೇಣ ಹೆಚ್ಚುತ್ತಿದೆ. ಈ ಸೂಚ್ಯಂಕದಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಇದರ ಆಧಾರದ ಮೇಲೆ ಎಲ್ಲಾ ಜಾಗತಿಕ ನಿಷ್ಕ್ರಿಯ ನಿಧಿಗಳು ಭಾರತದಲ್ಲಿ ಹಣ ಹೂಡಿಕೆ ಮಾಡುತ್ತಿದ್ದು, ಇತ್ತೀಚಿನ ಕುಸಿತದ ನಂತರ ಭಾರತದ ಮೌಲ್ಯಮಾಪನವು ಸ್ವಲ್ಪಮಟ್ಟಿಗೆ ಸುಧಾರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net